»   »  ವಿದೇಶದಿಂದ ವಿದೇಶಕ್ಕೆ ಚಂಕಾಯ್ಸಿ ಚಿಂದಿ ಉಡಾಯ್ಸಿ'

ವಿದೇಶದಿಂದ ವಿದೇಶಕ್ಕೆ ಚಂಕಾಯ್ಸಿ ಚಿಂದಿ ಉಡಾಯ್ಸಿ'

Subscribe to Filmibeat Kannada
'ನಿತ್ಯ ಜೀವನದ ಜಂಜಾಟದಲ್ಲಿ ಸಿಕ್ಕಿ ಹೈರಾಣವಾಗಿರುವ ಮನುಷ್ಯ ಸಿನೆಮಾಗೆ ಬಂದು ತನ್ನ ಕಷ್ಟಗಳನೆಲ್ಲಾ ಆ ಹೊತ್ತಿಗಾದರೂ ಮರೆತು ಸಂತೋಷಪಡಬೇಕಾದರೆ ಕನ್ನಡದಲ್ಲಿ ಹಾಸ್ಯ ಚಿತ್ರಗಳ ನಿರ್ಮಾಣ ಹೆಚ್ಚಾಗಿ ಆಗಬೇಕು' ಎಂದು ನಟ ಕೋಮಲ್ ಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಪ್ರಸ್ತುತ ಅವರ ಅಭಿನಯದಲ್ಲಿ ನಿರ್ಮಾಣವಾಗುತ್ತಿರುವ 'ಚಂಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದಲ್ಲಿ ಹಾಸ್ಯವೇ ಪ್ರಧಾನವಾಗಿದ್ದು ನೋಡುಗರಿಗೆ ಮುದ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ದತ್ತಾತ್ರೇಯ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಅನಸೂಯ ಹಾಗೂ ಜೀವನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಲೇಶಿಯಾದಲ್ಲಿ 16 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಈ ಭಾಗದ ಚಿತ್ರೀಕರಣದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ರಚಿಸಿರುವ ಬೇಜನಾಗಿ ಪ್ರೀತಿಸು ಬೇಜಾರಿಲ್ಲದೆ ಪ್ರೀತಿಸು - ಪ್ರೀತಿಸಲು ಮರುಳಾದರೆ ಈ ದಿನ ಅದಕ್ಕೆ ನೀನೆ ಕಾರಣ' ಎಂಬ ಗೀತೆಯನ್ನು ಕೋಮಲ್ ಹಾಗೂ ನಿಧಿ ಸುಬ್ಬಯ್ಯ ಅಭಿನಯದಲ್ಲಿ ಲಂಕಾವಿ ಎಂಬ ಸ್ಥಳದಲ್ಲಿ, ತ್ರಿಭುವನ್ ನೃತ್ಯ ನಿರ್ದೇಶನದಲ್ಲಿ ಸೆರೆ ಹಿಡಿಯಲಾಯಿತು. ಲಂಕಾವಿ ಸುಂದರ ದ್ವೀಪ. ಈ ರಮಣೀಯ ಸ್ಥಳ ತಲುಪಲು ಮಲೇಶಿಯಾದಿಂದ 2ಗಂಟೆಗಳ ಕಾಲ ಜಲಮಾರ್ಗದಲ್ಲಿ ಸಂಚರಿಸಬೇಕು.

ಈ ಗೀತೆಯಷ್ಟೇ ಅಲ್ಲದೇ ಚಿತ್ರದ ಕ್ಲೈಮ್ಯಾಕ್ಸ್ ಭಾಗವಾದ ಬೋಟ್ ಚೇಸಿಂಗ್ ಹಾಗೂ ಡಿಫ಼ರೆಂಟ್ ಡ್ಯಾನಿ ಸಾಹಸ ಸಂಯೋಜನೆಯಲ್ಲಿ ಕೋಮಲ್, ನಿಧಿ ಸುಬ್ಬಯ್ಯ ಅಭಿನಯಿಸಿದ ಒಂದು ಕಾಮಿಡಿ ಫೈಟ್ ಮಲೇಶಿಯಾದಲ್ಲಿ ಚಿತ್ರೀಕರಣಗೊಂಡವು. ಅಲ್ಲಿಗೆ ಪ್ರಯಾಣ ಬೆಳಿಸಿದ 36 ಜನರ ತಂಡ ಈಗ ಸ್ವದೇಶಕ್ಕೆ ಮರಳಿದ್ದು ಈ ವಾರದಲ್ಲಿ ಹೆಚ್ಚಿನ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ಗೆ ತೆರಳಲಿದೆ. ಚಿತ್ರದ 40% ಚಿತ್ರೀಕರಣ ಮಲೇಶಿಯಾದಲ್ಲೇ ನಡೆದಿದೆ ಎಂದು ನಿರ್ಮಾಪಕರು ತಿಳಿಸಿದರೆ, ಭಾರತ ಸೇರಿ ಮೂರು ದೇಶಗಳಲ್ಲಿ ಚಿತ್ರೀಕರಣಗೊಂಡ ಏಕೈಕ ಹಾಸ್ಯ ಚಿತ್ರ ಎಂಬ ಹೆಗ್ಗಳಿಕೆ ನಮ್ಮ ಚಿತ್ರಕ್ಕಿದೆ ಎಂದು ನಿರ್ದೇಶಕ ಎ.ಆರ್.ಬಾಬು ಹೇಳುತ್ತಾರೆ.

'ಮಸ್ತ್ ಮಜಾ ಮಾಡಿ ಚಿತ್ರಕ್ಕೆ ಸಂಗೀತ ನೀಡಿದ ಬಾಲಾಜಿ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ. ಅಶೋಕ್ ಕಶ್ಯಪ್ ಕ್ಯಾಮೆರಾ, ಪ್ರಕಾಶ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ, ಶ್ರೀಧರ್ ಹಾಗೂ ವಿದ್ಯಾ ನೃತ್ಯ, ಅನಿಲ್ ನಿರ್ಮಾಣ ನಿರ್ವಹಣೆಯಿರುವ ಈ ನೂತನ ಚಿತ್ರದ ತಾರಾಬಳಗದಲ್ಲಿ ಕೋಮಲ್ ಕುಮಾರ್, ರಾಹುಲ್, ಕಿರಣ್, ಗಿರಿ ದಿನೇಶ್, ನೇತಾನಿಯಾ, ನಿಧಿ ಸುಬ್ಬಯ್ಯ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಹೊನ್ನವಳ್ಳಿ ಕೃಷ್ಣ, ಪ್ರಮಿಳಾ ಜೋಷಾಯಿ, ಮಾರಿಮುತ್ತು, ಶ್ರೀನಿವಾಸ ಗೌಡ, ನಂದ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿ ಸುದ್ದಿ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada