»   »  'ಹೆಂಡ್ತೀರ್ ದರ್ಬಾರ್' ಮೂಲಕ ಮೀನಾ ರೀ ಎಂಟ್ರಿ

'ಹೆಂಡ್ತೀರ್ ದರ್ಬಾರ್' ಮೂಲಕ ಮೀನಾ ರೀ ಎಂಟ್ರಿ

Subscribe to Filmibeat Kannada

ಮದುವೆಯ ಬಳಿಕ ಕಾಣೆಯಾಗಿದ್ದ ನಟಿ ಮೀನಾ ಕನ್ನಡ ಚಿತ್ರವೊಂದರ ಮೂಲಕ ಮತ್ತೆ ಪ್ರತ್ಯಕ್ಷವಾಗಿದ್ದಾರೆ. 'ಹೆಂಡ್ತೀರ್ ದರ್ಬಾರ್' ಎಂಬ ಚಿತ್ರದ ಮೂಲಕ ಮೀನಾ ಮತ್ತೆ ಬಣ್ಣ ಹಚ್ಚ್ಚಿ ಕೊಂಡಿದ್ದಾರೆ. 'ಗಂಡಂದ್ರೆ ಹುಷಾರ್' ಎಂಬುದು ಈ ಚಿತ್ರದ ಅಡಿಬರಹ.

ಮದುವೆಯಾದ ಬಳಿಕ ಮೀನಾ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು ನಾಯಕ ನಟನಾಗಿ ರಮೇಶ್ ಅರವಿಂದ್ ಕಾಣಿಸಲಿದ್ದಾರೆ.ಅಂದಹಾಗೆ ಈ ಚಿತ್ರ ತಮಿಳಿನ 'ವರವು ಎತ್ತಣ ಸೆಲವು ಪತ್ತಣ' ಚಿತ್ರದ ರೀಮೇಕ್. ತಮಿಳಿನಲ್ಲಿ ನಾಜರ್, ರಾಧಿಕಾ, ಗೌಂಡುಮಣಿ, ಸೆಂಥಿಲ್, ವಡಿವೇಲು ಮುಂತಾದವರು ನಟಿಸಿದ್ದರು. ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆಕಂಡ ಚಿತ್ರ ಇದಾಗಿದೆ.

ಈ ಹಿಂದೆ ಮೀನಾ ಮತ್ತು ರಮೇಶ್ ಅರವಿಂದ್ ತಮಿಳಿನಲ್ಲಿ ನಟಿಸಿದ್ದರು. ಆದರೆ ಕನ್ನಡದಲ್ಲಿ ಇವರಿಬ್ಬರೂ ಜತೆಯಾಗಿ ನಟಿಸುತ್ತಿರುವುದು ಇದೇ ಮೊದಲು. ಇದೊಂದು ಹಾಸ್ಯ ಪ್ರಧಾನ ಚಿತ್ರವಾಗಿದ್ದು, 'ಒಂದು ರುಪಾಯಿ ಆದಾಯ ಒಂದೂವರೆ ರುಪಾಯಿ ಖರ್ಚು' ಎಂಬುದು ಚಿತ್ರದ ಒನ್ ಲೈನ್ ಕತೆ.

ರಂಗಾಯಣ ರಘು, ಸಾಧುಕೋಕಿಲ ನಟನೆಯಿದ್ದು ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ತಮಿಳಿನಲ್ಲಿ 'ವರವು ಎತ್ತ್ತಣ ಸೆಲವು ಪತ್ತಣ' ನಿರ್ದೇಶಿಸಿದ್ದ ವಿ.ಶೇಖರ್ ಈ ಚಿತ್ರವನ್ನು ಕನ್ನಡಲ್ಲೂ ನಿರ್ದೇಶಿಸುತ್ತಿರುವುದು ವಿಶೇಷ. ಸುದೀಪ್ ಜತೆ 'ಮೈ ಆಟೋಗ್ರಾಫ್' ಮೀನಾ ನಟಿಸಿದ್ದ ಕನ್ನಡದ ಕೊನೆಯ ಚಿತ್ರ. ಇದೀಗ ಮತ್ತೊಂದು ರೀಮೇಕ್ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ ಮೀನಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada