For Quick Alerts
  ALLOW NOTIFICATIONS  
  For Daily Alerts

  ವರದಾಮೂಲದ ಗುರುಮೂರ್ತಿ ಗುರುತರ ಸಾಧನೆ

  By * ಚಿನ್ಮಯ ಎಂ.ರಾವ್, ಹೊನಗೋಡು.
  |

  ಮಲೆನಾಡಿನ ಹಸಿರ ತಪ್ಪಲಿನಲ್ಲೊಂದು ಪುಟ್ಟ ಊರು ವರದಾಮೂಲ.ಸಾಗರ ತಾಲೂಕು ಕೇಂದ್ರದಿಂದ ಅನತಿ ದೂರ.ಈ ಭಾಗದಲ್ಲೆಲ್ಲಾ ಕೃಷಿಯೇ ಜೀವನಾಧಾರ. ಅಡಿಕೆ ಪ್ರಮುಖ ಬೆಳೆ.ತೆಂಗು,ಬಾಳೆ,ಏಲಕ್ಕಿ ಮುಂತಾದ ಉಪಬೆಳೆಗಳ ಆದಾಯದಿಂದಲೇ ನಡುಯುವುದು ಸಂಸಾರ.ವರುಷದಲ್ಲಿ ಆರೆಂಟು ತಿಂಗಳು ಮಾತ್ರ ಕೃಷಿಕೆಲಸ. ಉಳಿದ ಬಿಡುವಿನ ಕಾಲದಲ್ಲಿ ಏನಾದರೊಂದು ಖುಷಿ ಕೆಲಸ, ಹವ್ಯಾಸ.

  ಆ ವೇಳೆಯಲ್ಲಿ ಕೆಲಸಕ್ಕೆ ಬಾರದ ಕೆಲಸ ಮಾಡುವವರೂ ಇದ್ದಾರೆ.ಆದರೆ ಕೆಲವರು ಮಾತ್ರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಶೇಷಸಾಧನೆ ಮಾಡಿದವರಿದ್ದಾರೆ.ಆ ಪೈಕಿಯಲ್ಲಿ ಒಬ್ಬ ವಿಭಿನ್ನ ವ್ಯಕ್ತಿಯೇ ವರದಾಮೂಲದ ಗುರುಮೂರ್ತಿ.ಬನ್ನಿ ಈಗ ಗುರುಮೂರ್ತಿಯವರ ಗುರುತರ ಸಾಧನೆಗಳ ಬಗ್ಗೆ ಅರಿತು ಅಭಿನಂದಿಸೋಣ ಮನಸ್ಪೂರ್ತಿ.ಅವರಾಗಬಹುದು ನಮಗೆಲ್ಲಾ ಸ್ಪೂರ್ತಿ.

  ಗುರುಚರಿತ್ರೆ: ಹವ್ಯಾಸಿ ಚಿತ್ರಕಲೆಯಿಂದ ಆರಂಭವಾದ ಗುರುಮೂರ್ತಿ ಅವರ ಹವ್ಯಾಸ ಮದುವೆ ಮಂಟಪದವರೆಗೂ ಶೋಭಿಸಲಾರಂಭಿಸಿತು.ಮೂರುದಶಕಗಳ ಹಿಂದೆ ಟಿವಿಯ ಠೀವಿ ಇರದ ಆ ಕಾಲದಲ್ಲಿ ಕಾಳಿಂಗನವಡ ಅವರ ಯಕ್ಷಗಾನದ್ದೇ ಗಾನಬಜಾನ. ಹರೆಯದ ಈ ಹುಡುಗ ಯಕ್ಷಗಾನದ ಕಾರ್ಯಕ್ರಮಗಳಿಗೆ ಮೈಕ್ ಸೆಟ್ ಹೊರುವ ಕಾರ್ಯಕ್ರಮ.ಎಲ್ಲೇ ಯಕ್ಷಗಾನವಿರಲಿ ಅಲ್ಲಿ ತನ್ನದೇ ಧ್ವನಿವರ್ಧಕಯಂತ್ರಗಳನ್ನು ಹಾಕಿ ಬೆಳಗಾಗುವವರೆಗೂ ಪ್ರತೀ ಪಾತ್ರಗಳನ್ನು ನೋಡಿ ತಲೆಗೆ ಹಾಕಿಕೊಳ್ಳುತ್ತಿದ್ದ. ಕೈಗೆ ಕಾಸೂ ಸಿಗುತ್ತಿತ್ತು. ಮನದ ಆಸೆಯೂ ತೀರುತ್ತಿತ್ತು. ನಾಟಕಗಳಿಗೂ ತನ್ನ ಉದ್ಯೋಗ ಪರ್ವವನ್ನು ವಿಸ್ತರಿಸಿ ಈ ಚುರುಕು ಹುಡುಗ ಮೇಕಪ್ ಕೂಡ ಕಲಿತ.

  ಗುರುದರ್ಶನ: ಈ ರೀತಿ ನಾಟಕ ಪ್ರವೃತ್ತಿಯಿಂದ ವೃತ್ತಿ ಮಾಡುತ್ತಿದ್ದ ಗುರುಮೂರ್ತಿಗಳಿಗೆ ಒಮ್ಮೆ ಹೊಳೆಬಾಗಿಲ ಆಚೆ ಇರುವ ತುಮ್ರಿ ಎಂಬ ಊರಲ್ಲಿ ನೀನಾಸಂ ನಡೆಸುವ "ಸಂಗ್ಯಾಬಾಳ್ಯ" ನಾಟಕಕ್ಕೆ ಧ್ವನಿವರ್ಧಿಸಲು ಕರೆಬಂತು. ಹೇಳಿಕೇಳಿ ಬಾಲ್ಯದಿಂದಲೂ ನೀನಾಸಂ ನಾಟಕಗಳನ್ನೇ ಕಣ್ತುಂಬ ತಿಂದುಂಡು ಬೆಳೆದಿದ್ದ ಗುರುಮೂರ್ತಿ ಅವರಿಗೆ ಏನೋ ಪುಳಕ.ಯಶಸ್ವಿಯಾಯಿತು ಆ ನಾಟಕ. ಅಲ್ಲಿಂದ ಇವರಿಗೆ ನೀನಾಸಂ ಹಾಗು ಖ್ಯಾತ ರಂಗಕರ್ಮಿ ಕೆ.ವಿ ಸುಬ್ಬಣ್ಣ ಅವರ ಸಂಪರ್ಕ.

  ಜನಸ್ಪಂದನ-ಗುರುಸ್ಪಂದನ: 1983 ರಲ್ಲಿ ನೀನಾಸಂ ನ "ಜನಸ್ಪಂದನ"ಜನಪ್ರಿಯವಾಗಿತ್ತು.ಅಂದರೆ ಈ ಕಾರ್ಯಕ್ರಮದ ಮೂಲಕ ನೀನಾಸಂನ ನಾಟಕದ ನಿರ್ದೇಶಕರು ಪ್ರತೀ ಊರುಗಳಲ್ಲಿ ಒಂದೊಂದು ತಿಂಗಳು ನೆಲೆನಿಂತು ಅಲ್ಲೇ ಕಲವಿದರನ್ನು ತಯಾರು ಮಾಡಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು.ಈ ಪ್ರಕಾರವಾಗಿ ಶಿವಮೊಗ್ಗದಲ್ಲಿ ಜನಸ್ಪಂದನ ನಿಗದಿಯಾಗಿತ್ತು.

  ಅಷ್ಟೊತ್ತಿಗಾಗಲೇ ಮೈಕ್‌ಸೆಟ್‌ಗಳನ್ನು ಕಳಚಿಟ್ಟಿದ್ದ ಗುರುಮೂರ್ತಿಯವರ ಆಸಕ್ತಿಯ ವಯರ್‌ಗಳು ನಾಟಕದ ಲೈಟಿಂಗ್ ಹಾಗು ಮೇಕಪ್‌ಗೆ ಕನೆಕ್ಟ್ ಆಗಿತ್ತು. ಶಿವಮೊಗ್ಗದಲ್ಲಿ ಇವರ ಪ್ರತಿಭೆ ಪ್ರಕಾಶಿಸಿತು.ಆಗ ಕೆಲವು ಪ್ರಮುಖ ಪತ್ರಿಕೆಗಳಲ್ಲೂ ಇವರ ಸಾಧನೆಯ ಬೆಳಕು ಮಿಂಚಿತು. ಮೊದಲಿನಿಂದಲೂ ಇವರನ್ನು ಗಮನಿಸುತ್ತಿದ್ದ ಸುಬ್ಬಣ್ಣ ಬೆನ್‌ತಟ್ಟಿ ಹೆಗಲ ಮೇಲೆ ಕೈಹಾಕಿ ನೀನಾಸಮ್ಮಿನ ರಂಗದ ಹಿನ್ನೆಲೆ ಚಟುವಟಿಕೆಗಳನ್ನು ಇವರ ಹೆಗಲಿಗೇರಿಸಿದರು.

  ಅಲ್ಲಿಂದ ರಂಗಭೂಮಿಗೆ ಹೆಚ್ಚು ಒತ್ತು. ನೀನಾಸಮ್ಮಿನ ಹಲವು ಜವಾಬ್ದಾರಿಗಳು ಇವರಿಗೆ ಬಿತ್ತು.

  ಆನಂತರ ನೀನಾಸಮ್ ತಿರುಗಾಟ ಯೋಜನೆಯ ತಂತ್ರಜ್ಞನರಾಗಿ, ನಿರ್ವಾಹಕರಾಗಿ, ಸಂಚಾರ ವ್ಯವಸ್ಥಾಪಕರಾಗಿ ಕೆಲಸ. ನಿನಾಸಮ್ ಸಂಸ್ಥೆಯಲ್ಲಿ ಷಾಜಹಾನ್, ಕೆಂಪು ಕಣಗಲೆ, ಕ್ರಮವಿಕ್ರಮ, ಆಕಾಶಭೇರಿ, ಅಗಲಿದ ಅಲಕೆ ಇನ್ನೂ ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅನುಭವಪಡೆದರು.

  ಬೆನ್ನೆವಿಟ್ಸ್, ಅತುಲ್ ತಿವಾರಿ, ನರಿಪಟ್ಟ ರಾಜು, ಬಿ.ವಿ ಕಾರಂತ, ಚಂದ್ರಶೇಖರ ಕಂಬಾರ, ಅಕ್ಷರ ಕೆ.ವಿ, ಚಿದಂಬರ ರಾವ್ ಜಂಬೆ, ವೆಂಕಟರಮಣ ಐತಾಳ, ರಘುನಂದನ್ ಚನ್ನಕೇಶವ, ಮಾಲತಿ. ಎಸ್,ಕೆ.ಜಿ.ಕೃಷ್ಣಮೂರ್ತಿ ಮೊದಲಾದ ಗಣ್ಯನಿರ್ದೇಶಕರೊಂದಿಗೆ ಇನ್ನೂರಕ್ಕೂ ಹೆಚ್ಚು ನಾಟಕಪ್ರಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

  ನಾಡಿನ ಒಳಹೊರಗೆ ಹಲವೆಡೆ ರಂಗಶಿಕ್ಷಣ ಹಾಗು ಸ್ಕ್ರೀನ್ ಪ್ರಿಂಟಿಂಗ್ ತರಬೇತಿಗಳನ್ನು ನೀಡಿದರು. 1999 ರಲ್ಲಿ ಕರ್ನಾಟಕ ನಾಟಕ ಅಕಾಡಮಿಯಿಂದ ರಂಗಭೂಮಿ ನೇಪಥ್ಯದ ಕಲವಿದರಿಗೆ ಕೊಡುವ "ಪದ್ದಣ್ಣ ಶ್ರಮ ಪ್ರಶಸ್ತಿ" ಹಾಗು ಹಲವು ಪುರಸ್ಕಾರಗಳು ಮುಂದೆಮುಂದೆ ಧಾವಿಸುತ್ತಿದ್ದ ಇವರನ್ನು ಹಿಂಬಾಲಿಸಿತು.

  ಶುರು ಪ್ರಯೋಗ-ಬೆಳ್ಳಿತೆರೆ ಯೋಗ: ಒಮ್ಮೆ ಪ್ರಖ್ಯಾತ ನಿರ್ದೇಶಕ ಅಶೋಕ್ ಕಶ್ಯಪ್ ಕಿರುತೆರೆಗೆ ಹೊಸ ತಲೆಗಳನ್ನು ಹುಡುಕಲು ಸಂದರ್ಶನ ಕರೆದರು.ಏನಾದರು ವಿಭಿನ್ನವಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ತಲೆಯಲ್ಲಿ ತುಂಬಿಕೊಂಡಿದ್ದ ಗುರುಮೂರ್ತಿ ಸಂದರ್ಶನಕ್ಕೆ ಹಾಜರಾದರು.ಕಣ್ಣಲ್ಲೇ ಎಂತವರನ್ನೂ ಕ್ಷಣಾರ್ಧದಲ್ಲೆ ಅಳೆದುಬಿಡುವ ಅಶೋಕ್ ಇವರನ್ನು ಆ ಕೂಡಲೇ ತಮ್ಮ ಹೃದಯದ ಬಾಗಿಲು ತೆರೆದು ಅಂತರಂಗದೊಳಗೆ ಸ್ನೇಹದ ಖುರ್ಚಿ ಹಾಕಿ ಕೂರಿಸಿಕೊಂಡುಬಿಟ್ಟರು.ಅಶೋಕ್ ಅವರ "ಸೀತೆ" ಧಾರವಾಹಿಯಲ್ಲಿ ಶಂಕರಯ್ಯನ ಪಾತ್ರದಲ್ಲಿ ನವರಸಗಳ ಅಭಿನಯ.

  ಅಲ್ಲಿಂದ ಕೊಟ್ಯಾಂತರ ಕನ್ನಡಿಗರಿಗೆ ಗುರುಮೂರ್ತಿ ಕಿರುತೆರೆಯ ನಟನಾಗಿ ಚಿರಪರಿಚಯ.ನಂತರ ನಂದಗೋಕುಲ,ಮುಕ್ತ,ಏಕೆ ಹೀಗೆ ನಮ್ಮ ನಡುವೆ,ಜಿಂಬಾ,ಮನೆಮಗಳು, ಪಾರ್ವತಿ ಪರಮೇಶ್ವರ ಧಾರವಾಹಿಗಳಲ್ಲಿಹಾಗು,ಸಿಹಿಮುತ್ತು, ಲಿಫ್ಟ್ ಕೊಡ್ಲಾ ಚಲಚಿತ್ರಗಳಲ್ಲಿ ಅಭಿನಯ.ಸಾರ್ಥಕವಾಯಿತು ಹೊಸಪ್ರಯೋಗ.

  ಗುರುಸ್ಮರಣೆ: ಗುರುಮೂರ್ತಿಯವರಿಗೆ ಕೆ.ವಿ ಸುಬ್ಬಣ್ಣ ರಂಗಭೂಮಿಯ ಗುರು.ಒಮ್ಮೆ ನೀನಾಸಮ್ಮಿನ ಹಳೆಯ ವಿದ್ಯಾರ್ಥಿಯೊಬ್ಬ ವಾಹಿನಿಯೊಂದರ ಸಂದರ್ಶನದಲ್ಲಿ ತನಗೆ ನೀನಾಸಮ್ಮಿನಲ್ಲಿ ಒಂದು ವರ್ಷ ವ್ಯರ್ಥವಾಯಿತೆಂದುಬಿಟ್ಟ.ಆತ ನೀನಾಸಮ್‌ನಿಂದ ರಂಗಶಿಕ್ಷಣವನ್ನು ಚೆನ್ನಾಗಿಯೇ ಬಾಚಿಕೊಂಡು ಹೋಗಿದ್ದ.ಹಾಗಿದ್ದರೂ ದೂರುತ್ತಿದ್ದಾನೆಂದು ಕೆಂಡಾಮಂಡಲರಾದ ಗುರುಮೂರ್ತಿ ಆವೇಶಭರಿತರಾಗಿ ಈ ವಿಚಾರವನ್ನು ಸುಬ್ಬಣ್ಣನವರಿಗೆ ಹೇಳಿದರು.ಕೂಡಲೇ ಸುಬ್ಬಣ್ಣ ಶಾಂತಚಿತ್ತರಾಗಿ,"ಮಕ್ಕಳು ತಂದೆ-ತಾಯಿಯನ್ನು ದೂರುವುಸು ಸಹಜ.ಅವರೆಲ್ಲಾ ನಮ್ಮ ಮಕ್ಕಳಂತೆ.ಮಕ್ಕಳು ಎದೆಗೆ ಒದ್ದರೆ ನೋವಾಗುವುದೆ?"ಎಂದು ನಕ್ಕುಬಿಟ್ಟರು! ಅಷ್ಟು ನಿರ್ಲಿಪ್ತಸ್ವಭಾವದವರಾದ ನಮ್ಮ ಸುಬ್ಬಣ್ಣ ಕಾಯಕಯೋಗಿ ಎಂದು ಗುರುಮೂರ್ತಿ ಸ್ಮರಿಸಿಕೊಳ್ಳುತ್ತಾರೆ.

  ಇನ್ನು ಕಿರುತೆರೆ, ಬೆಳ್ಳಿತೆರೆಯ ಗುರುಗಳಾದ ಅಶೋಕ್ ಕಶ್ಯಪ್ ಹಾಗು ರೇಖಾರಾಣಿ ಅವರ ಮಾನವೀಯತೆಯನ್ನು ಇವರು ಕೊಂಡಾಡುತ್ತಾರೆ.ಒಮ್ಮೆ ಇವರು ಬೇರೊಬ್ಬರ ಧಾರಾವಾಹಿಯ ಚಿತ್ರೀಕರಣಕ್ಕೆಂದು ಶೃಂಗೇರಿಗೆ ಹೋಗುವಾಗ ರಸ್ತೆ ಅಪಘಾತವಾಯಿತಂತೆ.ವಿಷಯ ತಿಳಿದ ಅಶೋಕ್ ಕೂಡಲೇ ಅಪಘಾತದ ಸ್ಥಳಕ್ಕೆ ತಮ್ಮದೇ ವ್ಯಾನ್ ಕಳುಹಿಸಿದರಂತೆ.ಇಷ್ಟಲ್ಲದೆ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಆಸ್ಪತ್ರೆಗೆ ಸ್ವತಹ ಬಂದು ಆರೈಕೆ ಮಾಡಿ ಚಿಕಿತ್ಸಾವೆಚ್ಚವನ್ನೂ ಭರಿಸಿದರಂತೆ! ಬೇರೆಯವರ ಕೆಲಸಕ್ಕೆಂದು ಹೋಗುತ್ತಿದ್ದರೂ ಗುರುಮೂರ್ತಿ ತಮ್ಮವರು, ಬೆರೆಯವರಲ್ಲ ಎಂಬ ಅಶೋಕ್ ಅವರ ಆತ್ಮೀಯತೆ,ಆಪತ್ತಿಗಾಗುವ ಆಪ್ತಭಾವವನ್ನು ನೆನೆದು ಗುರುಮೂರ್ತಿ ಕಣ್ಣೀರಾಗುತ್ತಾರೆ.

  ಗುರಿ-ಮೂರ್ತಿ: ಹೀಗೆ ಮೊದಲಿನಿಂದಲೂ ಜೀವನದಲ್ಲಿ ಒಂದು ಗೊತ್ತುಗುರಿಯನ್ನಿಟ್ಟುಕೊಂಡು ಬಾಳುತ್ತಿರುವ ಗುರುಮೂರ್ತಿ ಕೇವಲ ತಾನು ಮಾತ್ರ ಬೆಳೆಯದೆ ನೀನಾಸಮ್ ಮೂಲಕ ಸಾವಿರಾರು ಕಲಾವಿದರನ್ನು ತಯಾರು ಮಾಡಿದ್ದಾರೆ.ಅವರಲ್ಲಿ ಇಂದು ಹಲವರು ಪ್ರಸಿದ್ಧರಾಗಿದ್ದಾರೆ.ಆದರೂ ವರುಷಕ್ಕೊಮ್ಮೆ ನೀನಾಸಮ್‌ಗೆ ಬಂದು ಪ್ರೀತಿಯ ಗುರಣ್ಣನನ್ನು ಕಾಣದಿದ್ದರೆ ಅವರಿಗೆ ಸಮಾಧಾನವಿಲ್ಲ.ಸಮಾಧಾನವಾಗಿ ಹೊಸಹೊಸ ಪ್ರಯೋಗಗಳನ್ನು ತನ್ನಷ್ಟಕ್ಕೆ ತಾನೇ ಮಾಡುತ್ತಿರುವ ರಂಗಕರ್ಮಯೋಗಿ ಈತ.ಇಂಥವರು ಈ ನಾಡಿಗೆ ಈ ದೇಶಕ್ಕೆ ಕೊಡುಗೆ ಖಂಡಿತ.ಗುರುಮೂರ್ತಿಯವರ ತೆರೆಮರೆಯ ಸಾಧನೆ ಹೀಗೇ ಸಾಗಲಿ ಅವಿರತ.

  English summary
  Gurumurthy a native of Varadamoola a small hamlet in Malendu region is a versatile person. He started his career as a make up artist, screen printer in Yakshagana Mela, Later with training from his master BV Karanth he turned as a Ninasam repretory teacher. Ashok Kashyap introduced him into television world later to silver screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X