»   » ಏ.4ಕ್ಕೆ ಶಿವಮೊಗ್ಗದಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ

ಏ.4ಕ್ಕೆ ಶಿವಮೊಗ್ಗದಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ

Posted By:
Subscribe to Filmibeat Kannada

2007-08ನೇ ಸಾಲಿನ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 4ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದ್ದಾರೆ. ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಪ್ರಶಸ್ತಿಗೆ ಪಾತ್ರರಾದ ಗಣ್ಯರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು.

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಿಂದ ಮುಂದೂಡಲ್ಪಟ್ಟಿದ್ದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 4ಕ್ಕೆ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಂದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ವಿವಿಧ ಪ್ರಶಸ್ತಿಗಳಿಗೆ ಪಾತ್ರರಾದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ನಿಗದಿತ ದಿನಾಂಕದಂದೆ ನಡೆಯಬೇಕು. ಮುಂದಿನ ವರ್ಷದಿಂದ ಪ್ರಶಸ್ತಿ ಪುರಸ್ಕೃತರನ್ನು ಯುಗಾದಿ ಹಬ್ಬದ ದಿನದಂದೇ ಸನ್ಮಾನಿಸಲಾಗುತ್ತ್ತದೆ.ಕನ್ನಡದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಆದರೆ ಅನ್ಯಭಾಷೆಯ ಚಿತ್ರಗಳಿಗೆ ಮಣೆಹಾಕುವ ಪ್ರವೃತ್ತಿಯನ್ನು ಬಿಟ್ಟಿಲ್ಲ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.

'ವಿಮುಕ್ತಿ'ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಪಿ ಶೇಷಾದ್ರಿ ಮಾತನಾಡುತ್ತಾ, ಸದಭಿರುಚಿಯ ಚಿತ್ರಗಳ ಪ್ರದರ್ಶನಕ್ಕಾಗಿ ಬೆಂಗಳೂರಿನ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರವನ್ನು ನೀಡಿ. ಚಿಕ್ಕ ಚಿತ್ರ ಚಿತ್ರಮಂದಿರಗಳ ವ್ಯವಸ್ಥೆಯಾಗಬೇಕಾಗಿದೆ. ಕಳೆದ ವಾರ ಸಿನಿಮಾ ಪ್ರದರ್ಶನಕ್ಕೆ ಕೈಹಾಕಿ ರು.40 ಸಾವಿರ ಕಳೆದುಕೊಂಡೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಅರುಂಧತಿ ನಾಗ್ ಮಾತನಾಡುತ್ತಾ, ಪದ್ಮಶ್ರೀ ಪ್ರಶಸ್ತಿ ಶಂಕರ್ ನಾಗ್ ಗೆ ಸಲ್ಲಬೇಕು, ಈ ಪ್ರಶಸ್ತಿ ತನ್ನದಲ್ಲ.ಶಂಕರ್ ನಾಗ್ ಇದ್ದಿದ್ದರೆ ರಂಗಶಂಕರದಂತಹ 25 ಥಿಯೇಟರ್ ಗಳನ್ನು ಕಟ್ಟಿಸುತ್ತಿದ್ದ ಎಂದರು. ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ಮಾತನಾಡುತ್ತಾ, ಹೊರಗಡೆ ಸಿಗುವ ಗೌರವಕ್ಕಿಂತ ತವರಿನಲ್ಲಿ ಸಿಗುವ ಗೌರವ ದೊಡ್ದದು ಎಂದರು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ ಕೆ ಮೂರ್ತಿ, ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್, ನಿರ್ಮಾಪಕರಾದ ಇ ಕೃಷ್ಣಪ್ಪ, ಸಂದೇಶ್ ನಾಗರಾಜ್, ಶೈಲಜಾ ಸುರೇಶ್, ದುರ್ಗಾನಂದ, ಗೋಪಾಲ್, ನಿರ್ದೇಶಕರಾದ ಅಭಯಸಿಂಹ, ಶಿವಧ್ವಜ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಾರಿಗೆ ಸಚಿವ ಆರ್ ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್, ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada