»   » ನಾನ್ ಕಡವುಲ್ ರೀಮೇಕ್ ಅಲ್ಲವಯ್ಯ ಜೋಗಯ್ಯ

ನಾನ್ ಕಡವುಲ್ ರೀಮೇಕ್ ಅಲ್ಲವಯ್ಯ ಜೋಗಯ್ಯ

Posted By:
Subscribe to Filmibeat Kannada

'ಜೋಗಯ್ಯ'ನ ಹೊಸ ಅವರತಾರ ನೋಡಿದವರು ಇದು ತಮಿಳಿನ 'ನಾನ್ ಕಡವುಲ್' ಚಿತ್ರದ ರೀಮೇಕ್ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಚಿತ್ರದ ನಿರ್ದೇಶಕ ಪ್ರೇಮ್ ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು ಇದು ಯಾವುದೇ ಚಿತ್ರದ ರೀಮೇಕ್ ಅಲ್ಲ. 'ಜೋಗಯ್ಯ' ಅಪ್ಪಟ ಸ್ವಮೇಕ್ ಚಿತ್ರ ಎಂದಿದ್ದಾರೆ.

ಚಿತ್ರಕ್ಕೆ ಸಂಬಂಧಿಸ ಸ್ಥಿರ ಚಿತ್ರಗಳನ್ನು ಈಗಾಗಲೆ ಬಿಡುಗಡೆ ಮಾಡಲಾಗಿದೆ. ಶಿವರಾಜ್ ಕುಮಾರ್ ಅವರ ವಿಭಿನ್ನ ಗೆಟಪ್ ನೋಡಿದವರು ಇದು ತಮಿಳಿನ 'ನಾನ್ ಕಡವುಲ್' ಚಿತ್ರದ ರೀಮೇಕ್ ಎಂದಿದ್ದರು. ಆ ಚಿತ್ರದಲ್ಲಿ ಆರ್ಯನ್ ಅವರಂತೆಯೇ ಶಿವಣ್ಣನ ಗೆಟಪ್ ಇದೆ ಎಂಬುದು ಅವರ ಅನುಮಾನಕ್ಕೆ ಕಾರಣವಾಗಿತ್ತು.

ಅಘೋರಿಯ ಗೆಟಪ್ ನಲ್ಲಿರುವ ಚಿತ್ರದ ಸ್ಥಿರ ಚಿತ್ರಗಳನ್ನು ಬಿಡುಗಡೆ ಮಾಡಿದ್ದೇನೆ. 'ಜೋಗಯ್ಯ' ಚಿತ್ರದ ಬಗ್ಗೆ ಪ್ರೇಕ್ಷಕರು ಊಹಿಸಲಿ ಎಂಬ ಉದ್ದೇಶ ನನ್ನದಾಗಿತ್ತು. ಹಾಗಾಗಿ ಆ ರೀತಿಯ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಆದರೆ ಈ ಗೆಟಪ್ಪನ್ನು ಕನ್ನಡ ಚಿತ್ರದಲ್ಲಿ ಇಲ್ಲಿಯವರೆಗೂ ಬಳಸಿಲ್ಲ. ಪ್ರೇಕ್ಷಕರ ಕುತೂಹಲ ಹೆಚ್ಚಲಿ ಎಂಬುದು ನಮ್ಮ ಉದ್ದೇಶವಾಗಿತ್ತು ಎನ್ನುತ್ತಾರೆ ಪ್ರೇಮ್.

ಇದು ಖಂಡಿತ ನಾನ್ ಕಡವುಲ್ ಚಿತ್ರ ರೀಮೇಕ್ ಅಲ್ಲ. ಚಿತ್ರದಲ್ಲಿ ಇದೊಂದೇ ಗೆಟಪ್ ಅಲ್ಲ ಇನ್ನೂ ಎಂಟು ವಿಭಿನ್ನ ಗೆಟಪ್ ಗಳಲ್ಲಿ ಶಿವಣ್ಣ ಚಿತ್ರದಲ್ಲಿ ಕಾಣಿಸಲಿದ್ದಾರೆ. ಮುಹೂರ್ತಕ್ಕೂ ಮುನ್ನ ಈ ಸ್ಥಿರ ಚಿತ್ರಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಪ್ರೇಮ್ ವಿವರ ನೀಡಿದ್ದಾರೆ. ಜೋಗಯ್ಯನ ಮುಹೂರ್ತ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಪ್ರೇಮ್ ತಿಳಿಸಿದ್ದಾರೆ.

ಜೋಗಯ್ಯನ ಮುಹೂರ್ತದ ಪಾಸ್ ಗಳನ್ನು ಈಗಾಗಲೆ ವಿತರಿಸಲಾಗಿದೆ. ಶಿವಣ್ಣನ 100ನೇ ಚಿತ್ರ ಇದಾದ ಕಾರಣ ಮುಹೂರ್ತಕ್ಕೆ ಬೇರೆ ಬೇರೆ ಚಿತ್ರರಂಗದ ಜನಪ್ರಿಯ ತಾರೆಗಳು ಆಗಮಿಸಲಿದ್ದಾರೆ. ಒಟ್ಟಿನಲ್ಲಿ ಪ್ರೇಮ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಇದಾಗಲಿದೆ ಎಂಬ ಮಾತುಗಳು ಕೇಳಿಬಂದಿದೆ. ಜೋಗಿ ಚಿತ್ರದ ಬಹುತೇಕ ತಾರಾಗಣ ಚಿತ್ರದಲ್ಲಿರುತ್ತದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada