»   »  ಅಭಿಮಾನಿ ದೇವರುಗಳ ಭಕ್ತ ಮರೆಯಾಗಿ ಮೂರು ವರ್ಷ!

ಅಭಿಮಾನಿ ದೇವರುಗಳ ಭಕ್ತ ಮರೆಯಾಗಿ ಮೂರು ವರ್ಷ!

Subscribe to Filmibeat Kannada
Dr. Rajkumar
ಬೆಂಗಳೂರು, ಏ. 12 : ಕರ್ನಾಟಕದ ಸಮಸ್ತ ಕನ್ನಡಿಗರ ಕಣ್ಮಣಿ ನಟಸಾರ್ವಭೌಮ ಡಾ. ರಾಜಕುಮಾರ್ ನೇಪಥ್ಯಕ್ಕೆ ಸರಿದು ಏಪ್ರಿಲ್ 12ಕ್ಕೆ ಸರಿಯಾಗಿ ಮೂರು ವರ್ಷ.

77 ವರ್ಷಗಳ ತುಂಬು ಜೀವನ ನಡೆಸಿ 'ಅಭಿಮಾನಿ ದೇವರು'ಗಳನ್ನು ಅರ್ಧ ಶತಮಾನ ಕಾಲ ಚಿತ್ರಗಳ ಮೂಲಕ ರಂಜಿಸಿದ್ದ ಮುತ್ತುರಾಜ್ ಜನಮಾನಸದಿಂದ ಮರೆಯಾಗಿದ್ದಾರೆಂದು ಇಂದಿಗೂ ಅನ್ನಿಸುವುದಿಲ್ಲ. ಅವರು ನಟಿಸಿದಂಥ ಅನ್ನುವುದಕ್ಕಿಂದ ಜೀವಂತಿಗೆ ತುಂಬಿದ್ದ ವಿಭಿನ್ನ ಪಾತ್ರಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರ ಸಜ್ಜನಿಕೆ ಇಂದಿಗೂ ಅವರನ್ನು ಜೀವಂತವಾಗಿಟ್ಟಿವೆ.

ರಾಜ್ ಮರೆಯಾದಂದಿನಿಂದ ಕನ್ನಡ ಚಿತ್ರರಂಗದಲ್ಲಿ ನಿರ್ವಾತ ಸೃಷ್ಟಿಯಾಗಿದ್ದು ನಿಜವೇ. ಅದನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಭೌತಿಕವಾಗಿ ಅವರಂಥ ಜೀವ ಮತ್ತೊಂದಿಲ್ಲ ಎಂಬ ನೋವು ಎಂದಿಗೂ ಕಾಡುತ್ತಲೇ ಇರುತ್ತದೆ. ಇದು ರಾಜ್ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ರಾಜ್ ಅವರನ್ನು ತಮ್ಮ ಹೃದಯದಲ್ಲಿ ಭದ್ರವಾಗಿಟ್ಟುಕೊಂಡಿರುವ ಅಪಾರ ಜನಸ್ತೋಮ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಗೆ ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದೆ. ರಾಜ್ ಕುಟುಂಬವೂ ಇಂದು ಬಂದು ನಮನ ಸಲ್ಲಿಸಿತು. ಪಾರ್ವತಮ್ಮ, ಶಿವರಾಜ್, ಪುನೀತ್, ರಾಘವೇಂದ್ರ ಮತ್ತು ಕುಟುಂಬವರು ರಾಜ್ ಸಮಾಧಿಗೆ ಆರತಿ ಬೆಳಗಿದರು. ಕನ್ನಡ ಚಿತ್ರರಂಗದ ಅನೇಕ ಗಣ್ಯರು, ಹತ್ತಿರದ ಬಂಧುಗಳು, ಸ್ನೇಹಿತರು ಕೂಡ ರಾಜ್ ಮೂರನೇ ಪುಣ್ಯತಿಥಿಯಂದು ಕಂಬನಿ ಮಿಡಿದರು.

ತಮ್ಮ ಹೃದಯಾಂತರಾಳದಲ್ಲಿ ರಾಜ್ ಅವರನ್ನು ಬಚ್ಚಿಟ್ಟುಕೊಂಡಿರುವ ಕೆಲ ಅಭಿಮಾನಿಗಳು ರಾಜ್ ಕುರಿತು ಹುದುಗಿಸಿಟ್ಟುಕೊಂಡಿದ್ದ ಮಾತುಗಳನ್ನು ಹರಿಬಿಟ್ಟರೆ, ಕೆಲವರ ಮೌನವೇ ಮತಾಗಿತ್ತು. ಇನ್ನು ಕೆಲವರು ಕಂಬನಿ ಮಿಡಿದು ತಮ್ಮ ಭಾವನೆಗಳನ್ನು ಹರಿಬಿಟ್ಟರು. ಎಲ್ಲೆಲ್ಲೂ ರಾಜ್ ಜಯಘೋಷ ಮನೆಮಾಡಿತ್ತು. ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನೂ ಇಂದು ಹಮ್ಮಿಕೊಳ್ಳಲಾಗಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada