»   »  'ರಾಜ್'ಗಾಗಿ ಬೃಹತ್ ರಾಜಕುಮಾರ್ ಪ್ರತಿಮೆ!

'ರಾಜ್'ಗಾಗಿ ಬೃಹತ್ ರಾಜಕುಮಾರ್ ಪ್ರತಿಮೆ!

Subscribe to Filmibeat Kannada

ಪುನೀತ್ ರಾಜಕುಮಾರ್ ಪ್ಲಸ್ ಪ್ರೇಮ್ ಕಾಂಬಿನೇಷನ್‌ನ ರಾಜ್- ದಿ ಶೋಮ್ಯಾನ್ ಚಿತ್ರದ ಬಿಡುಗಡೆ ದಿನ ಸನ್ನಿಹಿತವಾಗುತ್ತಿರುವಂತೆ ಚಿತ್ರದ ಪ್ರಚಾರ ತಂತ್ರಗಳೂ ಹೆಚ್ಚುತ್ತಿವೆ. ಈಚಿನ ಹೊಸ ತಂತ್ರ- ಸಿನಿಮಾ ಬಿಡುಗಡೆಯಾಗುತ್ತಿರುವ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ವರನಟ ರಾಜಕುಮಾರ್ ಪ್ರತಿಮೆಯ ಅನಾವರಣ.

ರಾಜಕುಮಾರ್‌ಗೂ ರಾಜ್ ಚಿತ್ರಕ್ಕೂ ಎತ್ತಣ ನಂಟು? ಸಂಬಂಧ ಇರುವುದು ಭಾವನೆಗಳಲ್ಲಿ ಎನ್ನುವುದು ನಿರ್ದೇಶಕ ಪ್ರೇಮ್ ಸ್ಪಷ್ಟನೆ. ಈ ಪ್ರತಿಮೆ ವರನಟನಿಗೆ ನಮ್ಮ ಚಿತ್ರತಂಡ ಸಲ್ಲಿಸುತ್ತಿರುವ ಗೌರವ ಎನ್ನುವುದು ಅಡಿ ಟಿಪ್ಪಣಿ. ಪ್ರಚಾರದ ಮಾತಿರಲಿ, ಪ್ರತಿಮೆ ವಿಷಯಕ್ಕೆ ಬನ್ನಿ. ಬರೋಬ್ಬರಿ ಐವತ್ತೆಂಟು ಅಡಿ ಎತ್ತರವಿರುವ ಈ ಪ್ರತಿಮೆಯನ್ನು ಫೈಬರ್‌ನಿಂದ ರೂಪಿಸಲಾಗಿದೆ. ಮಂಗಳೂರಿನ ಎಂಟು ಕಲಾವಿದರು ಸತತ ಎರಡು ತಿಂಗಳ ಕಾಲ ಶ್ರಮಿಸಿದ್ದಾರಂತೆ. ಅಂದಾಜು ಐದು ಲಕ್ಷ ರೂಪಾಯಿ ಪ್ರತಿಮೆಗೆ ಖರ್ಚಾಗಿದೆ ಎನ್ನುವುದು ನಿರ್ಮಾಪಕರಾದ ಸುರೇಶ್‌ಗೌಡ ಹಾಗೂ ಶ್ರೀನಿವಾಸಮೂರ್ತಿ ಹೇಳಿಕೆ.

ರಾಜ್ ಚಿತ್ರದ ಮುಹೂರ್ತದ ಸಂದರ್ಭದಲ್ಲೂ ರಾಜಕುಮಾರ್ ಪ್ರತಿಮೆ ಅನಾವರಣ ಮಾಡಲಾಗಿತ್ತು. ಈಗ ಬಿಡುಗಡೆ ಸಂದರ್ಭದಲ್ಲೂ ಪ್ರತಿಮೆ. ಈ ಪ್ರತಿಮೆಯನ್ನು ಶಾಶ್ವತವಾಗಿ ಇರಿಸಿಕೊಳ್ಳಲಾಗುವುದಂತೆ. ಸೂಕ್ತ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದಂತೆ. ರಾಜಕುಮಾರ್ ಪ್ರತಿಮೆ ಅನಾವರಣ ಸಂದರ್ಭದಲ್ಲಿ, ಅಪ್ಪಾಜಿ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ರಾಘವೇಂದ್ರ ರಾಜಕುಮಾರ್- ರಾಜ್ ಸಿನಿಮಾ ಉಂಟುಮಾಡಿರುವ ಕ್ರೇಜ್ ಬಗ್ಗೆ ಖುಷಿ ಹಾಗೂ ಅಚ್ಚರಿ ವ್ಯಕ್ತಪಡಿಸಿದರು.

ಇತ್ತೀಚೆಗೆ ರಾಘವೇಂದ್ರ ರಾಜಕುಮಾರ್ ಯಾವುದೋ ದೇವಸ್ಥಾನಕ್ಕೆ ಹೋಗಿದ್ದರಂತೆ. ದೇವಸ್ಥಾನಕ್ಕೆ ಹೋದವರು ದೇವರಲ್ಲಿ ಬೇಡಿಕೆ ಸಲ್ಲಿಸುವುದು ಮಾಮೂಲಿ. ಇಲ್ಲಿ ಉಲ್ಟಾ. ದೇಗುಲಕ್ಕೆ ಬಂದ ರಾಘವೇಂದ್ರರ ಬಳಿ ಪೂಜಾರಿ ಕೋರಿಕೆ ಸಲ್ಲಿಸಿದರಂತೆ. ಅದು ರಾಜ್ ಟಿಕೇಟ್ ಕೊಡಿಸಲಿಕ್ಕಾಗುತ್ತಾ ಎನ್ನುವ ಕೋರಿಕೆ. ಅಧಿಕಾರಿಗಳಿಂದಲೂ ಇಂಥ ಬೇಡಿಕೆ ಬಂದಿದೆ ಎಂದರು ರಾಘು. ಗಾಂಧಿನಗರದಲ್ಲಂತೂ ಈಗ ರಾಜ್ ಗಾಳಿ. ಅಬ್ಬರದ ನೈಜಸ್ವರೂಪ ತಿಳಿಯಲಿಕ್ಕೆ ಇನ್ನೊಂದು ವಾರ ಕಳೆಯಬೇಕು.

ಮುಂಗಡ ಬುಕ್ಕಿಂಗ್ : ಆಗಸ್ಟ್ 14ಕ್ಕೆ ಕರ್ನಾಟಕ ಮಾತ್ರವಲ್ಲದೆ ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ವಿದೇಶಗಳಲ್ಲೂ ರಾಜ್ ತೆರೆಕಾಣಲಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಐದು ದಿನಗಳ ಮುನ್ನವೇ ಟಿಕೆಟ್ ವಿತರಿಸಲು ನಿರ್ಮಾಪಕರು ಉದ್ದೇಶಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada