»   » ಅಂತ 'ಕನ್ವರ್ ಲಾಲ್'ನಾಗಿ ಕಿಚ್ಚ ಸುದೀಪ್

ಅಂತ 'ಕನ್ವರ್ ಲಾಲ್'ನಾಗಿ ಕಿಚ್ಚ ಸುದೀಪ್

Posted By:
Subscribe to Filmibeat Kannada

ರೆಬಲ್ ಸ್ಟಾರ್ ಅಂಬರೀಶ್ ಅಭಿನಯ ಬ್ಲಾಕ್ ಬಸ್ಟರ್ 'ಅಂತ' ಚಿತ್ರವನ್ನು ಕಿಚ್ಚ ಸುದೀಪ್ ರೀಮೇಕ್ ಮಾಡಲಿದ್ದಾರೆ. 'ಅಂತ' ಚಿತ್ರದ ಹಕ್ಕುಗಳನ್ನು ಸುದೀಪ್ ಈಗಾಗಲೆ ಖರೀದಿಸಿದ್ದು, ಚಿತ್ರಕತೆ ರಚನೆಯಲ್ಲಿ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಚಿತ್ರ ಏಪ್ರಿಲ್ ನಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ.

ಅಚ್ಚರಿಯ ವಿಷಯ ಎಂದರೆ ಚಿತ್ರಕ್ಕೆ 'ಕನ್ವರ್ ಲಾಲ್' ಎಂದು ಹೆಸರಿಟ್ಟಿರುವುದು. ಕಾರಣಾಂತರಗಳಿಂದ ಇತ್ತೀಚೆಗೆ ಮುಹೂರ್ತ ಮುಗಿಸಿಕೊಂಡಿದ್ದ 'ದಂಡಂ ದಶಗುಣಂ' ಚಿತ್ರವನ್ನು ಸುದೀಪ್ ಮುಂದೂಡಿದ್ದಾರೆ. 'ದಂಡಂ ದಶಗುಣಂ' ಚಿತ್ರಕ್ಕ್ಕೂ ಮುನ್ನ 'ಕನ್ವರ್ ಲಾಲ್' ಚಿತ್ರವನ್ನು ಸುದೀಪ್ ಕೈಗೆತ್ತಿಕೊಂಡಿರುವುದು ವಿಶೇಷ.

ನಿರ್ಮಾಪಕ ಶಂಕರೇಗೌಡರಿಗಾಗಿ 'ದಂಡಂ ದಶಗುಣಂ' ಚಿತ್ರವನ್ನು ಸುದೀಪ್ ಕೈಗೆತ್ತಿಕೊಂಡಿದ್ದರು. ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಚಿತ್ರಕತೆ 'ದಂಡಂ ದಶಗುಣಂ' ಚಿತ್ರಕ್ಕಿದೆ. ಇದೀಗ ಏಕಾಏಕಿ 'ಕನ್ವರ್ ಲಾಲ್'ನನ್ನು ಮತ್ತೆ ತೆರೆಗೆತರುತ್ತಿದ್ದಾರೆ. ಅಂತ ಚಿತ್ರದಲ್ಲಿ ಅಂಬರೀಶ್ ದ್ವಿಪಾತ್ರಾಭಿನಯ ಮಾಡಿದ್ದರು. ಕನ್ವರ್ ಲಾಲ್ ಚಿತ್ರದಲ್ಲೂ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಹಾಗೂ ಕನ್ವರ್ ಲಾಲ್ ಪಾತ್ರದಲ್ಲಿ ಕಾಣಿಸಲಿದ್ದಾರೆ.

1981ರಲ್ಲಿ ತೆರೆಕಂಡ 'ಅಂತ' ಚಿತ್ರವನ್ನು ಎಸ್ ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿದ್ದರು. ಎಚ್ ಕೆ ಅನಂತರಾಮ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಪಂಡರಿಬಾಯಿ, ಜಯಮಾಲಾ, ಸುಂದರಕೃಷ್ಣ ಅರಸ್, ವಜ್ರಮುನಿ ತಾರಾಗಣದಲ್ಲಿದ್ದರು. ''ಕುತ್ತೆ ಕನ್ವಾರ್ ನಹಿ ಕನ್ವರ್ ಲಾಲ್ ಬೋಲೊ...'' ಎಂಬ ಡೈಲಾಗ್ ಇಂದಿಗೂ ಜನಪ್ರಿಯ. 'ಕನ್ವರ್ ಲಾಲ್' ಚಿತ್ರದ ತಾರಾ ಬಳಗದ ಆಯ್ಕೆ ಇನ್ನೂ ಅಂತಿಮವಾಗಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada