»   »  ಸುದೀಪ್ ನಿರ್ದೇಶನದಲ್ಲಿ ಬಾಲಿವುಡ್ ಚಿತ್ರ

ಸುದೀಪ್ ನಿರ್ದೇಶನದಲ್ಲಿ ಬಾಲಿವುಡ್ ಚಿತ್ರ

Subscribe to Filmibeat Kannada

ಇದೇ ಮೊದಲ ಬಾರಿಗೆ ನಟ ಸುದೀಪ್ ಬಾಲಿವುಡ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸುದೀಪ್ ನಟಿಸಿ, ನಿರ್ದೇಶಿಸುತ್ತಿರುವ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರ ಹಿಂದಿಗೆ ರೀಮೇಕ್ ಆಗಲಿದೆ. ಆದರೆ ಈ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಹಿಂದಿ ಚಿತ್ರಕ್ಕೆ ಶಾಹಿದ್ ಕಪೂರ್ ಅಥವಾ ರಿತೇಶ್ ದೇಶ್ ಮುಖ್ ನಾಯಕನಾಗುವ ಸಾಧ್ಯತೆಗಳಿವೆ.

ಸ್ವಮೇಕ್ ಚಿತ್ರ ನಿರ್ದೇಶಿಸಬೇಕೆಂಬ ಬಹುದಿನಗಳ ಕನಸನ್ನು 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಮೂಲಕಸುದೀಪ್ ಗೆ ನನಸು ಮಾಡಿಕೊಂಡಿದ್ದರು. ಇದೀಗ ಬಾಲಿವುಡ್ ಚಿತ್ರ ನಿರ್ದೇಶಿಸಬೇಕೆನ್ನುವ ಸುದೀಪ್ ರ ಕನಸು ನನಸಾಗುತ್ತಿದೆ. 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಕತೆ ಶಾಹಿದ್ ಮತ್ತು ರಿತೇಶ್ ಇಬ್ಬರೂ ಇಷ್ಟವಾಗಿದೆ. ಇಬ್ಬರಲ್ಲಿ ಒಬ್ಬರನ್ನು ನಾಯಕ ನಟನಾಗಿ ಆಯ್ಕೆ ಮಾಡುತ್ತೇನೆ ಎನ್ನುತ್ತಾರೆ ಸುದೀಪ್.

ಈ ಚಿತ್ರಕ್ಕೆ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು ಸದ್ಯದಲ್ಲೇ ಜಸ್ಟ್ ಮಾತ್ ಮಾತಲ್ಲಿ ಚಿತ್ರತಂಡ ಜರ್ಮನ್ ವಿಮಾನ ಹತ್ತಲಿದೆ. ಇನ್ನೂ ಪೂರ್ಣವಾಗದ ಕನ್ನಡ ಚಿತ್ರವೊಂದು ಹಿಂದಿ ಚಿತ್ರೋದ್ಯಮವನ್ನು ಆಕರ್ಷಿಸಿತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ರಾಮ್ ಗೋಪಾಲ್ ವರ್ಮಾ ತಮ್ಮ ಚಿತ್ರಕ್ಕೆ ಸಲಹೆ, ಸೂಚನೆ ನೀಡುತ್ತಾರೆ ಎಂಬ ವಿಶ್ವಾಸ ಸುದೀಪ್ ಅವರದು.

ಈಗಾಗಲೇ ವರ್ಮಾರ ಫೂಂಕ್ ಮತ್ತು ರಣ್ ಚಿತ್ರಗಳಲ್ಲಿ ಸುದೀಪ್ ಅಭಿನಯಿಸಿದ್ದಾರೆ. ಅವರ ಸಲಹೆ ಸೂಚನೆಗಳು ಜಸ್ಟ್ ಮಾತ್ ಮಾತಲ್ಲಿ ಚಿತ್ರಕ್ಕೂ ಇರುತ್ತದೆ. ಆದರೆ ಈ ಚಿತ್ರದಲ್ಲಿ ವರ್ಮಾ ತೊಡಗಿಕೊಳ್ಳುವುದಿಲ್ಲ. ಇದೊಂದು ಪ್ರೇಮ ಕಥಾ ಹಂದರದ ಚಿತ್ರವಾಗಿದ್ದು ವರ್ಮಾ ನಿರ್ದೇಶಿಸುವಂತಹ ಚಿತ್ರವಲ್ಲ. ಆದರೆ ಬಾಲಿವುಡ್ ನಲ್ಲಿ ನನಗೆ ಸಹಾಯ ಮಾಡಲಿದ್ದಾರೆ ಎನ್ನುತ್ತಾರೆ ಸುದೀಪ್.

ಸುದೀಪ್ ನಿರ್ದೇಶಿಸುತ್ತಿರುವ ನಾಲ್ಕನೆ ಕನ್ನಡ ಚಿತ್ರ ಜಸ್ಟ್ ಮಾತ್ ಮತಲ್ಲಿ . ಇತ್ತೀಚೆಗಿನ ವೀರಮದಕರಿ ಚಿತ್ರವೂ ಸೇರಿದಂತೆ ಅವರ ನಿರ್ದೇಶನದಲ್ಲಿ ಬಂದ ಎಲ್ಲ ಚಿತ್ರಗಳೂ ರೀಮೇಕ್. ರೀಮೇಕ್ ಚಿತ್ರಗಳಿಗಿಂತ ಸ್ವಮೇಕ್ ಚಿತ್ರ ಮಾಡುವುದು ತುಂಬಾ ಸುಲಭ. ಉತ್ತಮ ಚಿತ್ರಕತೆ ಇದ್ದರೆ ಅಷ್ಟೇ ಸಾಕು. ಆದರೆ ರೀಮೇಕ್ ಚಿತ್ರ ಹಾಗಲ್ಲ ಎನ್ನುತ್ತಾರೆ ಸುದೀಪ್. ಜಸ್ಟ್ ಮಾತ್ ಮಾತಲ್ಲಿ ಚಿತ್ರ ಅಕ್ಟೋಬರ್ ನಲ್ಲಿ ತೆರೆಕಾಣಲಿದೆ. ಆನಂತರವಷ್ಟೇ ಹಿಂದಿ ಚಿತ್ರದ ಮಾತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada