twitter
    For Quick Alerts
    ALLOW NOTIFICATIONS  
    For Daily Alerts

    ವಿಲನ್ ಪಾತ್ರಕ್ಕೂ ಪ್ರವೇಶ ಮಾಡಿದ ಮಂಡ್ಯ ರಮೇಶ್

    By * ಜಯಶ್ರೀ
    |

    Kannada actor Mandya Ramesh
    "ಅಪ್ಪ ನೀವು ಈ ರೀತಿ ಗೆಳೆಯನ ಪಾತ್ರ ಮಾಡೋದು ನನಗೆ ಇಷ್ಟ ಇಲ್ಲ. ಹೀರೋ ಗೆಳೆಯ ಅಂದ್ರೆ ಯಾವಾಗಲು ಹೀರೋ ಕೈಲಿ ಕೀಟಲೆ ಮಾಡಿಸಿಕೊಳ್ಳಬೇಕು, ಯಾರು ಏನೇ ತಮಾಷೆ ಮಾಡಿದ್ರೂ ಗೆಳೆಯನಿಗೆ ಕೋಪ ಬರೋದೆ ಇಲ್ಲ. ಆತ ಅಂದ್ರೆ ಎಲ್ಲರಿಗೂ ಸದರ. ವಿಲನ್ ಆಗಪ್ಪ. ಆಗ ಎಲ್ಲರು ನಿನ್ನನ್ನು ಕಂಡ್ರೆ ಹೆದರುತ್ತಾರೆ, ನೀನು ಹೇಳಿದಂತೆ ಕೇಳ್ತಾರೆ, ಯಾರು ನಿನ್ನನ್ನು ತಮಾಷೆ ಮಾಡಲ್ಲ!"

    ಆ ಕಲಾವಿದರಿಗೆ ತನ್ನ ಕರುಳಬಳ್ಳಿ ಹಿಂದೊಮ್ಮೆ ಹೇಳಿದ ಮಾತು ಹಾಗೆ ಮನದಲ್ಲಿ ಉಳಿದು ಹೋಗಿತ್ತು. ಆ ಕಲಾವಿದ ಮಂಡ್ಯ ರಮೇಶ್. ಯಾವುದೇ ಭಾಷೆಯ ಸಿನಿಮಾ ಆಗಿರಲಿ ಹೀರೋ -ವಿಲನ್ಗಳಷ್ಟೇ ಹೆಚ್ಚು ಗಮನ ಸೆಳೆಯುವ ಪಾತ್ರಗಳಿವೆ. ಅವರನ್ನು ಗೆಳೆಯರು-ಹಾಸ್ಯ -ಪೋಷಕ ಕಲಾವಿದ ಹೀಗೆ ಏನು ಬೇಕಾದರೂ ಹೇಳಬಹುದು. ಪ್ರಸಿದ್ಧ ಹೀರೋ ಇಲ್ಲದೆ ಸಿನಿಮಾ ಮಾಡಬಹುದು. ಆದರೆ ಪ್ರಸಿದ್ಧ ಪೋಷಕ ನಟ ಇಲ್ಲದೆ ಸಿನಿಮಾ ಮಾಡುವುದ ಕಷ್ಟ. ಪ್ರೇಕ್ಷಕ ವರ್ಗಕ್ಕೆ ಇವರ ಡೈಲಾಗ್ ಜೀವಾಳ.

    ಇಂತಹ ಕೆಲಸವನ್ನು ಸುಗಮವಾಗಿ ಮಾಡಿಕೊಂಡು ಬಂದ - ಬರುತ್ತಿರುವವರು ಮಂಡ್ಯ ರಮೇಶ್ ಎನ್ನುವ ಸಜ್ಜನ ನಟ. ರಂಗಕರ್ಮಿ, ನಿರ್ದೇಶಕ, ನಿರೂಪಕ, ಕಲಾ ಸಂಘಟಕ, ರಂಗ ಶಿಕ್ಷಕ ಹೀಗೆ ಹಲವಾರು ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ಬಿಚ್ಚಿ ಹರಡಿರುವ ಮಂಡ್ಯ ರಮೇಶ ಕನ್ನಡ ಕಲಾ ರಂಗದ ಜ್ಞಾನ ಭಂಡಾರ. ಹಿರಿ-ಕಿರಿತೆರೆಗಳಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ರಮೇಶ್ ಎಂದು ಕೊಂಡಾಗ ನೆನಪಿಗೆ ಬರುವ ಸಂಗತಿ ಅವರ ಮನನೋಲ್ಲಾಸ ಹೆಚ್ಚಿಸುವ ಆಪ್ತ ನಗೆ, ಆತ್ಮೀಯ ವರ್ತನೆ ಮತ್ತು ಮೃದು ಮಧುರ ವಿನಯವಂತಿಕೆ ತುಂಬಿದ ಭಾಷೆ.

    ವಾಮನ ಪ್ರತಿಭೆ : ರಮೇಶ್ ಕೇವಲ ಮಂಡ್ಯದಲ್ಲಿ ಮಾತ್ರ ತಮ್ಮ ಪ್ರತಿಭೆ ಹರಡಿಲ್ಲ, ಅವರ ತ್ರಿವಿಕ್ರಮ ಪ್ರತಿಭೆ ರಾಜ್ಯವನ್ನು ದಾಟಿ ದೇಶದ ಎಲ್ಲೆಯನ್ನು ಮೀರಿ ವಿದೇಶಗಳಲ್ಲೂ ತನ್ನ ಪ್ರಭಾವ ಬೀರಿದೆ. ತಾವು ನೋಡಲು ವಾಮನನಂತೆ ಇದ್ದರೂ ತಿವಿಕ್ರಮರಂತೆ ಬೆಳೆದ ಅಭಿಜಾತ ಕಲಾವಿದ ರಮೇಶ್. ತನ್ನ ತಾಯಿನೆಲವಾದ ಮಂಡ್ಯದ ಪ್ರಸಿದ್ಧಿಯನ್ನು ಹರಡಿದ ಈ ಕಲಾವಿದರ ಹೆಮ್ಮೆಯ ಉಸಿರು 'ನಟನ'. ನೀನಾಸಂ ಸುಬ್ಬಣ್ಣ, ರಂಗ ಭೀಷ್ಮ ಬಿ.ವಿ ಕಾರಂತ್ ಅವರಂತೆ 'ನಟನ' ರಮೇಶ್ ಸಹ ರಂಗಭೂಮಿಯಲ್ಲಿ ಅಪರೂಪದ ಹೆಜ್ಜೆ ಗುರುತು ಮೂಡಿಸಿದ್ದಾರೆ ತಮ್ಮ ಸಾಧನೆಯಿಂದ.

    ಬಾಲ್ಯದಲ್ಲಿ ಕಂಡ ನಟನೆಯ ಆಸಕ್ತಿಯನ್ನು ಪೋಷಿಸಿ ಬೆಳೆಸಿದ್ದು ಸಿದ್ಧಪ್ಪ ಮೇಷ್ಟ್ರು. ಆ ಬಳಿಕ ಕಲಾವಿದ ಅಶೋಕ್ ಬಾದರದಿನ್ನಿ ಅವರು ಆಯೋಜಿಸಿದ್ದದ ರಂಗ ತರಬೇತಿ ಶಿಬಿರವು ಕಲೆಯ ಬಗೆಗಿದ್ದ ಆಸಕ್ತಿಯನ್ನು ಮತ್ತಷ್ಟು ಬೆಳೆಸಿತು. ಕೈಗೊಂದು ಸಾಮಾನ್ಯ ಡಿಗ್ರಿ ಪಡೆದ ಈ ಕಲಾವಿದ ಆ ಬಳಿಕ ಗಮನ ನೆಟ್ಟಿದ್ದು ನೀನಾಸಂ ಕಡೆಗೆ. ಅಲ್ಲಿ ನಿರಂತರವಾಗಿ ಒಂದು ವರ್ಷಗಳ ಕಾಲ ಶಾಸ್ತ್ರೋಕ್ತ ಶಿಕ್ಷಣ ಪಡೆದ ರಮೇಶ್, ಆ ಬಳಿಕ ತಮ್ಮನ್ನು ತಾವು ಕಂಡುಕೊಂಡಿದ್ದು ನಟನೆಯ ಮೂಲಕ!

    ಅವರ ಪ್ರೀತಿಯ ನಟನ ಬಗ್ಗೆ ಹೇಳುವುದಾದರೆ ಇದು ಕೇವಲ ರಂಗ ಶಿಬಿರವಲ್ಲ. ಇಲ್ಲಿ ನಟನೆಯ ಜೊತೆಗೆ ಚಿಣ್ಣರಿಗಾಗಿ ಬೇಸಿಗೆ ಶಿಬಿರ ಏರ್ಪಡಿಸುವುದರ ಜೊತೆಗೆ ರಜಾ-ಮಜಾ ಎಂಬ ಕಾರ್ಯಕ್ರಮವನ್ನೂ ಚಿಣ್ಣರಿಗಾಗಿ ನಡೆಸುತ್ತದೆ. ಹಾಡು, ಡ್ಯಾನ್ಸ್, ಕುಶಲಕಲೆ, ಅಭಿನಯ, ಸಾಧಕರ ಜೊತೆಗೆ ಮಾತು ಕತೆ.... ಹೀಗೆ ಮುಂದುವರೆಯುತ್ತದೆ ಪಟ್ಟಿ. ಇಲ್ಲಿ ಯುವಕ-ಯುವತಿಯರಿಗಾಗಿ ಸಿನಿಮಾ -ಕಿರುತೆರೆಯಲ್ಲಿ ಅಭಿನಯ, ನರ್ತನ, ಚಿತ್ರಕಲೆ, ಸಾಹಿತ್ಯ, ಸಂಗೀತ ಎಲ್ಲದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಲಾಗುತ್ತಿದೆ. 'ನಟನ' ನಟನೆಗೆ ಮಾತ್ರ ಸಂಬಂಧ ಪಟ್ಟಿದುದಲ್ಲ, ಸರ್ವತೋಮುಖ ವ್ಯಕ್ತಿತ್ವ ರಚನೆಯ ವಿಶ್ವ ವಿದ್ಯಾಲಯವೆಂದೆ ಹೇಳಬಹುದು.

    ಇವರ ಕನಸಿಗೆ ಬೆಂಬಲವಾಗಿ ನಿಂತಿದ್ದು, ಅವರ ತಂದೆ, ಪತ್ನಿ ಮತ್ತು ಶಿಷ್ಯ ವಲಯ! ಅಪಾರ ಸಂಖ್ಯೆಯ ಶಿಷ್ಯ ಬಳಗದ ಮೆಚ್ಚಿನ ಮೇಷ್ಟರಾದ ಈ ಪ್ರತಿಭಾವಂತ ನಿರೀಕ್ಷಿಸಿರುವಷ್ಟು ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಅವರಲ್ಲಿ ಭಟ್ಟಂಗಿತನದ ಕೊರತೆಯಿಂದ ಪ್ರಾಯಶಃ ಈ ರೀತಿ ಆಗಿರಬೇಕು. ಅದರ ಬಗ್ಗೆ ಎಂದಿಗೂ ಬೇಸರಪಡದ ರಮೇಶ್ ತಮಗೆ ಸಿಕ್ಕ ಅವಕಾಶಗಳಲ್ಲೇ ಪ್ರತಿಭೆಯನ್ನು ಎರಕ ಹೊಯ್ದಿದ್ದಾರೆ.

    ಜೀಕನ್ನಡದಲ್ಲಿ ಪ್ರತಿಭೆ ಪ್ರದರ್ಶನ : ಎಷ್ಟೆಲ್ಲಾ ಪಾತ್ರಗಳನ್ನೂ ಮಾಡಿದ್ರೂ ಸಹ ಮಂಡ್ಯ ರಮೇಶ್ ಅವರ ನಟನೆಗೆ ಚಾಲೆಂಜ್ ಆಗಿರುವ ಪಾತ್ರ ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಚಿ.ಸೌ.ಸಾವಿತ್ರಿ ಧಾರಾವಾಹಿಯಲ್ಲಿ ಸಿಕ್ಕಿದೆ. ಒಬ್ಬ ವ್ಯಕ್ತಿ ಲಂಪಟ, ಹೆಣ್ಣುಬಾಕ, ಕ್ರೂರಿ, ಮೋಸಗಾರ.. ಇನ್ನು ಏನೇನು ಕೆಟ್ಟ ಅಂಶ ಗಳಿವೆಯೋ ಅವೆಲ್ಲವನ್ನು ಹೊಂದಿರುವ ಪಾತ್ರದಲ್ಲಿ ತಮ್ಮ ಪ್ರತಿಭೆ ತೋರುತ್ತಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು ಅವರು ಈ ಪಾತ್ರಕ್ಕೆ ರಮೇಶ್ ಅವರನ್ನು ಆಯ್ಕೆ ಮಾಡಿದಾಗ ಅಯ್ಯೋ ನಾನೊಲ್ಲೆ, ಇದು ನನ್ನಿಂದ ಅಸಾಧ್ಯ ಎಂದು ಹೇಳಿದ್ದರಂತೆ.

    ಆದರೆ ಪಟ್ಟು ಬಿಡದ ಆ ಹೆಣ್ಣುಮಗಳು ಕೊನೆಗೆ ರಮೇಶ್ ಅವರನ್ನು ಖಳ ನಾಯಕರನ್ನಾಗಿ ಮಾಡಿಯೇ ಬಿಟ್ಟಿದ್ದಾರೆ. ಅಪಾರ ಜನಪ್ರಿಯತೆ ಪಡೆದಿರುವ ಈ ಪಾತ್ರ ದಿನೇ ದಿನೇ ಹೆಚ್ಚು ವೀಕ್ಷಕ ವೃಂದ ಪಡೆಯುತ್ತಿರುವುದೇ ಇದರ ವಿಶೇಷತೆ... ಒಟ್ಟಾರೆ ತಮ್ಮ ಒಡಲ ಬಳ್ಳಿಯ ಕನಸನ್ನು ಮಂಡ್ಯ ರಮೇಶ್ ಸಾವಿತ್ರಿ ಮೂಲಕ ನನಸು ಮಾಡಿದ್ದಾರೆ. ಕನ್ನಡದ ಕಲಾರಸಿಕರ ಮನವನ್ನು ತಮ್ಮ ಅದ್ಭುತ ನಟನೆಯಿಂದ ಗೆದ್ದಿದ್ದಾರೆ.

    English summary
    Mandya Ramesh, theatre artist, kananda film actor, teacher, personality developer, is a multi-talented artist in Karnataka film and theatre industry. Natana, a reportory in Mysore is founded by Mandya Ramesh.
    Friday, February 11, 2011, 14:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X