»   » 'ನೆನಪಿನಂಗಳದಲ್ಲಿ ಶಂಕರನಾಗ್' ಲೋಕಾರ್ಪಣೆ

'ನೆನಪಿನಂಗಳದಲ್ಲಿ ಶಂಕರನಾಗ್' ಲೋಕಾರ್ಪಣೆ

Posted By:
Subscribe to Filmibeat Kannada

ಇದೊಂದು ಕಾಕತಾಳೀಯ ಘಟನೆ, ದಿವಂಗತ ಶಂಕರನಾಗ್ ಬಗೆಗಿನ ಪುಸ್ತಕವೊಂದರ ಲೋಕಾರ್ಪಣೆಯಾದದ್ದು ಅದೇ ಶಂಕರನಾಗ್ ಅವರಿಗೆ ಅರ್ಪಿಸುವ ಚಿತ್ರವೊಂದರ ಸೆಟ್‌ನಲ್ಲಿ. ಇದು ನಿಜ, ಘಟನೆ ನಡೆದದ್ದು ಹೀಗೆ. ಪತ್ರಕರ್ತ ಗಣೇಶ್‌ಕಾಸರಗೋಡು ಬರೆದಿರುವ 'ನೆನಪಿನಂಗಳದಲ್ಲಿ ಶಂಕರನಾಗ್' ಹೆಸರಿನ ಪುಸ್ತಕವನ್ನು ನಟಿ ರಮ್ಯಾ ಬಿಡುಗಡೆ ಮಾಡಬೇಕಾಗಿತ್ತು.

ಆಹ್ವಾನಿತ ಪ್ರೇಕ್ಷಕರ ನಡುವಿನ ಸಮಾರಂಭಕ್ಕಿಂತಲೂ ಯಾವುದಾದರೂ ಚಿತ್ರದ ಸೆಟ್‌ನಲ್ಲಿ ಕೃತಿಯನ್ನು ಬಿಡುಗಡೆ ಮಾಡಿದರೆ ಚೆನ್ನ ಎನ್ನುವುದು ಉದ್ದೇಶವಾಗಿತ್ತು. ಇದಕ್ಕೆ ಹೊಂದಿಕೊಂಡು ರಮ್ಯಾ ಕೂಡಾ ಕಂಠೀರವ ಸ್ಟುಡಿಯೋದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡೋಣ ಅಂದರು.

ವಿಶೇಷವೆಂದರೆ ಅದು ಶಂಕರನಾಗ್ ಹೆಸರಿಗೆ ಅರ್ಪಿಸುವ ಚಿತ್ರದ ಚಿತ್ರೀಕರಣದ ಸೆಟ್. ಚಿತ್ರದ ಹೆಸರು 'ಸಂಜೂ ವೆಡ್ಸ್ ಗೀತಾ'. ಕಾಕತಾಳೀಯವೆಂದರೆ ಇದುವೇ ಅಲ್ಲವೇ? ವಿಷಯ ತಿಳಿಸಿದಾಗ ನಿರ್ದೇಶಕ ನಾಗಶೇಖರ್ ರೋಮಾಂಚನಗೊಂಡರು. ಪುಸ್ತಕ ಬಿಡುಗಡೆಯ ಎಲ್ಲಾ ವ್ಯವಸ್ಥೆಯನ್ನು ಮಾಡಿದ ನಾಗಶೇಖರ್ ಅವರು ರಮ್ಯಾ ಬಂದ ತಕ್ಷಣವೇ ವ್ಯವಸ್ಥೆಯ ಬಗ್ಗೆ ಹೇಳಿಕೊಂಡರು.

ಖುಷಿಯಿಂದಲೇ ರಮ್ಯಾ ಅವರು 'ನೆನಪಿನಂಗಳದಲ್ಲಿ ಶಂಕರನಾಗ್' ಪುಸ್ತಕವನ್ನು ಬಿಡುಗಡೆ ಮಾಡಿ ಮೊದಲ ಪ್ರತಿಯನ್ನು ನಿರ್ದೇಶಕ ನಾಗಶೇಖರ್ ಅವರಿಗೆ ನೀಡಿದರು. ಎರಡನೇ ಪ್ರತಿಯನ್ನು ಪ್ರಸ್ತುತ ಚಿತ್ರದ ಛಾಯಾಗ್ರಾಹಕರಾದ ಸತ್ಯ ಹೆಗಡೆಯವರಿಗೆ ನೀಡಿದಾಗ ಅಲ್ಲಿ ಸೇರಿದ್ದ ಮಂದಿಯಿಂದ ಚಪ್ಪಾಳೆಯ ಸ್ವಾಗತ.

ಸ್ನೇಹ ಬುಕ್ ಹೌಸ್‌ನ ಪರಶಿವಪ್ಪನವರು ಪ್ರಕಟಿಸಿರುವ ಈ ಪುಸ್ತಕದಲ್ಲಿ ಶಂಕರನಾಗ್ ಬಗೆಗಿನ ವೈವಿಧ್ಯಮಯ ನೆನಪುಗಳಿವೆ. ಪ್ರಥಮಪ್ರತಿ ಪಡೆದ ನಿರ್ದೇಶಕ ನಾಗಶೇಖರ್ ಮಾತನಾಡಿ 'ಇದು ನನ್ನ ಸೌಭಾಗ್ಯ. ನಾನು ಶಂಕರನಾಗ್ ಅವರ ಅಪ್ಪಟ ಅಭಿಮಾನಿ. ಸಂಕೇತ್ ಗ್ರೂಪಿನಿಂದ ಬಂದವನ್ನು ಎನ್ನುವ ಹೆಮ್ಮೆ ನನ್ನದು. ಅಂಥಾ ಮಹಾನ್ ಕಲಾವಿದನ ಬಗೆಗಿನ ಪುಸ್ತಕವನ್ನು ನನ್ನದೇ ಸೆಟ್‌ನಲ್ಲಿ ಬಿಡುಗಡೆ ಮಾಡಿದ ಹೆಮ್ಮೆ ನನ್ನದು' ಅಂದರು.

ನಟಿ ರಮ್ಯಾ ಮಾತನಾಡಿ 'ಅಚಾನಕ ಪ್ರಸಂಗ. ಸಮಯಕೂಡಿ ಬರುವುದೆಂದರೆ ಹೀಗೇನೇ. ನಾನು ಓದಿದ ಮೊದಲ ಪುಸ್ತಕ ಗಣೇಶ್ ಕಾಸರಗೋಡು ಅವರ 'ಚದುರಿದ ಚಿತ್ರಗಳು'. ಈಗ ಓದಲಿರುವ ಎರಡನೇ ಪುಸ್ತಕವನ್ನು ಕೂಡ ಅವರೇ ಬರೆದಿದ್ದಾರೆ ಎನ್ನುವುದು ಕೇವಲ ಕಾಕಾತಾಳೀಯ. ಅದರಲ್ಲೂ ನನ್ನ ನೆಚ್ಚಿನ ಶಂಕರನಾಗ್ ಬಗೆಗಿನ ಪುಸ್ತಕವನ್ನು ನಾನು ಬಿಡುಗಡೆ ಮಾಡಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಷಯ ಅಂದರು. ಸತ್ಯಹೆಗಡೆ, ಕೃತಿಕಾರ ಗಣೇಶ್ ಕಾಸರಗೋಡು ಮತ್ತು ಪ್ರಕಾಶಕ ಪರಶಿವಪ್ಪ ಕೂಡ ಮಾತಾಡಿದರು.

ಜಸ್ಟ್ ಮಾತ್ ಮಾತಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಇಲ್ಲಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada