»   » ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ

Posted By: *ವಿಕ ಸುದ್ದಿಲೋಕ
Subscribe to Filmibeat Kannada

'ಅಲ್ಲಾರಿ... ಕಂಡವರ ಮಕ್ಕಳ ಬಗ್ಗೆಯೇ ನನಗೆ ಕೆಟ್ಟದಾಗಿ ಯೋಚಿಸಲು ಆಗಲ್ಲ.ಅಂಥದ್ದರಲ್ಲಿ ನನ್ನ ಸ್ವಂತ ಮಗುವನ್ನು ನಾನೇ ಕೊಲ್ತೀನಾ?' ಎನ್ನುತ್ತಾ ಅಭಿನಯ ಶಾರದೆ ಜಯಂತಿ ಕಣ್ಣೀರಾದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಶನಿವಾರ ಬಾದಾಮಿ ಹೌಸ್‌ನಲ್ಲಿ ಏರ್ಪಡಿಸಿದ್ದ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಮಾತನಾಡಿದರು.

'ಜಯಂತಿ ದುಡ್ಡು ತಿಂದ್ಲು ಅಂತ ಅಪಪ್ರಚಾರಮಾಡಿದರು.ಆದರೆ, ಅವರೆಲ್ಲ ನನ್ನ ಹಣವನ್ನೇ ಬಾಚಿಕೊಂಡು ಹೋದರು. ಇಂಥ ವಿಷಯಗಳೆಲ್ಲ ಹೊರಗೇ ಬರೋದಿಲ್ಲ...' ಎಂದು ಮತ್ತೊಮ್ಮೆ ಕಣ್ಣೀರಾದರು. ಚಿಕ್ಕಬಳ್ಳಾಪುರದಲ್ಲಿ ತಾವು ಲೋಕಸಭೆ ಚುನಾವಣೆ ಎದುರಿಸಿದ ಸಂದರ್ಭ ದಲ್ಲಿ ನಡೆದ ಪಿತೂರಿಯನ್ನು ಮೆಲುಕು ಹಾಕಿ, ನನಗೆ ಸಮಾಜಸೇವೆ ಮಾಡುವ ಉದ್ದೇಶವಿತ್ತೇ ಹೊರತು ರಾಜಕೀಯದ ಆಸೆ ಇರಲಿಲ್ಲ. ಆದರೆ,ರಾಮಕೃಷ್ಣ ಹೆಗಡೆ ಮತ್ತು ಜೀವರಾಜ ಆಳ್ವರ ಒತ್ತಾಯಕ್ಕೆ ಮಣಿದು ಚುನಾವಣೆಗೆ ನಿಂತೆ.

ಚುನಾವಣೆಗೆ ಅಭ್ಯರ್ಥಿ ನಿಲ್ಲಿಸೋದು ದೊಡ್ಡದಲ್ಲ. ಅವರನ್ನು ಗೆಲ್ಲುವಂತೆ ನೋಡಿಕೊಳ್ಳುವುದು ದೊಡ್ಡಸ್ತಿಕೆ. ಆದರೆ, ಕಣಕ್ಕೆ ಇಳಿದ ಮೇಲೆ ಯಾರೂ ನನ್ನ ಬೆನ್ನಿಗೆ ನಿಲ್ಲಲಿಲ್ಲ...' ಎಂದು ಕೆಲ ಕಾಲ ಮೌನರಾದರು. ನಂತರ, ಸಾವರಿಸಿಕೊಂಡು, 'ಚಾಮುಂಡಿ ಮೇಲಾಣೆ. ಇವತ್ತಿಗೂ ನನಗೆ ಅವಕಾಶ ಸಿಕ್ಕರೆ ನಿಸ್ವಾರ್ಥದಿಂದ ಜನಸೇವೆ ಮಾಡುತ್ತೇನೆ' ಎಂದು ಸೇರಿಸಿದರು.

ತುಂಬಾ ನೋಯಿಸಿದ್ದಾರೆ: ನನಗೆ ಮತ್ತು ನನ್ನ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬರದಂತೆ ಮಾಡಿದರು. ಅವರ ಹೆಸರು ಹೇಳಲಾರೆ. ಚಿತ್ರರಂಗದಲ್ಲಿ ನನ್ನನ್ನು ಬಹಳ ಮಂದಿ ನೋಯಿಸಿದ್ದಾರೆ. ತುಂಬಾ ನೊಂದ ಜೀವ ಇದು. ಆದರೆ, ನಾನು ಮಾತ್ರ ನಗುತ್ತಲೇ ಇರುತ್ತೇನೆ ಮತ್ತು ನಗುವನ್ನಷ್ಟೇ ಹಂಚುತ್ತೇನೆ. ಮೋಸ ಹೋಗುವುದರಲ್ಲಿ ನಾನು ನಂ.1 ಎಂದು ತಮ್ಮನ್ನು ವಿಶ್ಲೇಷಿಸಿಕೊಂಡರು.

ನನ್ನಿಂದಲೇ ಗ್ಲ್ಯಾಮರ್! :ಮಿಸ್ ಲೀಲಾವತಿ ಚಿತ್ರದ ನನ್ನ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂತು. ಇದಕ್ಕೆ ನಾನು ಥ್ಯಾಂಕ್ಸ್ ಹೇಳಬೇಕಾಗಿದ್ದು ಸಾಹುಕಾರ್ ಜಾನಕಿ ಮತ್ತು ಸ್ವಿಮ್ಮಿಂಗ್ ಡ್ರೆಸ್‌ಗೆ. ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದ ಸಾಹು ಕಾರ್ ಜಾನಕಿ, ಸ್ವಿಮ್ಮಿಂಗ್ ಡ್ರೆಸ್ ಹಾಕಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಾತ್ರ ನನ್ನ ಪಾಲಿಗೆ ಬಂತು. ನಾನು ಚಿತ್ರರಂಗಕ್ಕೆ ಬರುವ ತನಕ ನಾಯಕಿಯರೆಲ್ಲ ಬರೇ ಲಂಗ-ದಾವಣಿಯಲ್ಲೇ ಇರುತ್ತಿದ್ದರು. ನಾನು ಪ್ಯಾಂಟ್, ಸ್ಕರ್ಟ್, ಮಿಡಿ, ಸ್ವಿಮ್ಮಿಂಗ್ ಸೂಟ್ ಎಲ್ಲವನ್ನೂ ಹಾಕಲು ಶುರು ಮಾಡಿದೆ' ಎಂದು ಗ್ಲ್ಯಾಮರ್ ಲೋಕದ ಗ್ರ್ಯಾಮರ್ರನ್ನೇ ಬದಲಿಸಿದ ಕತೆಯನ್ನು ಬಿಚ್ಚಿಟ್ಟರು.

ಇಂದಿಗೂ ಕಾಡುವ ವಿಷಯ: ಯಾರ ಕಣ್ಣು ಬಿತ್ತೋ ಏನೋ? ನಾನು, ರಾಜ್‌ಕುಮಾರ್ ಒಂದು ಕಾಲದಲ್ಲಿ ರಾಜಾ ಜೋಡಿಯಂತೆ ಮೆರೆದೆವು. ಈ ಓಟಕ್ಕೆ ಬಹದ್ದೂರ್ ಗಂಡು' ಚಿತ್ರದಿಂದ ತಡೆ ಬಿತ್ತು.ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ರಾಜ್ ಜತೆ ನಟಿಸುವ ಅವಕಾಶಕ್ಕೆ ಯಾರು ಕತ್ತರಿ ಹಾಕುತ್ತಿದ್ದರೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ರಾಜ್ ಜತೆ ಮತ್ತೆ ನಟಿಸಲಿಲ್ಲ.ಆ ಸಂಕಟ ಇವತ್ತಿಗೂ ನನ್ನನ್ನು ಕಾಡುತ್ತಲೇ ಇದೆ ಎಂದು ಸ್ಮರಿಸಿಕೊಂಡರು.

ಮೈಮುಟ್ಟಿದರೆ ಆಗಲ್ಲ:'ಚಿಕ್ಕಂದಿನಿಂದಲೂ ಅಷ್ಟೇ, ಯಾರಾದರೂ ನನ್ನ ಮೈ ಮುಟ್ಟಿದರೆ ಆಗುವುದಿಲ್ಲ. ನಾನು ಹಿಂದಿ ಚಿತ್ರರಂಗ ತೊರೆದದ್ದು ಅಪ್ಪುಗೆ'ಯ ಹಿಂಸೆಯಿಂದಲೇ. ಅಲ್ಲಿ ಚಿಕ್ಕ ಪುಟ್ಟ ಶಾಟ್ ಓಕೆ ಆದಾಗಲೂ, ನಿರ್ದೇಶಕರಿಂದ ಹಿಡಿದು ಯೂನಿಟ್ ಮಂದಿಯೆಲ್ಲ ತಬ್ಬಿಕೊಂಡು
ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇದನ್ನು ಸಹಿಸಲು ಆಗುತ್ತಿರಲಿಲ್ಲ. ಹೇಳಿಕೊಳ್ಳುವಂತೆಯೂ ಇರಲಿಲ್ಲ. ಏಕೆಂದರೆ, ಅಲ್ಲಿಯ ಪದ್ಧತಿಯೇ ಹಾಗಿತ್ತು.

ಹಾಗೂ ಹೀಗೂ ಶಮ್ಮಿಕಪೂರ್, ಫಿರೋಜ್‌ಖಾನ್ ಜತೆನಟಿಸಿದೆ. ನಂತರ ಅಪ್ಪಿಕೋ ಚಳವಳಿಯಿಂದ ಹಿಂದೆ ಸರಿದು, ಕನ್ನಡ ಚಿತ್ರರಂಗಕ್ಕೆ ವಾಪಸಾದೆ. ಇಲ್ಲವಾಗಿದ್ದರೆ ನಾನೂ ರೇಖಾ, ಶ್ರೀದೇವಿ ಅಂತೆಯೇ ಮೆರೆಯುತ್ತಿದ್ದೆನೋ ಏನೋ?' ಎಂದು ತಮ್ಮನ್ನು ತಾವೇ ಜಯಂತಿ ಪ್ರಶ್ನಿಸಿಕೊಂಡರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada