»   » 'ತವರಿನ ಋಣ' ಶೂಟಿಂಗ್ ಬಿಟ್ಟು ಪೂಜಾ ಓಡಿದ್ದೇಕೆ?

'ತವರಿನ ಋಣ' ಶೂಟಿಂಗ್ ಬಿಟ್ಟು ಪೂಜಾ ಓಡಿದ್ದೇಕೆ?

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ನಟಿ ಪೂಜಾ ಗಾಂಧಿ ಸಿಕ್ಕಾಪಟ್ಟೆ ಅಪ್‌ಸೆಟ್ ಆಗಿದ್ದಾರೆ. ಇದ್ದಕ್ಕಿದ್ದಂತೆ ಕಣ್ಣೀರಿನ ಮುಂಗಾರುಮಳೆ ಹರಿಸುತ್ತಿದ್ದಾರೆ ! ಏಕೆ ಹೀಗೆ ಎಂಬ ಪ್ರಶ್ನೆ ಮೂಡಿತಾ? ಇತ್ತೀಚೆಗೆ ಪೂಜಾ ಗಾಂಧಿ 'ತವರಿನ ಋಣ" ಹೆಸರಿನ ಶೂಟಿಂಗ್‌ನಲ್ಲಿ ಬಿಜಿ ಇದ್ದರಂತೆ. ಲೊಕೇ ಶನ್: ದೊಡ್ಡಬಳ್ಳಾಪುರ ಸಮೀಪದ ದೊಡ್ಡ ಮದುವೆ ಮಂಟಪ. ಅಲ್ಲಿ ಲಕ್ಷ ಲಕ್ಷ ಸುರಿದು ಸೆಟ್ ಹಾಕಲಾಗಿತ್ತು.

ಇನ್ನೇನು ತಾಳಿ ಕಟ್ಟುವ ಶುಭವೇಳೆ ಬರಬೇಕು; ಡೈರೆಕ್ಟ್ರು ಓಕೆ... ಎಲ್ಲಾ ರೆಡೀನಾ... ಎಂದು ಕೇಳಬೇಕು, ನಾಯಕಿ ಪೂಜಾ ಮೊಬೈಲು ಗಣಗಣ ಗಣಗಣ... ಆ ಕಡೆಯಿಂದ ಏನು ಹೇಳಿದರೋ ಏನೋ, ಈ ಕಡೆಯಿಂದ ಹೌದಾ... ಓ ಮೈ ಗಾಡ್...ಎನ್ನುತ್ತಾ ಪೂಜಾ ಗಾಂಧಿ, ಕಣ್ಣೀರಿನ ಮಡಿಲಲ್ಲಿ ತೇಲಿಹೋದರು. ಅದೇ ಹ್ಯಾಂಗೋವರ್‌ನಲ್ಲಿ ರೂಮಿನ ಕಡೆ ಓಡತೊಡಗಿದರು.

ನಿರ್ದೇಶಕ ರಮೇಶ್ ಕಂಗಾಲು ಕಂಗಾಲು. ಸುತ್ತಲೂ ಇದ್ದ ಜನ, ಕಕ್ಕಾಬಿಕ್ಕಿ... ಅತ್ತ ಪೂಜಾ ಬಿಕ್ಕಿ ಬಿಕ್ಕಿ... ಆದರೆ, ಕಾರಣ ಮಾತ್ರ ಪ್ರಶ್ನಾತೀತ ಪ್ರಶ್ನೆ. ಕೆಲವರು-ಪಾಪ ಯಾರೋ ಹತ್ತಿರದ ಸಂಬಂಧಿಗೆ ಹುಷಾರಿಲ್ಲ ಅನ್ಸುತ್ತೆ. ಅದ್ಕೇ ಮೇಡಮ್ಮು ಕ್ರೈಯಿಂಗು... ಎಂದರು. ಮತ್ತೆ ಕೆಲವರು- ಯಾವ್ದೋ 'ಹೊಸಾ ಪ್ರಾಜೆಕ್ಟು" ಕೈ ತಪ್ಪಿ ಹೋಗುತ್ತೆ ಅಂತ ಅಳ್ತಿರ್‍ಬೇಕು ಎಂದುಕೊಂಡರು... ಅತ್ತ ಅಳುವಿನ ಸದ್ದು ಮತ್ತೆ ಮೊಳಗಿತು.

ಈ ನಡುವೆ ಕೆಲ ಸೆಟ್ ಪ್ರಾಪರ್ಟಿಗಳು ಗುಸು ಗುಸುಗುಡುತ್ತಾ ಹೀಗೆನ್ನತೊಡಗಿದರು; ಮೇಡಮ್ಮು ಸಿಕ್ಕಾಪಟ್ಟೆ ಅಪ್‌ಸೆಟ್ ಆಗವ್ರೆ. ಶೂಟಿಂಗೇ ಕ್ಯಾನ್ಸಲ್ ಮಾಡ್ಬೇಕು ಅಂತ ಹೇಳ್ತವ್ರೆ. ಬಹುಶಃ ಮದ್ವೆ (ಶೂಟಿಂಗ್) ಆಗೋದು ಡೌಟು... ಕೊನೆಗೂ ಅಳುವಿನ ಅಂತರಾಳದ ಗುಟ್ಟೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕೇಬಿಟ್ಟಿತು...

ಪೂಜಾ ಗಾಂಧಿ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ನಾಯಿಮರಿ-ಜರ್ರಿ ಆಕ್ಸಿಡೆಂಟ್‌ನಲ್ಲಿ ತೀರಿಹೋಗಿತ್ತು. ಆ ಸುದ್ದಿ ಹೇಳುವ ಸಲುವಾಗಿ ಆ ಕಡೆಯಿಂದ ಫೋನ್ ಬಂದಿತ್ತು! ಅಲ್ಲಿ ನಾಯಿ ಮರಿ ತಿಂಡಿ ಬೇಕೇ ಎಂದರೂ ಕಣ್ಣುಬಿಡುತ್ತಿಲ್ಲ. ಇಲ್ಲಿ ನಿರ್ಮಾಪಕರು ಶೂಟಿಂಗ್ ಅರ್ಧಕ್ಕೆ ನಿಂತಿರುವುದನ್ನು ಕಂಡು ಬಾಯಿ ಬಿಡುತ್ತಿಲ್ಲ !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada