»   » ‘ಪವಿತ್ರ’ ಬಂಧನ : ಮಣಿ ಹಾಡಿನ ಹುಡುಗಿಗೆ ಕರಿಮಣಿ

‘ಪವಿತ್ರ’ ಬಂಧನ : ಮಣಿ ಹಾಡಿನ ಹುಡುಗಿಗೆ ಕರಿಮಣಿ

Posted By: Super
Subscribe to Filmibeat Kannada

ಪವಿತ್ರಲೋಕೇಶ್‌ ಈಗ ಪವಿತ್ರಕಿರಣ್‌. ಜನುಮದ ಜೋಡಿ ಚಿತ್ರದಲ್ಲಿ ಮಣಿ ಎನ್ನುವ ಪುಟ್ಟ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಪವಿತ್ರಲೋಕೇಶ್‌ ಈಗ ಕರಿಮಣಿ ಭೂಷಿತೆ.

ಪವಿತ್ರ ಲೋಕೇಶ್‌ ಮದುವೆಗೆ ವೇದಿಕೆ ಕಲ್ಪಿಸಿದ್ದು ಪತ್ರಿಕೆಗಳಲ್ಲಿನ ಜಾಹಿರಾತು ಅಂಕಣ. ಮದುವೆಯಾಗಬೇಕು ಎಂದು ಅನ್ನಿಸಿದ ತಕ್ಷಣ ಪವಿತ್ರ ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟರು. ಜಾಹಿರಾತಿಗೆ ಬಂದ ನಾಲ್ಕು ಪ್ರತಿಕ್ರಿಯೆಗಳಲ್ಲಿ, ಅವರು ಆಯ್ಕೆ ಮಾಡಿದ ಗಂಡು- ಸೂರ್ಯಕಿರಣ್‌.

ಹೈದರಾಬಾದ್‌ನಲ್ಲಿ ನೆಟ್‌ಲಿಂಕ್ಸ್‌ ಎಂಬ ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥನಾಗಿರುವ ಸೂರ್ಯಕಿರಣ್‌, ಮದುವೆ ನಂತರ ಟಿ.ವಿ ಅಥವಾ ಸಿನಿಮಾದಲ್ಲಿ ನಟಿಸೋದು ಬೇಡ ಅಂದಿದ್ದರಂತೆ. ಆದರೆ, ಗುಪ್ತಗಾಮಿನಿ ಸೀರಿಯಲ್‌ ನೋಡಿದ ನಂತರ ಪವಿತ್ರಾರ ಬಣ್ಣದ ಬದುಕಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.

ತಿಂಗಳ ಅರ್ಧಭಾಗ ಶೂಟಿಂಗ್‌, ಉಳಿದರ್ಧ ಭಾಗದಲ್ಲಿ ಗೃಹಿಣಿ ಕೆಲಸ ಮಾಡುವ ಭರವಸೆಯನ್ನು ಸೂರ್ಯಕಿರಣ್‌ಗೆ ಪವಿತ್ರ ನೀಡಿದ್ದಾರೆ. ಗುಪ್ತಗಾಮಿನಿ ಸೀರಿಯಲ್‌ನಲ್ಲಿನ ಪಾತ್ರದ ಬಗೆಗೆ ಪವಿತ್ರಾಗೆ ತುಂಬು ಅಭಿಮಾನ. ನಾನು ಈವರೆಗೆ ನಟಿಸಿದ 45 ಸಿನಿಮಾಗಳಲ್ಲಿ ದಕ್ಕದ ಕೀರ್ತಿ ಹಾಗೂ ತೃಪ್ತಿ ಈ ಸೀರಿಯಲ್‌ನಿಂದ ಸಿಕ್ಕಿದೆ ಎಂದು ಪವಿತ್ರ ಹೇಳುತ್ತಾರೆ.

ಬಣ್ಣವಿದ್ದರೂ ಫಲವಿಲ್ಲ : ನನಗೆ ಎಲ್ಲರೂ ಅಸೂಯೆಪಡುವಷ್ಟು ಒಳ್ಳೆಯ ಎತ್ತರ, ಒಳ್ಳೆಯ ಬಣ್ಣವಿದೆ. ಆದರೆ ಕನ್ನಡ ಚಿತ್ರರಂಗ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಪವಿತ್ರಾಗೆ ಸಿಟ್ಟು. ಗಂಡನ ದೆಸೆಯಿಂದ ಈಗ ಹೈದರಾಬಾದ್‌ನಲ್ಲಿ ಅವರು ನೆಲೆಸಿದ್ದಾರೆ. ಗಂಡನ ಕೈಹಿಡಿದ ಮೇಲೆ ತೆಲುಗಿನ ಚಿತ್ರವೊಂದರಲ್ಲಿ ಪವಿತ್ರಾಗೆ ಒಳ್ಳೆಅವಕಾಶ ಸಿಕ್ಕಿದೆ.

ಮಲ್ಲ ಚಿತ್ರದಲ್ಲಿ ರವಿಚಂದ್ರನ್‌ ಮೇಲೆ ಕಾಮುಕಿಯಂತೆ ಬೀಳೋ ಪಾತ್ರ ಪವಿತ್ರಾಗೆ ತುಂಬಾನೇ ಇಷ್ಟವಾಗಿದೆ. ಚಿತ್ರ ವೊಂದರಲ್ಲಿ ಈಜುಡುಗೆ ಧರಿಸಲು ನಕರಾ ಮಾಡಿ ಒಂದಿಡೀ ದಿನ ಅತ್ತದ್ದು, ಒತ್ತಾಯಕ್ಕೆ ಮಣಿದದ್ದು ಪವಿತ್ರಾಗೆ ಹಸಿಹಸಿ ನೆನಪು.

ಭಾಷೆಯ ತೊಡಕಿನಿಂದಾಗಿ ಅತ್ತೆ ಜೊತೆ ಸದ್ಯಕ್ಕೆ ಗದ್ದಲವಿಲ್ಲ. ಗಂಡನೊಂದಿಗೆ ಇಂಗ್ಲೀಷ್‌ ಪ್ರೀತಿ. ಮೈಸೂರು ಲೋಕೇಶ್‌ ಮಗಳೆಂದು ಚಿತ್ರರಂಗಕ್ಕೆ ಎಂಟ್ರಿಯಾದರು ಸಹಾ, ತಮ್ಮ ಪ್ರತಿಭೆಯಿಂದಲೇ ಬೆಳೆದವರು ಪವಿತ್ರ. ಚಿತ್ರನಟಿಯರ ದಾಂಪತ್ಯ ಬದುಕುಗಳು ಸಾರ್ಥಕತೆ ಪಡೆದ ಉದಾಹರಣೆಗಳು ಕೆಲವು ಮಾತ್ರ. ಅಂತಹ ಸಾಲಿಗೆ ಪವಿತ್ರ ಸೇರಲಿ ಎನ್ನುವ ಆಶಯ ನಮ್ಮದು.

ವಿವಾದದ ಗಿಫ್ಟ್‌ : ವಿವಾಹದ ಸಂಭ್ರಮದ ಗುಂಗಲ್ಲಿರುವಾಗಲೇ ಪವಿತ್ರ ಲೋಕೇಶ್‌ಗೆ 'ಅಮಾಸ" ಚಿತ್ರದ ನಿರ್ಮಾಪಕ ಕೃಷ್ಣೇಗೌಡ ವಿವಾದದ ಗಿಫ್ಟ್‌ ನೀಡಿದ್ದಾರೆ. ಪವಿತ್ರಮ್ಮನ ನಕರಾಗಳ ಬಗ್ಗೆ ಅವರಿಗೆ ಸಿಟ್ಟು ಬಂದಿದೆ.

'ಅಮಾಸ" ಚಿತ್ರಕ್ಕೆ ಈಕೆಗೆ ಛಾನ್ಸು ನೀಡಿದ್ದಲ್ಲದೇ, ದಿನಕ್ಕೆ ಆರು ಸಾವಿರ ಸಂಭಾವನೆ(ಈಯಮ್ಮನ ರೇಟು ನಾಲ್ಕು ಸಾವಿರವಂತೆ) ನೀಡಿದ್ದೇನೆ. ಶೂಟಿಂಗ್‌ಗಂತೂ ಸರಿಯಾಗಿ ಹೇಳಿದ ಸಮಯಕ್ಕೆ ಬರಲೇ ಇಲ್ಲ. ಇದೆಲ್ಲಾ ಸಾಲದು ಅಂತ ನಮ್ಮ ಬಗ್ಗೆ ಸುಳ್ಳುಆರೋಪ ಮಾಡುತ್ತಿದ್ದಾರೆ ಎನ್ನುವ ದೂರು ಕೃಷ್ಣೆಗೌಡರದು.

ಕೆರೆಯಲ್ಲಿ ಬಟ್ಟೆ ತೊಳೆಯುವ ಸನ್ನಿವೇಶ 'ಅಮಾಸ"ಚಿತ್ರದಲ್ಲಿದೆ. ನೈಜತೆ ಬರಲೆಂದು ಮೊಣಕಾಲ ಮಟ್ಟಕ್ಕೆ ಸೀರೆ ಎತ್ತಲು ಹೇಳಿದರೆ, ಸತಿ ಸಾವಿತ್ರಿಯಂತೆ ಒಪ್ಪಲೇ ಇಲ್ಲ. ಅಲ್ಲಿ ಅಶ್ಲೀಲತೆಯ ಪ್ರಶ್ನೆಯೇ ಇರಲಿಲ್ಲ. ಆದರೆ 'ಮೊಂಡ" ಚಿತ್ರದಲ್ಲಿ ಈಯಮ್ಮ ಹಾಕಿರೋ ಬಟ್ಟೆ ನೋಡಿದರೆ... ಎಷ್ಟು ಅಸಹ್ಯ ಆಗುತ್ತೆ ಎನ್ನುತ್ತಾರೆ ಕೃಷ್ಣೆಗೌಡರು. ಪವಿತ್ರಾ ಲೋಕೇಶ್‌ ಪ್ರತಿಕ್ರಿಯೆ ಲಭ್ಯವಾಗಿಲ್ಲ . ಅವರು ಹೈದರಾಬಾದ್‌ ಹಾಗೂ ಶೂಟಿಂಗ್‌ ನಡುವೆ ಕಳೆದುಹೋಗಿದ್ದಾರೆ.

English summary
Kannada actress Pavitra Lokesh weds Soorya Kiran, Hyderabad guy

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X