»   »  ನಾನು ಸೆನ್ಸಿಟೀವ್ ಹುಡುಗಿ: ರಾಧಿಕಾ ಪಂಡಿತ್

ನಾನು ಸೆನ್ಸಿಟೀವ್ ಹುಡುಗಿ: ರಾಧಿಕಾ ಪಂಡಿತ್

By: *ಜಯಂತಿ
Subscribe to Filmibeat Kannada

ಬೊಗಸೆಗಣ್ಣು. ಮಧುರ ಕಂಠ. ಸ್ಪಷ್ಟ ಯೋಚನೆ. ಸ್ಫುಟ ಮಾತು- ರಾಧಿಕಾ ಪಂಡಿತ್ ಅಪ್ಪಟ ಕನ್ನಡದ ಹುಡುಗಿ ಅನ್ನಿಸಲು ಇವಿಷ್ಟು ಕಾರಣ ಸಾಕು. ಫಿಲ್ಮ್‌ಫೇರ್ ಪ್ರಶಸ್ತಿ ಹಿಡಿದು ಮುಗುಳ್ನಕ್ಕ ಮೇಲೆ ಅವರ ಆತ್ಮವಿಶ್ವಾಸ ಸಾಕಷ್ಟು ಹೆಚ್ಚಾಗಿದೆ. ಅವರ ಮಾತುಗಳೇ ಇದಕ್ಕೆ ಪುಷ್ಟಿ...

ಪ್ರಶಸ್ತಿಯ ನಿರೀಕ್ಷೆ ಇತ್ತೆ?
ಖಂಡಿತ ಇಲ್ಲ. ಆ ಸಿನಿಮಾ ಹೇಳಿಕೇಳಿ ಹುಡುಗಿಯರದ್ದು. ಅದು ಹೇಗೆ ರಿಸೀವ್ ಆಗುತ್ತೆ ಎಂಬುದರ ಬಗ್ಗೆ ಅನುಮಾನವಿತ್ತು. ಈಗ ಖುಷಿಯಾಗುತ್ತಿದೆ.

ನಿಮ್ಮ ಸಾಮರ್ಥ್ಯ ಏನು?
ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡುತ್ತೇನೆ. ನನ್ನ ಪ್ರಕಾರ ಅದೇ ಸದ್ಯಕ್ಕೆ ಸ್ಟ್ರೆಂತ್. ನನಗೆ ಶ್ರೇಷ್ಠ ನಟಿ ಕೆಟಗರಿಯಲ್ಲಿ ಪ್ರಶಸ್ತಿ ಸಿಗಲು ಅದೂ ಕಾರಣವಿದ್ದಿರಬಹುದು. ಯಾಕೆಂದರೆ, ಸ್ಪರ್ಧೆಯಲ್ಲಿ ರಮ್ಯಾ, ಪೂಜಾ ಗಾಂಧಿ, ನೀತು, ಡೈಸಿ ಬೋಪಣ್ಣ ತರಹದ ಅನುಭವಿ ನಟಿಯರಿದ್ದರು.

ಪ್ರಶಸ್ತಿ ಬಂದ ನಂತರ ಅವಕಾಶಗಳು ಹೆಚ್ಚಾಗಿ ಬರುತ್ತಿವೆಯೇ?
ಹೌದು. ದೊಡ್ಡ ಬ್ಯಾನರ್‌ಗಳಿಂದಲೂ ಆಫರ್‌ಗಳು ಬರುತ್ತಿವೆ. ಆದರೆ, ಅವು ಯಾವುದು ಅಂತ ಈಗಲೇ ಹೇಳಲು ಸಾಧ್ಯವಿಲ್ಲ. ಸದ್ಯದಲ್ಲೇ ಯಾವ ಚಿತ್ರಕ್ಕೆ ಸಹಿ ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇನೆ.

ನೀವು ಪಾತ್ರ ಆಯ್ಕೆ ಮಾಡಲು ಯಾವ ಮಾನದಂಡ ಅನುಸರಿಸುತ್ತೀರಿ?
ನಾನು ಇದುವರೆಗೂ ನಟಿಸಿರುವ ಚಿತ್ರಗಳಲ್ಲಿ ನನಗೆ ನಿಭಾಯಿಸಲು ದೊಡ್ಡ ಪಾತ್ರವೇ ಇರುವುದನ್ನು ನೀವು ಗಮನಿಸಿರಬಹುದು. ನಾಯಕಿ ಬೇಕು ಎಂಬ ಕಾರಣಕ್ಕೆ ನಾಯಕಿಯಾಗುವವರ ಪೈಕಿ ನಾನಲ್ಲ. ಎರಡು ಹಾಡು, ಐದು ಪುಟದ ಡೈಲಾಗು ಎಂಬ ಲೆಕ್ಕದಲ್ಲಿ ಪಾತ್ರಗಳು ಬಂದರೆ ನಾನು ಖಂಡಿತ ಒಪ್ಪಿಕೊಳ್ಳೋಲ್ಲ.

ನಿಮ್ಮ ದೌರ್ಬಲ್ಯವೇನು?

ನಾನು ತುಂಬಾ ಸೆನ್ಸಿಟಿವ್. ಈ ಇಂಡಸ್ಟ್ರಿಯಲ್ಲಿ ಅಷ್ಟು ಸೆನ್ಸಿಟಿವ್ ಆಗಿರುವುದು ಕಷ್ಟಗಳನ್ನು ಒಡ್ಡುತ್ತದೆ ಅನ್ನಿಸುತ್ತೆ.

ದಿಢೀರನೆ ತುಂಬಾ ಸಣ್ಣ ಆಗಿದ್ದೀರಲ್ಲ, ಯಾಕೆ? ಜೀರೋ ಫಿಗರ್ ಆಗುವ ಉದ್ದೇಶವಾ?
ಅಯ್ಯಪ್ಪಾ... ಅಷ್ಟು ಸಣ್ಣ ಆಗಲು ನಾನು ಸಿದ್ಧವಿಲ್ಲ. ವೈರಲ್ ಫೀವರ್ ಬಂತು. ಹಾಗಾಗಿ ವೀಕ್‌ನೆಸ್‌ನಿಂದ ಸಣ್ಣ ಆಗಿದ್ದೀನಷ್ಟೆ.

ನೀವು ಪಾತ್ರ ಆರಿಸುವಾಗ ಅಪ್ಪ-ಅಮ್ಮ ಸಲಹೆ ಕೊಡುತ್ತಾರಾ?
ನನ್ನ ತೀರ್ಮಾನ ನನ್ನದೇ ಆಗಿರುತ್ತದೆ. ನಾನು ತಪ್ಪು ಮಾಡುತ್ತಿದ್ದೇನೆ ಅನ್ನಿಸಿದರೆ ಅಪ್ಪ-ಅಮ್ಮ ಸಲಹೆ ಕೊಡುತ್ತಾರಷ್ಟೆ. ನನಗೆ ನನ್ನ ತೀರ್ಮಾನಗಳ ಬಗ್ಗೆ ವಿಶ್ವಾಸವಿದೆ.

ನಟಿಯಾಗದೆ ಇದ್ದರೆ ನೀವು ಏನಾಗುತ್ತಿದ್ದಿರಿ?
ನಾನು ನಟಿಯಾದದ್ದು ನಿಜಕ್ಕೂ ಆಕಸ್ಮಿಕ. ಎಂಬಿಎ ಓದಿ ದೊಡ್ಡ ಕೆಲಸ ಹಿಡಿಯಬೇಕು ಅಂತ ಮೊದಲು ಅಂದುಕೊಂಡಿದ್ದೆ. ಬಹುಶಃ ನಟಿಯಾಗದೇ ಇದ್ದರೆ ಅದನ್ನೇ ಮಾಡುತ್ತಿದ್ದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada