twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರ ಹೃದಯ ಸಿಂಹ ವಿಷ್ಣು ಕುರಿತ ದೃಶ್ಯ ಮಾಲಿಕೆ

    By Rajendra
    |

    ಮೂರು ದಶಕಗಳ ಸಾರ್ಥಕ ಸೇವೆಯ ಲಹರಿ ರೆಕಾರ್ಡಿಂಗ್ ಸಂಸ್ಥೆಯು ಕನ್ನಡ ಚಲನಚಿತ್ರ ರಂಗದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಒಂದು ಅಭೂತಪೂರ್ವ ದೃಶ್ಯ ಸಂಚಿಕೆಯನ್ನು ನಿರ್ಮಿಸಿ ಹೊರತರುವ ಕನಸು ಕಂಡಿತ್ತು. ಅದಕ್ಕಾಗಿ ಕಾರ್ಯೋನ್ಮುಖವಾಗಿರುವ ಲಹರಿ ವಿಷನ್ಸ್ ದೃಶ್ಯ ಘಟಕದ ಮೂಲಕ ಕನ್ನಡ ಚಿತ್ರರಂಗದ ಮಹಾನ್ ಕಲಾವಿದ, 200 ಚಿತ್ರಗಳ ಸರದಾದ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಚಿತ್ರ ಚರಿತ್ರೆಯನ್ನು ದಾಖಲಿಸುವ ಯೋಜನೆ ಮಾಡಿತು.

    ಡಾ.ವಿಷ್ಣುವರ್ಧನ್ ಅವರು 200ನೇ ಚಿತ್ರ ಪೂರೈಸುವ ಸಂದರ್ಭದಲ್ಲಿ ಇದನ್ನು ಸಮರ್ಪಿಸುವ ಸದುದ್ದೇಶದಿಂದ ಜನವರಿ 2009ರಿಂದ ಸಂಸ್ಥೆಯು ಕಾರ್ಯೋನ್ಮುಖವಾಯಿತು. ವಿಷ್ಣು ಸ್ನೇಹಿತರು, ಸಹ ಕಲಾವಿದರು, ಸಾಹಸ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ಸಂಗೀತ ನಿರ್ದೇಶಕರು, ನಟ ನಟಿಯರು ಎಲ್ಲರನ್ನು ಸಂದರ್ಶಿಸಿ ವಿಶಿಷ್ಟ ಅನುಭವಗಳನ್ನು ದಾಖಲಿಸಿತು.

    ವಿಷ್ಣು ಚಿತ್ರಯಾನದ ಸಂಪೂರ್ಣ ಪರಿಚಯದ ದೃಶ್ಯ ಸಂಚಿಕೆ ಬಿಡುಗಡೆಯಾಗುವ ಸಂದರ್ಭದಲ್ಲಿ ಡಾ.ವಿಷ್ಣುವರ್ಧನ್ ವಿಧಿವಶರಾಗಿದ್ದು ದುರ್ದೈವ. ಅವರ ಕೊನೆಯ ಕ್ಷಣಗಳನ್ನು, ನಾಡಿನ ಜನತೆಯು ಅಶ್ರುತರ್ಪಣವನ್ನು ಈ ದೃಶ್ಯ ಸಂಚಿಕೆಯಲ್ಲಿ ಅಳವಡಿಸುವಂತಾದುದು ವಿಧಿ ವಿಪರ್ಯಾಸ.

    ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಇಷ್ಟು ಸುದೀರ್ಘವಾದ ದೃಶ್ಯ ಸಂಚಿಕೆ ಈವರೆಗೆ ನಿರ್ಮಾಣವಾಗಿಲ್ಲ. ಇದೊಂದು ಅಪೂರ್ವ ದೃಶ್ಯ ದಾಖಲೆ. ಅಪ್ರತಿಮ ಕಲಾವಿದನೊಬ್ಬನಿಗೆ ಲಹರಿ ಸಂಸ್ಥೆಯು ಸಮರ್ಪಿಸುತ್ತಿರುವ ಭಾವಪೂರ್ಣ ದೃಶ್ಯ ನಮನ. ಈ ದೃಶ್ಯ ಸಂಚಿಕೆಯನ್ನು ಭಾಗ1 ಮತ್ತು ಭಾಗ 2 ಸುರುಳಿಯಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಡಲಾಗಿದೆ (ರು.75/ ಮಾತ್ರ).

    ಈ ವಿಶಿಷ್ಠ, ವಿಭಿನ್ನ ದೃಶ್ಯ ಸುರುಳಿಯನ್ನು ಪ್ರತಿ ಮನೆಮನೆಯಲ್ಲೂ ಸ್ವಾಗತಿಸಿ ಮನ ತುಂಬಿಸಿಕೊಳ್ಳಬೇಕು. ಆ ಮೂಲಕ ವಿಷ್ಣು ಅವರ ನೆನಪನ್ನು ಚಿರಂತನಗೊಳಿಸಬೇಕು ಎಂಬುದೇ ಸಂಸ್ಥೆಯ ಕಳಕಳಿ ಕಾಳಜಿ. ಸತತ ಒಂದು ವರ್ಷದ ಪರಿಶ್ರಮದಲ್ಲಿ ನಿರ್ಮಿಸಿರುವ ಈ ದೃಶ್ಯ ಸಂಚಿಕೆಯ ಹಿಂದೆ ಅನುಭವಿ ತಂಡ ಅವಿರತವಾಗಿ ದುಡಿದಿದೆ.
    ಕಿರುತೆರೆಯ ಅನುಭವಿ, ನಾಟಕಕಾರ, ಚಿತ್ರ ನಿರ್ದೇಶಕ ಎಸ್ ಎಸ್ ಎನ್ ಸ್ವಾಮಿ ನಿರೂಪಣೆ ಮತ್ತು ನಿರ್ದೇಶನ, ಮಂಡ್ಯ ರವಿ ಅವರ ಸಹ ನಿರ್ದೇಶನ, ನಾಗರಾಜ್ ಅವರ ಛಾಯಾಗ್ರಹಣ, ಮೋಹನ್ ರಾಜ್ ಸಂಕಲನ, ಸಂತೋಷ್ ಗ್ರಾಫಿಕ್ಸ್, ಗಂಗಾಧರ ಅವರ ವಿನ್ಯಾಸವಿದೆ. ಈ ದೃಶ್ಯ ಸಂಚಿಕೆಯ ನಿರ್ಮಾಪಕರು ಜಿ ಮನೋಹರ ನಾಯ್ಡು, ಸಹ ನಿರ್ಮಾಪಕರು ಲಹರಿ ವೇಲು.

    ಈ ದೃಶ್ಯ ಸಂಚಿಕೆಯನ್ನು ಸ್ವತಃ ಭಾರತಿ ವಿಷ್ಣುವರ್ಧನ್ ಅವರು ಕುಟುಂಬ ಸಮೇತ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ಸಂಚಿಕೆಯಲ್ಲಿ ಏನಿದೆ? ಎನ್ನುವುದಕ್ಕಿಂತ ಏನಿಲ್ಲ! ಎಂದು ಪ್ರಶ್ನೆ ಮಾಡಿದರೆ ಸೂಕ್ತ. ವಿಷ್ಣು ಜನ್ಮ, ಜನ್ಮಸ್ಥಳ, ಶಿಕ್ಷಣ, ಬಾಲ್ಯ, ಚಿತ್ರ ರಂಗಪ್ರವೇಶ, ಅವರ ಸಾಧನೆಗಳು, ವಿಶೇಷಗಳು, ಅವರ ಹವ್ಯಾಸಗಳು, ಗುಣ ಸ್ವಭಾವಗಳು, ಅವರ ರೀತಿ ರಿವಾಜುಗಳು, ಅವರ ಕನಸುಗಳು, ಅವರ ಚಿಂತನೆಗಳು, ಅವರ ವ್ಯಕ್ತಿತ್ವ, ಅವರ ನೀತಿ ನಿಲುವು ಎಲ್ಲವುಗಳು ಪದರ ಪದರವಾಗಿ ಹರಡಿಕೊಂಡಿವೆ.

    200 ಚಿತ್ರಗಳ ಅವರ ಚಿತ್ರಯಾನವನ್ನು ಸರಳವಾಗಿ ಬಿಡಿಸಿ ಹೇಳಲಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್‌ರಿಂದ ಒಬ್ಬ ಸಾಮಾನ್ಯ ಅಭಿಮಾನಿಯವರೆಗೆ ಎಲ್ಲರೂ ಹಂಚಿಕೊಂಡಿರುವ ವಿಶಿಷ್ಟ ವಿಚಾರಧಾರೆಗಳು ಇದರಲ್ಲಿ ಅಡಗಿವೆ. ಅಪರೂಪದ ಚಿತ್ರ ತುಣುಕುಗಳನ್ನು ಯಥಾವತ್ತಾಗಿ ಜೋಡಿಸಲಾಗಿದೆ. ಇದೊಂದು ಮಹತ್ವಪೂರ್ಣ ದಾಖಲೆ ಮಾತ್ರವಲ್ಲ ಕರ್ನಾಟಕ ಕಂಡ ಅಪ್ರತಿಮ ಕಲಾವಿದನಿಗೆ ಲಹರಿ ಸಂಸ್ಥೆಯು ಸಮರ್ಪಿಸುತಿರುವ ಭಾವಪೂರ್ಣ ದೃಶ್ಯ ನಮನ.

    ವಿಷ್ಣು ಅವರ 60ನೇ ಹುಟ್ಟುಹಬ್ಬ ಸಂದರ್ಭದಲ್ಲಿ ಇದನ್ನು ಭಾರತಿ ವಿಷ್ಣುವರ್ಧನ್ ಲೋಕಾರ್ಪಣೆ ಮಾಡಿದರು. ವಿಷ್ಣು ಪುಣ್ಯಭೂಮಿಗೆ ಭೇಟಿಕೊಟ್ಟ ಸಹಸ್ರಾರು ಅಭಿಮಾನಿಗಳು ಅಕ್ಕರೆಯಿಂದ ಡಿವಿಡಿಗಳನ್ನು ಕೊಂಡು ಶ್ಲಾಘನೆ ವ್ಯಕ್ತಪಡಿಸಿದರು.

    ರಾಜ್ಯದ ಜಿಲ್ಲಾವಾರು ಕೇಂದ್ರಗಳ ಪ್ರವಾಸಗಳನ್ನು ಸಂಸ್ಥೆಯು ಹಮ್ಮಿಕೊಂಡಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಂಚರಿಸಿ ಇವುಗಳನ್ನು ಮಾರಾಟ ಮಾಡುವ ಮೂಲಕ ವಿಷ್ಣು ಅಭಿಮಾನಿಗಳ ಮನೆ ಮನಗಳನ್ನು ತಲುಪಲು ಸಂಸ್ಥೆಯು ಸಮರೋಪಾದಲ್ಲಿ ಕಾರ್ಯೋನ್ಮುಖವಾಗಿದೆ. ಪ್ರತಿಗಳು ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು. ಈ ಕೆಳಕಂಡ ದೂರವಾಣಿಯನ್ನು ಮಾಹಿತಿಗಾಗಿ ಸಂಪರ್ಕಿಸಬಹುದು 080-22241044, 22241306.

    Monday, September 20, 2010, 15:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X