»   » ಇಷ್ಟಕ್ಕೂ ರಮ್ಯಾ ಮಾಡಿದ ತಪ್ಪಾದ್ರೂ ಏನು?

ಇಷ್ಟಕ್ಕೂ ರಮ್ಯಾ ಮಾಡಿದ ತಪ್ಪಾದ್ರೂ ಏನು?

By: *ಜಯಂತಿ
Subscribe to Filmibeat Kannada

ಆವತ್ತು ಜಯನಗರ ನಾಲ್ಕನೇ ಬ್ಲಾಕಿನ ತಮ್ಮ ಮನೆಯಲ್ಲಿ ಪಗ್ ನಾಯಿಯನ್ನು ಮುದ್ದಿಸುತ್ತಾ ಕೂತಿದ್ದ ರಕ್ಷಿತಾ ಹೇಳಿದ್ದರು :"ನಮ್ಮ ಬೆಲೆಯನ್ನು ನಾವು ಏರಿಸಿಕೊಳ್ಳಬೇಕೇ ಹೊರತು ಇಳಿಸಿಕೊಳ್ಳಬಾರದು". ಅವರು ಹಾಗೆ ಹೇಳಿದ್ದು ಸಂಭಾವನೆಯ ವಿಚಾರವಾಗಿ. ಸಿನಿಮಾ ತೋಪಾದ ನಿರ್ಮಾಪಕ ಎರಡು ಕಣ್ಣೀರು ಹಾಕಿದರೆ ಮುಂದಿನ ಚಿತ್ರಕ್ಕೆ ಕಡಿಮೆ ಸಂಭಾವನೆ ಪಡೆದು ನಟಿಸಿದ ನಾಯಕಿಯರ ಸಾಲಿನಲ್ಲಿ ತಾನೂ ಇದ್ದದ್ದಾಗಿ ರಕ್ಷಿತಾ ಸ್ಪಷ್ಟವಾಗಿ ಹೇಳಿದ್ದರು. ಅವರ ಆ ಮಾತು ಹೇಳುವ ಹೊತ್ತಿಗಾಗಲೇ ಪ್ರೇಮ್ ಜೊತೆ ಮದುವೆಯಾಗುವ ಕಾಲ ಸನ್ನಿಹಿತವಾಗಿತ್ತು. ರಕ್ಷಿತಾ ವಾಲೆಂಟರಿ ರಿಟೈರ್‌ಮೆಂಟ್ ತಗೊಂಡ ಮೇಲೆ ಕನ್ನಡದ "ಹ್ಯಾಪೆನಿಂಗ್ ಹೀರೋಯಿನ್" ಅಂತ ಉಳಿದುಕೊಂಡಿದ್ದು ರಮ್ಯಾ ಮಾತ್ರ. ಆದರಿವತ್ತು ಅವರ ಮೇಲೂ ಉದ್ಯಮ ಒತ್ತಡದ ಭಾರ ಹೊರಿಸುತ್ತಿದೆ.

ರಕ್ಷಿತಾಮಾಡಿದ ತಪ್ಪನ್ನು ರಮ್ಯಾ ಮಾಡಲಿಲ್ಲ. "ತನನಂ ತನನಂ" ಕಾಲದಲ್ಲಿ ಹದಿನಾರು ಲಕ್ಷ ಎಣಿಸುತ್ತಿದ್ದ ಆಕೆಯ ಸಂಭಾವನೆ ಈಗ ದುಪ್ಪಟ್ಟಾಗಿದೆ. ತಮಿಳಿನಲ್ಲಿ "ಪೊಲ್ಲಾದವನ್" ಮಾಡಿಬಂದ ಮೇಲೆ ಆಕೆಯ ಪ್ರೈಸ್ ಟ್ಯಾಗ್‌ನಲ್ಲಿ ತಿದ್ದುಪಡಿಯಾಗಿದೆ. ರಕ್ಷಿತಾಗೆ ಹೋಲಿಸಿದರೆ ರಮ್ಯಾ ಹೆಚ್ಚು ವೃತ್ತಿಪರ ನಟಿ. ತನ್ನ ಹೇರ್‌ಸ್ಟೈಲ್, ಉಡುಪು ಎಲ್ಲದರ ಬಗ್ಗೆ ತುಂಬಾ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಮುಂಬೈನ ವಿನ್ಯಾಸಕರಿಂದ ಬಟ್ಟೆ ಸಿದ್ಧಪಡಿಸಿಕೊಳ್ಳುತ್ತಾರೆ. ಇದನ್ನೇ ನೆಪ ಮಾಡಿ ರಾಜೇಂದ್ರ ಸಿಂಗ್ ಬಾಬು ಹಿಂದೆ ತಗಾದೆ ತೆಗೆದಿದ್ದರು. ಮುಂಬೈನಿಂದಲೋ, ಪಂಜಾಬಿನಿಂದಲೋ ಬರುವ ನಟಿಯರು ತಮ್ಮ ಜೊತೆಗೇ ವಸ್ತ್ರವಿನ್ಯಾಸಕರನ್ನೂ ಕರೆದುಕೊಂಡು ಬಂದರೆ ನಮ್ಮ ನಿರ್ಮಾಪಕರು ಹಲ್ಲು ಕಿರಿದುಕೊಂಡೇ ಬೋಳಿಸಿಕೊಳ್ಳುತ್ತಾರೆ. ಅದೇ ರಮ್ಯಾ ಆ ಲೆವೆಲ್ಲಿಗೆ ಯೋಚಿಸಿದರೆ ಖಳನಟಿಯಾಗಿಬಿಡುತ್ತಾರೆ.

ನಿಜ, ರಮ್ಯಾ ಇಗೋಯಿಸ್ಟಿಕ್. ಅವರ ಗಂಟಲಿನಲ್ಲಿ ಫಿಲ್ಟರ್ ಇಲ್ಲ. ಅನ್ನಿಸಿದ್ದನ್ನು ಥಟ್ಟಂತ ಹೇಳಿಬಿಡುತ್ತಾರೆ. ಅದು ಕೆಲವು ಸಲ ನಿಮ್ಮ ಕಪಾಳದ ಮೇಲೆ ಬಿದ್ದರೆ ನಾವು ಹೊಣೆಯಲ್ಲ ! ಕೋಪವೂ ಮೂಗಿನ ತುದಿಯಲ್ಲೇ ಇರುತ್ತದೆ (ಮೂಗು ಕೂಡ ಚೂಪಾಗೇ ಇದೇರೀ). ಅರ ರೇಟು ಜಾಸ್ತಿ (ಕನ್ನಡದ ನಟಿಯರಿಗೆ ಮಾತ್ರ ಹೋಲಿಸಿದರೆ). ಆದರೆ, ಅವರು ಇವತ್ತಿಗೂ ಸೇಲಬಲ್ ನಟಿ. ರಮ್ಯಾ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಕೊಡಿಸಬಲ್ಲ ಇಮೇಜು ಇನ್ನೂ ಉಳಿದುಕೊಂಡಿದೆ. "ಮುಸ್ಸಂಜೆ ಮಾತು" ಸಿನಿಮಾ ಓಡಲು ಸುದೀಪ್ ಎಷ್ಟು ಮುಖ್ಯವೋ, ರಮ್ಯಾ ಕೂಡ ಅಷ್ಟೇ ಮುಖ್ಯ ಅನ್ನೋದನ್ನ ನಾವು ಮರೆಯುವಂತಿಲ್ಲ.

"ನಾನೂ ನನ್ನ ಕನಸೂ" ಚಿತ್ರದ ವಿಚಾರಕ್ಕೆ ಬರೋಣ. ರಮ್ಯಾ ಅದರ ನಾಯಕಿ ಅಂತ ಪ್ರಕಾಶ್ ರೈ ಹಾಗೂ ಬಿ.ಸುರೇಶ್ ಪ್ರಕಟಿಸಿ ಎರಡೂವರೆ ತಿಂಗಳಾಯಿತು. ಈಗ ಅರ ಸಂಭಾವನೆ ಹೆಚ್ಚಾಯಿತು ಅಂತ ಸಬೂಬು ಹೇಳಿ, ಚಿತ್ರದಿಂದ ಹೊರದೂಡಿದ್ದಾರೆ. ಸುರೇಶ್ ಪ್ರಕಾರ ರಮ್ಯಾ ಹದಿನೈದು ಲಕ್ಷಕ್ಕೆ ಒಪ್ಪಿದ್ದರಂತೆ. ರಮ್ಯಾ ಅವೆಲ್ಲಾ ಬೂಸಿ ಅಂತ ತುಟಿ ಮುಚ್ಚಿಕೊಂಡೇ ನಗುತ್ತಾರೆ. ಸುರೇಶ್ ಮಾತು ಸತ್ಯವೇ ಆಗಿದ್ದರೆ ಅವರೇಕೆ ಅಗ್ರಿಮೆಂಟ್ ಮಾಡಿಕೊಳ್ಳಲಿಲ್ಲ? ರಮ್ಯಾ ತರಹದ "ಹ್ಯಾಪೆನಿಂಗ್ ನಟಿ" ಸಂಭಾವನೆಯನ್ನು ಅರ್ಧದಷ್ಟು ಇಳಿಸಿಕೊಳ್ಳುವ ಮೂರ್ಖರೇನೂ ಅಲ್ಲವಲ್ಲ.

"ಚಿತ್ರದಲ್ಲಿನ ತನ್ನ ಪಾತ್ರ ಜೀವಮಾನದ ಪಾತ್ರವೇನೂ ಅಲ್ಲ. ಡಿಸ್ಕೌಂಟ್ ರೇಟಿಗೆ ನಟಿಸುವ ಅಗತ್ಯವೂ ಇಲ್ಲ. ಇಷ್ಟಕ್ಕೂ ನಿರ್ಮಾಪಕರು ತಮಿಳಿನವರಲ್ಲವೇ"!!ಇವು ರಮ್ಯಾ ಎತ್ತಿರುವ ಪ್ರಶ್ನೆಗಳು. ಈ ಪ್ರಶ್ನೆಗಳಲ್ಲಿ ಬಂಡವಾಳ ಇದೆ. ಪ್ರಕಾಶ್ ರೈ ಮಾಡಹೊರಟಿರುವುದು ಹೇಳಿಕೇಳಿ ರೀಮೇಕ್ ಚಿತ್ರ. ತಮಿಳಿನಲ್ಲಿ ತ್ರಿಷಾ ಮಾಡಿರುವ ಪಾತ್ರವನ್ನೇ ರಮ್ಯಾ ಮಾಡಿದರೆ ಅದು ಜೀವಮಾನದ ಪಾತ್ರವಾಗಲು ಹೇಗೆ ಸಾಧ್ಯ? ತ್ರಿಷಾ ಏನಿಲ್ಲವೆಂದರೂ ಒಂದು ಕೋಟಿ ಕಕ್ಕಿಸಿರುತ್ತಾಳೆ. ಅದು ಪ್ರಕಾಶ್‌ಗೆ ಭಾರವಾಗುವುದಿಲ್ಲ. ಕನ್ನಡದ ನೆಲಕ್ಕೆ ಬಂದರೆ ಚೌಕಾಸಿ ಪ್ರಜ್ಞೆ ಜಾಗೃತವಾಗಿಬಿಡುತ್ತದೆ. ಪ್ರಕಾಶ್ ದುಡ್ಡುಮಾಡಿರುವುದು ತಮಿಳು ನೆಲದಲ್ಲಿ. ಹಾಗಾಗಿ ಅವರು ತಮಿಳಿನವರಲ್ಲವೇ ಎಂಬ ರಮ್ಯಾ ಕುಹಕವನ್ನೂ ತಳ್ಳಿಹಾಕಲಾಗದು.

ಬದ್ಧತೆಯ ವಿಷಯದಲ್ಲೂ ರಮ್ಯಾ ಮಾತನ್ನು ನಾವು ಒಪ್ಪಿಕೊಳ್ಳಬೇಕು. ಅವರು ಸಂಭಾವನೆ ವಿಷಯದಲ್ಲಿ ಬಿಗಿ. ಅದು ವೃತ್ತಿಪರತೆಯ ಲಕ್ಷಣವಷ್ಟೆ. ನಾಯಕ ನಟರು ಬಾಯಿಗೆ ಬಂದ ರೇಟ್ ಹೇಳುತ್ತಾರೆ. ಅಂಥವರಿಗೆ ದುಡ್ಡು ಕೊಡುವಾಗ ಹಲ್ಲುಕಿಸಿಯುವ ನಿರ್ಮಾಪಕರು, ನಾಯಕಿ ಸಂಭಾವನೆ ವಿಚಾರ ಬಂದರೆ ಹೀಗೆ ವರ್ತಿಸುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ರಮ್ಯಾ ಪಡೆಯುವ ಮೂವತ್ತೆರಡು ಲಕ್ಷ ಕನ್ನಡದ ಉದಯೋನ್ಮುಖ ನಟನ ಸಂಭಾವನೆಗಿಂತ ಕಡಿಮೆ ಅನ್ನೋದಂತೂ ಸತ್ಯ. ಗಾಳಿ ಬಂದರೆ ತೂರಿಕೊಂಡು ಹೋಗುವಂತೆ ಇರುವ ಯೋಗೀಶ್ ಅರುವತ್ತೈದು ಲಕ್ಷ ಎಣಿಸತೊಡಗಿದ್ದಾರೆ. ರಮ್ಯಾ ರೇಟೇಕೆ ಜಾಸ್ತಿಯಾಗಬಾರದು? ಗಾಳಿಗೆ ಸೆರಗು ಹಾರುವಾಗ ಕ್ಯಾಮರಾ ಕಣ್ಣಿಗೆ ಬೀಳುವ ಹೊಕ್ಕಳುಬಳ್ಳಿಗೆ ಅಷ್ಟೂ ಬೆಲೆ ಇಲ್ಲವಾ?

"ಸಂಜು ವೆಡ್ಸ್ ಗೀತಾ" ಚಿತ್ರಕ್ಕೆ ರಮ್ಯಾ ತಮ್ಮ ರೇಟನ್ನು ಸ್ವಲ್ಪ ಇಳಿಸಿಕೊಂಡಿದ್ದಾರೆ. ಮೂವತ್ತೆರಡರ ಬದಲು ಮೂವತ್ತಕ್ಕೇ ಒಪ್ಪಿಕೊಂಡಿದ್ದಾರೆ. ಯಾರೇ ಆಗಲಿ, ಸಂಭಾವನೆಯನ್ನು ಅರ್ಧದಷ್ಟು ಇಳಿಸಿಕೊಳ್ಳುವುದು ಈ ಜಮಾನದಲ್ಲಿ ಕಷ್ಟಕಷ್ಟ. ಅಂದಮೇಲೆ ರಮ್ಯಾ ಯಾಕೆ ಇಳಿಸಿಕೊಳ್ಳಬೇಕು? ನಾನು ನನ್ನ ಕನಸು ಚಿತ್ರದ ವಿಚಾರದಲ್ಲೂ ಅವರು ಮಾಡಿದ್ದೂ ಅದನ್ನೇ.

ಇನ್ನು ರಮ್ಯಾ ಧೋರಣೆಯ ವಿಚಾರಕ್ಕೆ ಬರೋಣ. ಜಸ್ಟ್ ಮಾತ್‌ಮಾತಲ್ಲಿ ಚಿತ್ರದಲ್ಲೂ ಅವರೊಂದು ವಿವಾದದ ಭಾಗವಾದರು. ತನ್ನದೇ ನೃತ್ಯದ ಭಂಗಿಯೊಂದು ಅವರಿಗೆ ಇಷ್ಟವಾಗಲಿಲ್ಲ. ರೀಶೂಟ್‌ಗೆ ಒತ್ತಾಯಿಸಿದರು. ಅದರಲ್ಲಿ ತಪ್ಪೇನಿದೆ? ಅವರಿಗೆ ಸರಿ ಅನ್ನಿಸಲಿಲ್ಲ. ಅದಕ್ಕೇ ರೀಶೂಟ್‌ಗೆ ಕೇಳಿದ್ದಾರೆ. ಅದಕ್ಕೆ ನೃತ್ಯ ನಿರ್ದೇಶಕ ಹರ್ಷ ಒಪ್ಪಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಒಂದು ವೇಳೆ ಅದೇ ಮಾತನ್ನು ಸುದೀಪ್ ಹೇಳಿದ್ದರೆ, ಹರ್ಷ ಅದನ್ನು ನಿರಾಕರಿಸುತ್ತಿದ್ದರೇ? ಚಿತ್ರೋದ್ಯಮ ಸಮಾಜಕ್ಕಿಂತ ಪುರುಷ ಪ್ರಧಾನ ಎನ್ನಬಹುದು. ರಮ್ಯಾ ವಿರುದ್ಧ ಅಷ್ಟೆಲ್ಲಾ ಹರಿಹಾಯ್ದಿದ್ದ ಸುದೀಪ್ ಈಗ ಅವರಿಗೆ ಎಸ್ಸೆಂಎಸ್ ಕಳಿಸಿ, ರಾಜಿ ಮಾಡಿಕೊಂಡಿದ್ದಾರೆಂಬ ಸುದ್ದಿಯಿದೆ. ಜಸ್ಟ್ ಮಾತ್‌ಮಾತಲ್ಲಿ ಪ್ರಚಾರಕ್ಕೆ ರಮ್ಯಾ ಬರದಿದ್ದರೆ ಚಾನೆಲ್‌ಗಳಲ್ಲಿ ಜನ ತನ್ನೊಬ್ಬನದ್ದೇ ಮೂತಿ ನೋಡಬೇಕಲ್ಲ ಎಂಬ ಆತಂಕ ಸುದೀಪ್‌ಗೂ ಇದೆ ಎಂದಾಯಿತು.

ಇನ್ನು ಪತ್ರಕರ್ತರ ವಿಚಾರ. ಲೇಟಾಗಿ ಬಂದರೆ ರಮ್ಯಾ ಸಾರಿ ಕೇಳಬೇಕಂತೆ. ತಾವು ಲೇಟಾಗಿ ಬಂದರೆ ಪತ್ರಕರ್ತರು ಸಾರಿ ಕೇಳುವ ಸೌಜನ್ಯ ತೋರುತ್ತಾರೆಯೇ? ಸದಾ ಸಮಯಪ್ರಜ್ಞೆಯೇ ಇಲ್ಲದಂತೆ ಸುದ್ದಿಗೋಷ್ಠಿಗಳಿಗೆ ಬರುವ ಪತ್ರಕರ್ತರೇ ಅವರ ವಿಷಯದಲ್ಲಿ ಕ್ಯಾತೆ ತೆಗೆದರೆ ಅವರು ಸುಮ್ಮನಿರಬೇಕಾ? ಸುಮ್ಮನಿರುತ್ತಾರಾ?

ಒಂದಂತೂ ಸತ್ಯ:ರಮ್ಯಾ ಈಸ್ ಬೌಲ್ಡ್ ಅಂಡ್ ಬ್ಯೂಟಿಫುಲ್. ಅವರ ಬ್ಯೂಟಿ ಸಹಿಸಿಕೊಳ್ಳುವವರು ಬೌಲ್ಡ್‌ನೆಸ್ಸನ್ನೂ ಸಹಿಸಿಕೊಳ್ಳಬೇಕು. ಇಲ್ಲವಾದರೆ ಕನ್ನಡದ ಹ್ಯಾಪೆನಿಂಗ್ ನಟಿಯೊಬ್ಬರು ಪರಭಾಷೆಯ ಪಾಲಾಗುವ ಅಪಾಯ ದೂರವಿಲ್ಲ.

ಐಸ್ ಕ್ರೀಂ:- ಮಿಸ್: ಸುರೇಶಾ ನೀನು 1 ರಿಂದ 10 ರ ತನಕ ಕರೆಕ್ಟಾಗಿ ಲೆಕ್ಕ ಹೇಳಿದರೆ ನಿನಗೆ ಒಂದು ಕಿಸ್ ಕೊಡ್ತೀನಿ.

ಸುರೇಶ : ಹೌದಾ ಮಿಸ್, ಆದ್ರೆ 1 ರಿಂದ 100 ರವರೆಗೆ ಕರೆಕ್ಟಾಗಿ ಲೆಕ್ಕ ಹೇಳಿದರೆ ಏನಾದರೂ ಬೇರೆ ಪ್ಯಾಕೇಜ್ ಇದೆಯಾ...?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada