»   » ಹೊಸ ಮುಖಗಳ ಅನ್ವೇಷಣೆಯಲ್ಲಿ ಉಪೇಂದ್ರ

ಹೊಸ ಮುಖಗಳ ಅನ್ವೇಷಣೆಯಲ್ಲಿ ಉಪೇಂದ್ರ

Subscribe to Filmibeat Kannada

ನಟ, ನಿರ್ದೇಶಕ ಉಪೇಂದ್ರ ನಿರ್ದೇಶಿಸಲಿರುವ ಮುಂದಿನ ಚಿತ್ರಕ್ಕೆ 'ಸೂಪರ್' ಚಿನ್ಹೆಯನ್ನು ಆಯ್ಕೆ ಮಾಡಿಕೊಂಡಿರುವುದು ಗೊತ್ತೆ ಇದೆಯಲ್ಲಾ. ಈ ಚಿತ್ರದ ಜಾಹೀರಾತು ಬಂದದ್ದೇ ತಡ ಗಾಂಧಿನಗರದಲ್ಲಿ ಹೊಸ ಸಂಚಲನ ಉಂಟಾಗಿತ್ತು. ಉಪ್ಪಿ ಚಿತ್ರ ಯಾವಾಗ ಸೆಟ್ಟೇರುವುದೋ ಎಂದು ಕುತೂಹಲಿಗಳಾಗಿರುವವರಲ್ಲಿ ವಿತರಕರು, ಚಿತ್ರ ಮಂದಿರದ ಮಾಲೀಕರು, ಹೊಸ ಹಳೆಯ ನಿರ್ದೇಶಕರೂ ಸೇರಿದ್ದಾರೆ.

ಈ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯ ರೈ ಕರೆತರುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಸುದ್ದಿ ಸಹ ಸ್ಫೋಟಗೊಂಡಿತ್ತು.'ಸೂಪರ್' ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮುಹೂರ್ತ ಇದೇ ತಿಂಗಳಲ್ಲಂತೆ; ಇಲ್ಲ ಮುಂದಿನ ತಿಂಗಳಂತೆ ಎನ್ನುವ ಊಹಾಪೋಹಗಳೂ ಇವೆ. ಆದರೆ, ನಿಜ ಯಾವುದೆಂದು ಸ್ಪಷ್ಟಪಡಿಸಲು ಉಪೇಂದ್ರ ಮುಂದಾಗುತ್ತಿಲ್ಲ!

ಇದೀಗ ನಮ್ಮ ಚಿತ್ರಕ್ಕೆ ನಟ, ನಟಿಯರು ಬೇಕಾಗಿದ್ದಾರೆ (ಕಡ್ಡಾಯವಾಗಿ ಕಲಾವಿದರಿಗೆ ಮಾತ್ರ) ಎಂದು ಉಪೇಂದ್ರ ಜಾಹೀರಾತು ನೀಡಿ ಗಾಂಧಿನಗರವನ್ನು ಮತ್ತೊಮ್ಮೆ ಆಶ್ಚರ್ಯದಲ್ಲಿ ಮುಳುಗಿಸಿದ್ದಾರೆ. ಅಂದಹಾಗೆ ಈ ಚಿತ್ರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರೀಕರಣಗೊಳ್ಳಲಿದೆ.

ಉಪೇಂದ್ರ ಚಿತ್ರದಲ್ಲಿ ನಟಿಸಲು ಯುವಕರು, ಯುವತಿಯರು, ಪೋಷಕ ಕಲಾವಿದರು, ಬಾಡಿ ಬಿಲ್ಡರ್ಸ್,ಮಾಡೆಲ್ಸ್, ಗಂಡಸರು, ಹೆಂಗಸರು (17 ರಿಂದ 70 ವಯಸ್ಸು) ಬೇಕಾಗಿದ್ದಾರಂತೆ. ಆಸಕ್ತರು ಅವರ ಭಾವಚಿತ್ರ (Closeup, Full), ವಿಳಾಸ, ದೂರವಾಣಿ ಸಂಖ್ಯೆ ಮತ್ತು ವಿವರಗಳನ್ನು ಡಿಸೆಂಬರ್ 31ರೊಳಗೆ ಕಳುಹಿಸಬೇಕು.

ವಿಳಾಸ: ನಂ.17/A,1ನೇ ಕ್ರಾಸ್, ಬನಶಂಕರಿ 3ನೇ ಹಂತ, ಬೆಂಗಳೂರು-560085. ''ದೊಡ್ಡ ಕನಸನ್ನೇನೋ ಕಾಣುತ್ತಿದ್ದೇನೆ. ಸರ್‌ಪ್ರೈಸ್ ಕೊಡುವ ಉದ್ದೇಶ ನನ್ನದು'' ಎನ್ನುವ ಉಪೇಂದ್ರ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನವನ್ನು ಮಾಡಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...