twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಸ್ಮಾರಕ : 5 ವರ್ಷವಾದರೂ ಸರ್ಕಾರ ನಿರ್ಲಕ್ಷ್ಯ

    By Mahesh
    |

    ಕನ್ನಡ ನಾಡು ಕಂಡ ಅಪ್ರತಿಮ ನಟ, ಸಭ್ಯ ಪ್ರಜೆ ಡಾ. ರಾಜ್ ಕುಮಾರ್ ಅವರ ಸ್ಮಾರಕದ ಸ್ಥಿತಿ ಯಾಕೆ ಹೀಗೆ ಎಂದು ಕಂಠೀರವ ಸ್ಟುಡಿಯೋಗೆ ಕಾಲಿಟ್ಟ ಪ್ರತಿಯೊಬ್ಬ ಅಭಿಮಾನಿಯು ಪ್ರಶ್ನಿಸುತ್ತಿದ್ದಾನೆ. ಡಾ. ರಾಜ್ ವಿಧಿವಶರಾಗಿ ಇಂದಿಗೆ ಐದು ವರ್ಷಗಳು ಕಳೆದಿವೆ. ಅವರ ಪುಣ್ಯತಿಥಿ ಅಂಗವಾಗಿ ಅವರ ಕುಟುಂಬವರ್ಗ, ಅಭಿಮಾನಿಗಳು ರಾಜ್ ಸಮಾಧಿ ಬಳಿ ಆತ್ಮೀಯ ನಮನ ಸಲ್ಲಿಸಿದ್ದಾರೆ. ಎಂದಿನಂತೆ ಪ್ರತಿಯೊಬ್ಬರಿಗೂ ಅನ್ನ ಸಂತರ್ಪಣೆ ನಡೆದಿದೆ. ಇಂದು ಶ್ರೀರಾಮನವಮಿ ಕೂಡಾ ಇರುವುದರಿಂದ ನೀರು ಮಜ್ಜಿಗೆ, ಪಾನಕ ಕೂಡಾ ರಾಜ್ ಅಭಿಮಾನಿಗಳ ಹೊಟ್ಟೆ ತುಂಬಿಸಿದೆ.

    ಇದೆಲ್ಲ ಸರಿ, ಆದರೆ, ಆಮೆಗತಿಯಲ್ಲಿ ಸಾಗಿರುವ ಸ್ಮಾರಕ ನಿರ್ಮಾಣ ಕಾರ್ಯದ ಬಗ್ಗೆ ಹಲವು ಪ್ರಶ್ನಿಸಿ, ಸರಿಯುತ್ತರ ಸಿಗದೇ ರಾಜ್ ಕುಟುಂಬ ಸುಮ್ಮನಾಗಿದೆ. ಡಾ. ರಾಜ್ ಗತಿಸಿ 2 ವರ್ಷವಾದ ನಂತರ ಸ್ಮಾರಕ ನಿರ್ಮಾಣಕ್ಕೆ ಮುಂದಾದ ಸರ್ಕಾರ, 2009ರ ರಾಜ್ಯೋತ್ಸವದ ಹೊತ್ತಿಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿತ್ತು. ಆ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ ಸಿಎಂ, ಇಂದೂ ಕೂಡಾ ರಾಜ್ಯವನ್ನು ಆಳುತ್ತಿದ್ದಾರೆ. ಅವರ ಜೊತೆಗೆ ಮಾತು ಕೊಟ್ಟ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಆರ್ ಆಶೋಕ್, ಅಲ್ಲದೆ ಅನಂತ್ ಕುಮಾರ್ ಕೂಡಾ ಈ ಪ್ರಶ್ನೆಗೆ ಉತ್ತರಿಸಬೇಕಿದೆ.

    ಸುಮಾರು 10 ಕೋಟಿ ವೆಚ್ಚದಲ್ಲಿ ಡಾ.ರಾಜ್ ಸ್ಮಾರಕ ನಿರ್ಮಾಣ ಕಾರ್ಯ 18 ಏಪ್ರಿಲ್ 2006 ರಿಂದ ಆರಂಭವಾಗಿ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಂಠೀರವ ಸ್ಟುಡಿಯೋದ 20 ಎಕರೆ ಜಾಗ ಸಂಪೂರ್ಣವಾಗಿ ರಾಜ್ ಅವರ ನೆನಪಿನಂಗಳವಾಗಿ ನಳನಳಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ್ದರು. ಆದರೆ, ಇಂದಿಗೂ ಪೂರ್ಣಗೊಂಡಿಲ್ಲ. ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 4.75 ಕೋಟಿ ರು ವೆಚ್ಚವಾಗಿದೆ. ಜೂನ್ ವೇಳೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳುತ್ತಾರೆ.

    ಬಿಬಿಎಂಪಿಗೆ ಇನ್ನೂ ಜಾಗ ಸಿಕ್ಕಿಲ್ಲ: ಡಾ. ರಾಜ್ ಪ್ರತಿಮೆಯನ್ನು ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದ ಬಿಬಿಎಂಪಿಗೆ ಇನ್ನೂ ಜಾಗ ಸಿಕ್ಕಿಲ್ಲ. ಒಮ್ಮೆ ಟೌನ್ ಹಾಲ್ ಬಳಿ ಸ್ಥಾಪಿಸಲು ಮುಂದಾಗಿದ್ದು ಬಿಟ್ಟರೆ, ಪ್ರತಿಮೆ ಸ್ಥಾಪನೆ ವಿಷಯವನ್ನು ಸಂಪೂರ್ಣ ಮರೆತಹಾಗೆ ತೋರುತ್ತದೆ. ರಾಜ್ ಅವರ 13 ಅಡಿ ಎತ್ತರದ ಕಂಚಿನ ಪ್ರತಿಮೆ ಯಾವುದೋ ಗ್ಯಾರೆಜ್ ನಲ್ಲಿ ಅನಾಥವಾಗಿ ಬಿದ್ದಿದೆ. ಪುರಭವನದಲ್ಲಿ ರಾಜ್ ಪ್ರತಿಮೆ ಸ್ಥಾಪನೆ ವಿಷಯ ಹೈಕೋರ್ಟ್ ಮೆಟ್ಟಿಲೇರಿದ್ದು, ಕೇಸ್ ಕೂಡಾ ಕುಂಟುತ್ತಾ ಸಾಗಿದೆ.

    ಗಾಜಗೂರಿನ ಮನೆ ಸ್ಮಾರಕವಾಗಲಿ: ಮುತ್ತುರಾಜ್ ಓಡಾಡಿ ಬೆಳೆದ ದೊಡ್ಡ ಗಾಜನೂರಿನ ಮನೆ ಇನ್ನೂ ಸ್ಮಾರಕವಾಗಿಲ್ಲ ಎಂಬ ಕೂಗು ಅರಣ್ಯರೋದನವಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದಲ್ಲಿರುವ ಈ ಊರಿನ ಬಗ್ಗೆ ಎರಡೂ ಸರ್ಕಾರಕ್ಕೆ ಅಕ್ಕರೆ ಇಲ್ಲ. ಡಾ. ರಾಜ್ ಗೆ ತುಂಬಾ ಇಷ್ಟವಾದ ಪೂರ್ವಿಕರ ಮನೆಯನ್ನು ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿ ಕವಿಶೈಲದಂತೆ ರಾಜ್ ಅವರ ದೊಡ್ಡಗಾಜನೂರಿನಲ್ಲೂ ಸ್ಮಾರಕ ಏಕೆ ಆಗಬಾರದು ಎಂದು ರಾಜ್ ಅವರ ಕಿರಿಯ ಸೋದರಿ ನಾಗಮ್ಮ ಸೇರಿದಂತೆ ಬಂಧುಮಿತ್ರರು ಕೇಳುತ್ತಿದ್ದಾರೆ. ಒಟ್ಟಾರೆ, ಕನ್ನಡವನ್ನು ತನ್ನ ಚಿತ್ರಗಳ ಮೂಲಕ ಬೆಳೆಸುತ್ತಾ, ಆದರ್ಶಪ್ರಾಯ ಕನ್ನಡ ಸಂಸ್ಕೃತಿ ಹುಟ್ಟುಹಾಕಿದ ರಾಜ್ ಅವರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಅಕ್ಷಮ್ಯ.

    English summary
    Thousands of people, on Tuesday(Apr.12) gathered at the late actor Rajkumar’s grave in Kanteerava Studios and paid homage to their Kannada Matinee idol on the occasion of his fifth death anniversary. BBMP and Karnataka Government's promise made on Dr.Raj Memorial construction is yet to be fulfilled.
    Tuesday, April 12, 2011, 17:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X