»   » ಹರಿಕಥೆ ಹಸನಾಗಿಸಲು ಪತ್ರಕರ್ತರಿಗೆ ದಯಾಳ್ ಮೊರೆ

ಹರಿಕಥೆ ಹಸನಾಗಿಸಲು ಪತ್ರಕರ್ತರಿಗೆ ದಯಾಳ್ ಮೊರೆ

Posted By: *ಮಂಡಕ್ಕಿ ರಾಜ
Subscribe to Filmibeat Kannada

ತಮಿಳು ಶೈಲಿಯಲ್ಲಿ ಕನ್ನಡ ಮಾತಾಡುವ ನಿರ್ದೆಶಕ ದಯಾಳ್ ಪದ್ಮನಾಭನ್‌ಗೆ ಈ ಸಲ ತುಸು ಹೆಚ್ಚೇ ಉತ್ಸಾಹದಿಂದ ಮಾತನಾಡಿದರು. ತಮ್ಮ ನಿರ್ದೇಶನದ ಹೊಸ ಚಿತ್ರ "ಶ್ರೀ ಹರಿಕಥೆ" ಕುರಿತು ಅವರಿಗೆ ಅಪಾರ ಭರವಸೆ. ಅದಕ್ಕೇ ಬಿಡುಗಡೆಗೆ ಮುನ್ನವೇ ಚಿತ್ರವನ್ನು ಪಕ್ಕಾ ರೀತಿಯಲ್ಲಿ ಟ್ರಿಮ್ ಮಾಡುವ ಉದ್ದೇಶ ಅವರದ್ದು.

ಈಗಾಗಲೇ ತಮ್ಮ ಎಂಬತ್ತು ಗೆಳೆಯರಿಗೆ ಅವರು ಚಿತ್ರ ತೋರಿಸಿದ್ದಾರೆ. ಕೆಲವರು ಸಲಹೆ ಕೊಟ್ಟರೆಂಬ ಕಾರಣಕ್ಕೆ ನಾಲ್ಕು ನಿಮಿಷದಷ್ಟು ಟ್ರಿಮ್ ಮಾಡಿದ್ದಾರೆ. ಅವರು ಎರಡನೇ ಹಂತವಾಗಿ ಪತ್ರಕರ್ತರಿಗೆ ಬಿಡುಗಡೆಗೆ ಒಂದು ವಾರ ಮೊದಲೇ ಸಿನಿಮಾ ತೋರಿಸಲು ನಿರ್ಧರಿಸಿದ್ದಾರೆ. ಅವರ ಷರತ್ತೆಂದರೆ- ಮೊದಲಿಗೆ ಸಾದಾ ಪ್ರೇಕ್ಷಕನಂತೆ ಸಿನಿಮಾ ನೋಡಬೇಕು; ವಿಮರ್ಶೆ ಮಾಡುವ ದೃಷ್ಟಿಯಿಂದ ಅಲ್ಲ. ಏನಾದರೂ ಲೋಪ ಇದೆ ಎನ್ನಿಸಿದರೆ ಅದನ್ನು ಮುಕ್ತವಾಗಿ ಹೇಳಬೇಕು. ಹೆಚ್ಚು ಅಭಿಪ್ರಾಯಗಳನ್ನು ಆಧರಿಸಿ ಆಗ ಮತ್ತೆ ಚಿತ್ರವನ್ನು ಟ್ರಿಮ್ ಮಾಡಬಹುದೆಂಬುದು ಅವರ ಯೋಚನೆ.

ನನ್ನ ಆರು ಚಿತ್ರಗಳಲ್ಲಿ ಇದೇ ಬೆಸ್ಟ್ ಅಂತ ಕ್ಲೋಸ್ ಫ್ರೆಂಡ್ಸ್ ಹೇಳಿದಾರೆ. ನಂಗೂ "ಚೆನ್ನಾಗಿ ಬಂದಿದೆ ಅಂತ ಅನ್ನಿಸ್ತಿದೆ. ಒಂದು ಒಳ್ಳೆ ಸಿನಿಮಾ ಕೊಡೋಣ ಎಂಬ ಆಸೆ. ಅದಕ್ಕೇ ಇಷ್ಟೆಲ್ಲಾ ಒದ್ದಾಡ್ತಾ ಇದೀನಿ" ಎಂದರು ದಯಾಳ್. ಸರ್ಕಸ್ ಚಿತ್ರ ಮಕಾಡೆಯಾದ ಮೇಲೆ ಸಾಕಷ್ಟು ಹಣ ಕಳೆದುಕೊಂಡಿದ್ದ ದಯಾಳ್ ಅಲ್ಲಿ ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಎಲ್ಲಾ ದಾರಿಗಳನ್ನೂ ಈಗ ಹುಡುಕುತ್ತಿರುವುದಂತೂ ಸ್ಪಷ್ಟ.

ಮೊದಲೇ ಚಿತ್ರ ನೋಡಿ ಸಲಹೆ ಕೊಡುವಿರಾ ಎಂಬ ಅವರ ಬೇಡಿಕೆಗೆ ಒಂದಿಬ್ಬರು ಪತ್ರಕರ್ತರು ಆಗಬಹುದು ಎಂದರು. ಅದು ಎಲ್ಲಾ ಪತ್ರಕರ್ತರ ಅಭಿಪ್ರಾಯ ಎಂದು ಭಾವಿಸಿ ದಯಾಳ್ ಹಾಗೂ ನಾಯಕ ಶ್ರೀಮುರಳಿ ಧನ್ಯವಾದ ಹೇಳಿದರು. ಈ ಘಟನೆ ನಡೆಯುವ ಮುನ್ನ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ಅಂದಹಾಗೆ, ಮಾರ್ಚ್ 5ರಂದು "ಶ್ರೀ ಹರಿಕಥೆ" ತೆರೆಕಾಣಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada