»   »  ಮರುಕಳಿಸಿದ ಮಿನುಗು ತಾರೆ ಕಲ್ಪನಾ ನೆನಪು

ಮರುಕಳಿಸಿದ ಮಿನುಗು ತಾರೆ ಕಲ್ಪನಾ ನೆನಪು

Posted By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada
Minugu Taare Kalpana
'ಮಿನುಗು ತಾರೆ' ಕಲ್ಪನಾ ಅವರು ಕನ್ನಡ ಚಿತ್ರರಸಿಕರನ್ನು ಅಗಲಿ ಮೇ.13, 2009ಕ್ಕೆ 30 ವರ್ಷಗಳಾಗುತ್ತವೆ. ಅವರ ಅಗಲಿಕೆ ಮೂರು ದಶಕಗಳಷ್ಟು ಸುದೀರ್ಘವಾಗಿದ್ದರೂ ನೆನಪು ಮಾತ್ರ ಹಸಿರಾಗಿದೆ. ಕನ್ನಡಿಗರ ಹೃದಯದಲ್ಲಿ ಇನ್ನೂ ಮಿನುಗುತ್ತಿದ್ದಾರೆ ಎಂಬುದಕ್ಕೆ ಇದೇ ನಿದರ್ಶನ.

ಬೆಳ್ಳಿ ಮೋಡ, ಗೆಜ್ಜೆ ಪೂಜೆ, ಹಣ್ಣೆಲೆ ಚಿಗುರಿದಾಗ, ಶರಪಂಜರ, ಉಯ್ಯಾಲೆ, ಎರಡು ಕನಸು, ಕರುಳಿನ ಕರೆ, ದೇವರ ಮಕ್ಕಳು, ಬಯಲು ದಾರಿ, ಕಪ್ಪು ಬಿಳುಪು...ಚಿತ್ರಗಳನ್ನು ನೋಡಿದಾಗ ಈ ದುರಂತ ನಾಯಕಿಯ ನಟನಾ ಪ್ರೌಢಿಮೆ ಇಂದಿಗೂ ಅದ್ಭುತ ಎನ್ನಿಸುತ್ತದೆ. ಬಿ ಆರ್ ಪಂತುಲು ಅವರ 'ಸಾಕು ಮಗಳು'ಚಿತ್ರದ ಮೂಲಕ ಕಲ್ಪನಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಎಸ್ ಆರ್ ಪುಟ್ಟಣ್ಣ ಕಣಗಾಲ್ ಅವರ ಮಾಂತ್ರಿಕ ಸ್ಪರ್ಶದ 'ಬೆಳ್ಳಿ ಮೋಡ'ಚಿತ್ರದ ಮೂಲಕ ಮಿನುಗು ತಾರೆಯಾಗಿ ಹೆಸರಾದರು. ಒಂದು ದಶಕಕ್ಕೂಹೆಚ್ಚು ಕಾಲ ಕನ್ನಡ ಚಿತ್ರರಂಗ ಕಲ್ಪನಾರಿಗೆ ನಂಬರ್ 1 ಪಟ್ಟದಲ್ಲಿ ಕೂರಿಸಿತ್ತು.

ಬೆಂಗಳೂರಿನ ಫ್ರೆಜರ್ ಟೌನ್ ನಲ್ಲಿ ವಾಸವಾಗಿದ್ದ ಕಲ್ಪನಾ ಅವರ ಮನೆ ಕಲಾತ್ಮಕ ಬದುಕಿಗೆ ಕನ್ನಡಿ ಹಿಡಿಯುವಂತಿತ್ತು. ಇದೇನು ಸಭ್ಯತೆ...ಇದೇನು ಸಂಸ್ಕೃತಿ ಎಂದು ಹಾಡಿದ ಗೀತೆ ಅವರ ಬಾಳಿನಲ್ಲಿ ನಿಜವಾಗಲಿಲ್ಲ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಅವರ ವೈಯಕ್ತಿಕ ಬದುಕು ಅದೇನೇ ಇರಲಿ, ಬಯಲು ದಾರಿ ಚಿತ್ರದಲ್ಲಿ ಅನಂತನಾಗ್ ಹಾಡಿದ ಎಲ್ಲಿರುವೆ...ಮನವ ಕಾಡುವ ರೂಪಸಿಯೇ...ಎಂಬ ಹಾಡು ಮಾತ್ರ ಸದಾ ಕಲ್ಪನಾ ಅವರ ನೆನಪನ್ನು ಕಾಡದೆ ಬಿಡುವುದಿಲ್ಲ. ಅಂತಹ ನಟಿಯ ಬಗ್ಗೆ ಇಂದಿನ ತಾರೆಗಳು ಏನನ್ನುತ್ತಾರೆ?

ರಕ್ಷಿತಾ: ಭಾರತೀಯ ಚಿತ್ರರಂಗ ಇದುವರೆಗೂ ಕಲ್ಪನಾರಂತಹ ಪ್ರತಿಭಾವಂತ ನಟಿಯನ್ನು ಖಂಡಿಲ್ಲ. ತನ್ನ ಪಾತ್ರ ಪೋಷಣೆಯಲ್ಲಿ ಅದ್ಭುತ ಪ್ರೌಢಿಮೆ ಮೆರೆದಂತಹ ನಟಿ. ಹಾಗಾಗಿಯೇ ಜನ ಇಂದಿಗೂ ಅವರನ್ನು ನೆನಪಿಟ್ಟುಕೊಂಡಿದ್ದಾರೆ. ನನ್ನ ಮಟ್ಟಿಗೆ 'ಶರಪಂಜರ'ಚಿತ್ರ ಇಂದಿಗೂ ಅತ್ಯುತ್ತಮ ಚಿತ್ರ.ಈ ಚಿತ್ರವನ್ನು ನಾನು ಎಷ್ಟು ಇಷ್ಟಪಟ್ಟಿದ್ದೇನೆ ಎಂದರೆ ಆ ಪಾತ್ರವನ್ನು ನಾನೂ ಮಾಡಬೇಕು ಎಂಬಷ್ಟು.

ವಿನಯಾ ಪ್ರಸಾದ್: ಕಲ್ಪನಾ ಅವರ ಎಲ್ಲ ಪಾತ್ರಗಳು ರೋಚಕ ಮತ್ತು ರಮ್ಯವಾಗಿದ್ದವು. ಅವರು ನಮ್ಮಂತಹ ಕಲಾವಿದರಿಗೆ ಇಂದಿಗೂ ಮಾದರಿ.ಬೆಳ್ಳಿ ಮೋಡ, ಗೆಜ್ಜೆ ಪೂಜೆ ಚಿತ್ರಗಳು ನನಗಿಷ್ಟ. ಶರಪಂಜರ ಚಿತ್ರದ ಅವರ ಪಾತ್ರ ನನ್ನನ್ನು ಸದಾ ಕಾಡುತ್ತಿರುತ್ತದೆ. ಆ ಪಾತ್ರ ಎಂತಹ ಕಲಾವಿದರಿಗೂ ಸವಾಲಿದ್ದಂತೆ. ಆ ರೀತಿ ನಟಿಸುವುದು ಅಷ್ಟು ಸುಲಭವಲ್ಲ. ನನ್ನ ಜೀವನದಲ್ಲಿ ಒಮ್ಮೆಯಾದರೂ ಆ ರೀತಿಯ ಪಾತ್ರ ಮಾಡಬೇಕು ಎಂದು ಹಂಬಲಿಸುತ್ತಿದ್ದೇನೆ.

ಪೂಜಾಗಾಂಧಿ: ಕಲ್ಪನಾ ಅವರು ಪ್ರತಿಭಾವಂತ ನಟಿ. ಚಿತ್ರರಂಗಕ್ಕೆ ಬರುವ ಹೊಸಬರಿಗೆ ಗೆಜ್ಜೆ ಪೂಜೆ ನೋಡಲು ನಾನು ಯಾವಾಗಲೂ ಸಲಹೆ ನೀಡುತ್ತಿರುತ್ತೇನೆ. ಪಾತ್ರ ಪೋಷಣೆಗಾಗಿ ಅವರು ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ ರೀತಿ, ಅಚ್ಚುಕಟ್ಟಾದ ನಿರ್ವಹಣೆಯನ್ನು ಕೇಳಿ ತಿಳಿದುಕೊಂಡಿದ್ದೇನೆ. ಅವರು ಅಭಿನಯಿಸಿರುವ ಯಾವುದೇ ಚಿತ್ರದಲ್ಲಿ ನಾನೂ ನಟಿಸಬೇಕೆಂಬ ಆಸೆ ಇದೆ.

ಭಾವನಾ ರಾವ್: ಕಲ್ಪನಾ ಅವರನ್ನುನೆನಸಿಕೊಂಡಾಗಲೆಲ್ಲಾ ಗೆಜ್ಜೆ ಪೂಜೆ ನೆನಪಾಗುತ್ತದೆ. ಅವರ ನಟನೆ ಸಹಜ ಸುಂದರವಾಗಿರುತ್ತಿತ್ತು. ಅವರ ಪಾತ್ರಗಳನ್ನು ಮಾಡುವುದೆಂದರೆ ನಿಜಕ್ಕೂ ಒಂದು ದೊಡ್ಡ ಸವಾಲು.

ನೀತೂ: ನನ್ನ ಮೆಚ್ಚಿನ ಹಳೆ ತಾರೆಗಳಲ್ಲಿ ಕಲ್ಪನಾ ಅವರಿಗೆ ಮೊದಲ ಸ್ಥಾನ. ಒಂದು ವೇಳೆ ಚಾನ್ಸ್ ಸಿಕ್ಕಿದರೆ ಅವರ ಎಲ್ಲ ಪಾತ್ರಗಳಲ್ಲೂ ನಟಿಸುತ್ತೇನೆ. ಮುಖ್ಯವಾಗಿ ಹೇಳಬೇಕಾದರೆ ಬೆಳ್ಳಿಮೋಡ, ಬಯಲು ದಾರಿ, ಎರಡು ಕನಸು ಹಾಗೆಯೇ ಗೆಜ್ಜೆ ಪೂಜೆ ಚಿತ್ರಗಳು ನನ್ನನ್ನು ಯಾವಗಲೂ ಕಾಡುತ್ತಿರುತ್ತವೆ.


ಇದನ್ನೂ ಓದಿ
ಧ್ವನಿಸುರುಳಿಯಾಗಿ ರಜನಿಕಾಂತ್ ಕನ್ನಡ ಕೃತಿ!
ಶತಕ ಬಾರಿಸಿದ ಅಂಬಾರಿ; ರು.5 ಕೋಟಿ ಲಾಭ!
ಸದ್ಯಕ್ಕೆ ಬೀಸೋದೊಣ್ಣೆಯಿಂದ ಪಾರಾದ ಶ್ರುತಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada