»   »  ಕನ್ನಡಕ್ಕೆ ಮಲೇಷ್ಯಾದ ಖ್ಯಾತ ಚಿಂಪಾಂಜಿ!

ಕನ್ನಡಕ್ಕೆ ಮಲೇಷ್ಯಾದ ಖ್ಯಾತ ಚಿಂಪಾಂಜಿ!

Posted By:
Subscribe to Filmibeat Kannada

ಈ ವರ್ಷದ ಯಶಸ್ವಿ ಚಿತ್ರಗಳಲ್ಲೊಂದಾದ ಮಸ್ತ್ ಮಜಾ ಮಾಡಿ ಚಿತ್ರದ ನಿರ್ಮಾಪಕ ಜಗದೀಶ್ ಹೊಸ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಮೊದಲನೆಯದಾಗಿ, ಮಸ್ತ್ ಮಜಾ ಮಾಡಿಹಾಡೊಂದರಲ್ಲಿ ಕಾಣಿಸಿಕೊಂಡಿದ್ದ ಜಗದೀಶ್‌ರ ಮಗ ಲಿಟಲ್‌ಸ್ಟಾರ್ ಸ್ನೇಹಿತ್ ಹಾಗೂ ಚಿಂಪಾಂಜಿ ಯೊಂದು ಪ್ರಧಾನ ಪಾತ್ರದಲ್ಲಿರುವ ಅಪ್ಪು-ಪಪ್ಪು ಚಿತ್ರ ಇದೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.

ಚಿಂಪಾಂಜಿ ಹಾಗೂ ಒಂದು ಮಗುವಿನ ನಡುವಿನ ಸ್ನೇಹ-ಸಂಬಂಧವನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರಕಥೆ ಮಾಡಿ, ನಿರ್ದೇಶಿಸುತ್ತಿದ್ದಾರೆ ಆರ್.ಅನಂತರಾಜು. ಮನಮಿಡಿಯುವ ಹೃದಯಸ್ಪರ್ಶಿ ಸನ್ನಿವೇಶಗಳನ್ನೊಳಗೊಂಡ ಈ ಚಿತ್ರದಲ್ಲಿ ಆ ಮಗುವಿನ ತಂದೆ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಲಿದ್ದಾರೆ. ರೇಖಾ, ಕೋಮಲ್, ರಂಗಾಯಣ ರಘು ಸಹ ಅಭಿನಯಿಸುತ್ತಿದ್ದಾರೆ.

ಮಲೇಶಿಯಾದ ವಾರಂಗಟಾನ್ (ಚಿಂಪಾಂಜಿ) ಈಗಾಗಲೇ ಹಲವಾರು ಚಿತ್ರಗಳಲ್ಲಿ ತನ್ನ ಪ್ರತಿಭೆ ತೋರಿಸಿದೆ. ಮಲಾಕ್ ನಗರದಲ್ಲಿ ಈ ಚಿಂಪಾಂಜಿಗೆ ಪೂರ್ಣ ತರಬೇತಿ ನೀಡಲಾಗಿದೆ. ಕನ್ನಡ ಚಿತ್ರರಂಗದಲ್ಲೇ ಪ್ರಥಮ ಎನ್ನಬಹುದಾದ ಈ ಪ್ರಯತ್ನಕ್ಕೆ ಬಹುಕೋಟಿ ಬಜೆಟ್ ವಿನಿಯೋಗಿಸಲು ತಯಾರಾಗಿದ್ದಾರೆ ನಿರ್ಮಾಪಕ ಜಗದೀಶ್.

ಹಿಂದೆ ಪ್ರಾಣಿಗಳನ್ನುಪಯೋಗಿಸಿಕೊಂಡು ಅದ್ಘುತ ಚಮತ್ಕಾರ ತೋರಿಸಿದ್ದ ಬಿ. ವಿಠಲಾಚಾರ್ಯ, ಅಬ್ಬಾಯಿ ನಾಯ್ಡು, ಅಲ್ಲದೆ ತಮಿಳಿನ ರಾಮ್‌ನಾರಾಯಣ್ ನಿರ್ದೇಶನದಲ್ಲಿ ಶಾಂಭವಿ, ಭೈರವಿ ಚಿತ್ರಗಳು ಬಂದಿದ್ದವು. ಬಹಳ ಅಂತರದಲ್ಲಿ, ಅದೂ ವಿಶೇಷವಾಗಿ ಹಾಲಿವುಡ್ ಶೈಲಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮಸ್ತ್ ಬಾಲಾಜಿಯವರ ಸಂಗೀತ, ಎಸ್. ಕೃಷ್ಣರ ಛಾಯಾಗ್ರಹಣ ಇದೆ. ಇಂಡೋನೇಷಿಯಾ, ಥಾಯ್ಲೆಂಡ್, ಮಲೇಷಿಯಾ ಹಾಗೂ ಬೆಂಗಳೂರಿನಲ್ಲಿ 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada