ರವಿಚಂದ್ರನ್ ದ್ವಿಪಾತ್ರದಲ್ಲಿ ಮಲ್ಲಿಕಾರ್ಜುನ
'ನಾರಿಯ ಸೀರೆ ಕದಿ'ಯುವುದರಲ್ಲಿ ಬ್ಯುಸಿಯಾಗಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಈಗ 'ಮಲ್ಲಿಕಾರ್ಜುನ' ಅವತಾರ ಎತ್ತಿದ್ದಾರೆ. 'ನಾರಿಯ ಸೀರೆ ಕದ್ದ' ಚಿತ್ರ ಜೊತೆಗೆ ಈಗ ಹೊಸದಾಗಿ 'ಮಲ್ಲಿಕಾರ್ಜುನ'ನೂ ಸೇರಿದ್ದಾನೆ. ದಿನೇಶ್‌ಗಾಂಧಿ ನಿರ್ಮಿಸುತ್ತಿರುವ 'ಮಲ್ಲಿಕಾರ್ಜುನ' ಚಿತ್ರೀಕರಣ ಆಗಸ್ಟ್ 16ರಿಂದ ಸಕಲೇಶಪುರದಲ್ಲಿ ಆರಂಭವಾಗಲಿದೆ. .
ರವಿಚಂದ್ರನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ವಿಶೇಷ. ತಂದೆ ಮಗ ಎರಡು ಪಾತ್ರವನ್ನು ಅವರೇ ನಿರ್ವಹಿಸುತ್ತಿದ್ದಾರೆ. ಸೀತಾ ಹಾಗೂ ರಾಗಿಣಿ 'ಮಲ್ಲಿಕಾರ್ಜುನ'ನ ನಾಯಕಿಯರು. ಆಶೀಷ್‌ವಿದ್ಯಾರ್ಥಿ, ಹೇಮಾಚೌಧರಿ, ಆದಿಲೋಕೇಶ್, ಎಂ.ಎನ್.ಲಕ್ಷ್ಮೀದೇವಿ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರಕ್ಕಾಗಿ ಕಲಾನಿರ್ದೇಶಕ ಶಿವು ಸಕಲೇಶಪುರದಲ್ಲಿ ಅದ್ದೂರಿ ಸೆಟ್ ನಿರ್ಮಿಸಿದ್ದಾರೆ. ನಲವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನೆಯ ಸೆಟ್‌ನಲ್ಲೆ 20 ದಿನಗಳ ಚಿತ್ರೀಕರಣ ನಡೆಯಲಿದೆ. ನಂತರ ಮೈಸೂರು, ಬೆಂಗಳೂರು ಹಾಗೂ ಸ್ವಿಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣ ಸಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಎಸ್.ಮುರಳಿಮೋಹನ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಸ್.ಎ.ರಾಜಕುಮಾರರ ಸಂಗೀತವಿದೆ. ಕೆ ಡಿ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಜಿ.ಎಸ್.ವಿ ಸೀತಾರಾಂ ರವರ ಛಾಯಾಗ್ರಹಣ 'ಮಲ್ಲಿಕಾರ್ಜುನ' ಚಿತ್ರಕ್ಕಿದೆ.ಅಂದಹಾಗೆ ಮಲ್ಲಿಕಾರ್ಜುನ ತಮಿಳಿನ ವಿಜಯಕಾಂತ್ ಮತ್ತು ಸೌಂದರ್ಯ ಅಭಿನಯಿಸಿದ್ದ 'ತವಸಿ' ಚಿತ್ರದ ರೀಮೇಕ್.


Click it and Unblock the Notifications











