»   » ಶೇಕಡಾವಾರು ಹಂಚಿಕೆ ಮತ್ತು ಟೆನ್ತ್ ಪಾಠ

ಶೇಕಡಾವಾರು ಹಂಚಿಕೆ ಮತ್ತು ಟೆನ್ತ್ ಪಾಠ

Posted By: *ಜಯಂತಿ
Subscribe to Filmibeat Kannada

ಈಗಿರುವ ಥಿಯೇಟರ್‌ಗಳ ಬಾಡಿಗೆ ಪದ್ಧತಿ ಕೈಬಿಟ್ಟು, ಶೇಕಡಾವಾರು ಲೆಕ್ಕದಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ದೊರೆಯಬೇಕು ಎಂದು ನಿರ್ಮಾಪಕರ ಸಂಘ ವಾದ ಮಂಡಿಸುತ್ತಿದೆಯಷ್ಟೇ. ಈ ಶೇಕಡಾವಾರು ಲೆಕ್ಕಾಚಾರ ಜಾರಿಗೆ ಬಂದರೆ ಥಿಯೇಟರ್‌ಗಳ ಸ್ಥಿತಿಗತಿ ಹೇಗಿರಬಹುದು?

ಕಳೆದ ವಾರ ಹೀಗಾಯಿತು; ದಿಲ್ ಸತ್ಯ ನಿರ್ದೇಶನದ 'ಟೆನ್ತ್ ಕ್ಲಾಸ್ ಎ ಸೆಕ್ಷನ್' ಸಿನಿಮಾ ಕಳೆದ ವಾರ ತೆರೆಕಂಡಿದ್ದು ನೆನಪಿದೆಯಷ್ಟೇ. ಈ ಚಿತ್ರವನ್ನು ನೋಡಲಿಕ್ಕೆ ಸಂಪ್ರದಾಯದಂತೆ ಪತ್ರಕರ್ತರಿಗೆ ಆಹ್ವಾನ ತಲುಪಿತ್ತು. ಬೆಳಗಿನ 10.30ರ ಪ್ರದರ್ಶನ ವೀಕ್ಷಿಸಲೆಂದು ಪತ್ರಕರ್ತರು ಚಿತ್ರಮಂದಿರಕ್ಕೆ ಬಂದದ್ದೂ ಆಯಿತು. ಸಿನಿಮಾದ ವೀಕ್ಷಣೆಗೆ ದೃಢಮನಸ್ಸಿನಿಂದ ಕಾದುಕೂರುವ ಪರಿಸ್ಥಿತಿ ಪತ್ರಕರ್ತರದ್ದು.

ಸಮಯ 10.40 ಮೀರಿದರೂ ಟೆನ್ತ್ ಕ್ಲಾಸ್ ಪ್ರದರ್ಶನ ಶುರುವಾಗಲೇ ಇಲ್ಲ. ತೊಂದರೆ ಏನು? ಎಂದು ಪತ್ರಕರ್ತರು ಸುತ್ತಮುತ್ತ ಕಣ್ಣಾಡಿಸಿದರೆ ಕಾಣಿಸಿದ್ದು ಖಾಲಿ ಕುರ್ಚಿಗಳ ಸಾಲು! ಸಿನಿಮಾ ನೋಡಲಿಕ್ಕೆ ಬಂದ ಏಳು ಪತ್ರಕರ್ತರನ್ನು ಹೊರತುಪಡಿಸಿದರೆ ಚಿತ್ರಮಂದಿರದೊಳಗೆ ನರಪಿಳ್ಳೆಯೂ ಇಲ್ಲ! ಇದೇನಪ್ಪಾ ಗ್ರಹಚಾರ ಎಂದುಕೊಳ್ಳುತ್ತಿರುವಾಗ್ಗೆ ಮತ್ತಿಬ್ಬರು, ಆನಂತರ ಮತ್ತೊಬ್ಬರು ಪತ್ರಕರ್ತರು ಪ್ರತ್ಯಕ್ಷವಾದರು. ಆದರೆ ಹತ್ತೂ ಐವತ್ತಾದರೂ ಪ್ರದರ್ಶನ ಆರಂಭವಾಗಲಿಲ್ಲ.

ಪ್ರದರ್ಶನ ರದ್ದಾಗುತ್ತೋ ಏನೋ ಎನ್ನುವ ಶಂಕೆ ಪತ್ರಕರ್ತರದ್ದು. ಅಷ್ಟರಲ್ಲೇ ಒಂದಷ್ಟು ಹುಡುಗರು ಚಿತ್ರಮಂದಿರದಲ್ಲಿ ಇಣುಕಿದರು. ನೋಡನೋಡುತ್ತಿದ್ದಂತೆ ನೂರಾರು ವಿದ್ಯಾರ್ಥಿಗಳು! ಎಲ್ಲರೂ ಹೈಸ್ಕೂಲು ಹುಡುಗ ಹುಡುಗಿಯರು. ಟೆನ್ತ್‌ಕ್ಲಾಸ್ ಮಾಡಲಿಕ್ಕೆ ವಿದ್ಯಾರ್ಥಿಗಳು ಮಾಸ್ ಬಂಕ್ ಮಾಡಿದರಾ? ಗೊತ್ತಿಲ್ಲ, ನಿರ್ಮಾಪಕರು ಮಾತ್ರ ತರುಣ ತರುಣಿಯರನ್ನು ಚಿತ್ರಮಂದಿರಕ್ಕೆ ಕರೆತರಲು ಯಶಸ್ವಿಯಾಗಿದ್ದರು! ಮಾರ್ಗ ಯಾವುದೆನ್ನುವುದು ಅರ್ಥವಾಯಿತು ತಾನೆ? ಇದೇ ಕಹಿ ಪ್ರಸಂಗ ನಂತರದ ಪ್ರಸಂಗಗಳಲ್ಲೂ ಪುನರಾವರ್ತನೆಯಾಯಿತು.

ಮೊದಲ ದಿನದ ಕಹಿ ಅನುಭವದ ನಂತರ ಎಚ್ಚತ್ತ ಟೆನ್ತ್ ತಂಡ, ವಿದ್ಯಾರ್ಥಿಗಳಿಗೆ ಥಿಯೇಟರ್‌ನ ಟಿಕೇಟ್ ದರದಲ್ಲಿ ಅರ್ಧದಷ್ಟು ಸೋಡಿ ನೀಡುವುದಾಗಿ ಜಾಹಿರಾತು ನೀಡಿದೆ. ಇದಕ್ಕೆ ಮೊದಲು 'ಆಟೊ' ಚಿತ್ರ ಉಚಿತ ಪ್ರದರ್ಶನ ಏರ್ಪಡಿಸಿದ್ದು ನೆನಪಿದೆ ತಾನೆ? ಈಗ ಕಲ್ಪಿಸಿಕೊಳ್ಳಿ. ಟೆನ್ತ್‌ಕ್ಲಾಸ್ ಹಾಗೂ ಆಟೋದಂಥ ಚಿತ್ರಗಳೇ ತುಂಬಿತುಳುಕುತ್ತಿರುವ ಸಂದರ್ಭದಲ್ಲಿ ಶೇಕಡಾವಾರು ಹಂಚಿಕೆ ಬಂದರೆ ಹೇಗಿರುತ್ತದೆ? ಹಂಚಲಿಕ್ಕೆ ಏನುಳಿದಿದೆ ಅನ್ನುವಿರಾ? ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್. ಚಂದ್ರು ಅವರಂತೂ ಏನೋ ಉಳಿದಿದೆ ಎನ್ನುವ ಆಶಾಭಾವದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada