»   »  ಹೊಸ ನಿರ್ದೇಶಕರೆಲ್ಲಾ ಅಡ್ಡಕಸುಬಿಗಳು: ರಾಜೇಂದ್ರ ಸಿಂಗ್ ಬಾಬು

ಹೊಸ ನಿರ್ದೇಶಕರೆಲ್ಲಾ ಅಡ್ಡಕಸುಬಿಗಳು: ರಾಜೇಂದ್ರ ಸಿಂಗ್ ಬಾಬು

Posted By:
Subscribe to Filmibeat Kannada

*ಜಯಂತಿ

ಹಳೆ ತಲೆಗಳ ಕಾಲ ಮುಗೀತು ಸ್ವಾಮಿ. ಹೊಸ ತಂತ್ರಜ್ಞಾನ ಬಂದಿದೆ. ಮಾರುಕಟ್ಟೆ ಸ್ಟ್ರಾಟಜಿ ಬದಲಾಗಿದೆ. ಪಿಕ್ಚರ್ ಆಯುಸ್ಸು ಈಗ ಮೂರೇ ತಿಂಗಳು. ಅಷ್ಟರಲ್ಲಿ ಹಣ ಮಾಡಿಕೋಬೇಕು. ನಮ್ಮ ಹಳೆ ತಲೆಗಳಿಗೆ ಅದು ಗೊತ್ತೇ ಇಲ್ಲ. ಅವರೆಲ್ಲಾ ಇಂಡಸ್ಟ್ರಿಯಿಂದ ಜಾಗ ಖಾಲಿ ಮಾಡೋದು ವಾಸಿ: ಶಶಾಂಕ್

ಗಾಂಧಿನಗರದಲ್ಲಿ ಈಗ ಮೇಕರ್ಸ್ ಅಂತ ನಾಲ್ಕೇ ಜನ ಇದ್ವಿ. ಈಗ ನೀನು ಸೇರಿಕೊಂಡಿದೀಯ ರಂಗನಾಥ್. ಭಟ್ಟ (ಯೋಗರಾಜ್), ಸೂರಿ, ನಾನು, ಪ್ರೀತು (ಪ್ರೀತಮ್ ಗುಬ್ಬಿ), ನೀನು... ಈಗ ನಿರ್ದೇಶಕರು ಅಂತ ಇರೋದೇ ಇಷ್ಟು: ನಾಗಶೇಖರ (ಗುಲಾಮ ಚಿತ್ರ ಬಿಡುಗಡೆಯಾದ ನಂತರ ರಂಗನಾಥ್ ಜೊತೆ ನಡೆಸಿದ ಸಂಭಾಷಣೆ).

ಕನ್ನಡ ಸಿನಿಮಾ ದೊಡ್ಡ ಕ್ರೈಸಿಸ್‌ನಲ್ಲಿರುವ ಈ ಕಾಲಮಾನದಲ್ಲಿ ಭರವಸೆ ಇಡಬಹುದಾದ ನಿರ್ದೇಶಕರು ಆಡಿರುವ ಮಾತುಗಳಿವು. ರಾಜೇಂದ್ರ ಸಿಂಗ್ ಬಾಬು ಈಗ ಕನಸು ಕಟ್ಟಲು ಹೆಣಗಾಡುತ್ತಿರುವವರು. ಶಶಾಂಕ್ ನಿರ್ದೇಶಿಸಿರುವುದು ಎರಡೇ ಸಿನಿಮಾ. ಮೊಗ್ಗಿನ ಮನಸ್ಸು" ಲಾಸು ಅಂತ ನಿರ್ಮಾಪಕ ಇ.ಕೃಷ್ಣಪ್ಪ ಹೇಳಿಕೊಂಡು ಓಡಾಡುತ್ತಿದ್ದಾರೆ. ಇನ್ನು ನಾಗಶೇಖರ ಅರಮನೆ" ನಂತರ ಇನ್ನೊಂದು ಚಿತ್ರವನ್ನೇ ನಿರ್ದೇಶಿಸಿಲ್ಲ. ಅರಮನೆ" ಸದಭಿರುಚಿಯ ಸಿನಿಮಾ ಆದರೂ ಅದನ್ನು ನೂರು ದಿನ ತಳ್ಳಿ ನೂಕಿ ಓಡಿಸಿದ್ದು ಎಂಬುದು ಗುಟ್ಟೇನೂ ಅಲ್ಲ. ಗಣೇಶನ ಆಣತಿಯ ಮೇರೆಗೆ ನೂರು ದಿನದ ಸಮಾರಂಭ ಮಾಡಿ ನಿರ್ಮಾಪಕ ಕೆ.ಮಂಜು ಮುಖ ಕಿವುಚಿಕೊಂಡಿದ್ದು ಗೊತ್ತೇ ಇದೆ!

ಚಿತ್ರರಂಗ ಹೇಗೆ ಬಲುಬೇಗ ವ್ಯಕ್ತಿಗಳಲ್ಲಿ ಕೊಬ್ಬು ತುಂಬಿಬಿಡುತ್ತದೆ, ನೋಡಿ. ಇದೇ ನಾಗಶೇಖರ ಹೊತ್ತೂಟಕ್ಕೆ ಕಷ್ಟ ಪಡುತ್ತಿದ್ದ ದಿನಗಳಿದ್ದವು. ಆಗ ಆತ ಯಾವ ನಿರ್ದೇಶಕನ ಚಿತ್ರದಲ್ಲೇ ಆಗಲಿ, ಸಣ್ಣ ಪಾತ್ರ ಸಿಕ್ಕರೂ ಪುಳಕಿತನಾಗುತ್ತಿದ್ದ. ಯಾರದೋ ಕಥೆಗಳ ಸ್ಫೂರ್ತಿಯಿಂದ ಸಿನಿಮಾ ಮಾಡುವ ಶಶಾಂಕ್ ತನ್ನನ್ನು ತಾನು ಸ್ಟಿವನ್ ಸ್ಪೀಲ್‌ಬರ್ಗ್ ಅಂತಲೇ ಭಾವಿಸಿದ್ದಾನೆ. ಕೋಟಿ ನಿರ್ದೇಶಕ ಯೋಗರಾಜ ಭಟ್ಟರ ಲಗೋರಿ" ಲಗಾಡಿಯಾಗಿದೆ. ಸೂರಿ ಮೇಲೇಳಲು ಒಂದು ಸಕ್ಸಸ್ ಬೇಕೇಬೇಕು. ಇಂತಿ ನಿನ್ನ ಪ್ರೀತಿಯ" ಮಲಗಿ ವರ್ಷವಾಗುತ್ತಾ ಬಂತು. ಇನ್ನು ಪ್ರೀತಮ್ ಗುಬ್ಬಿ. ಶ್ರದ್ಧೆ, ಸೃಜನಶೀಲತೆ ಎರಡೂ ಇದ್ದರೂ ಅದನ್ನು ಮರೆಮಾಚುವಷ್ಟು ಧಿಮಾಕಿದೆ. ಕ್ಯಾಚಿ ಸಂಭಾಷಣೆ ಬರೆದು, ಕೊಡೆ ಕೊಡೆ ಕೊಬ್ರಿ ಮಿಠಾಯಿ" ತರಹದ ಹಾಡುಗಳನ್ನು ಬರೆಯುತ್ತಿದ್ದ ರಂಗನಾಥ್ ನಿರ್ದೇಶಕರಾಗಿ ಜೊಳ್ಳು ಅನ್ನೋದನ್ನು ಗುಲಾಮ" ಸಾಬೀತು ಪಡಿಸಿದೆ.

ಕನ್ನಡ ಚಿತ್ರರಂಗದಲ್ಲಿ ಈಗ ಕೊರತೆ ಇರುವುದು ಕುಸುರಿ ಕೆಲಸ ಗೊತ್ತಿರುವ ನಿರ್ದೇಶಕರದ್ದು. ನಾಯಕ, ನಾಯಕಿಯರಾಗುವ ಮುಖಗಳು ಅಸಂಖ್ಯ. ಸಂಗೀತ ನಿರ್ದೇಶಕರ ಫಸಲೂ ಚೆನ್ನಾಗೇ ಇದೆ. ಅಂಥಾದರಲ್ಲಿ ಹೊಸಬರೆಲ್ಲಾ ಅಡ್ಡಕಸುಬಿಗಳು ಅನ್ನುವ ಸಿಂಗ್ ಬಾಬು ಜನರಲೈಸ್ಡ್ ಮಾತು, ಐದೇ ಜನ ನಿರ್ದೇಶಕರು ಎನ್ನುವ ನಾಗಶೇಖರನ ಅಧಿಕ ಪ್ರಸಂಗಿತನ ಎರಡೂ ಹುಂಬತನದ ಪರಾಕಾಷ್ಠೆ.

ಪುಟ್ಟಣ್ಣ ಕಣಗಾಲ್‌ಗೆ ಕೊಬ್ಬಿತ್ತು. ಯಾಕೆಂದರೆ, ಅವರು ಹಾಗೆ ಕೊಬ್ಬುವಷ್ಟು ಯಶಸ್ಸು ಕೊಟ್ಟಿದ್ದರು. ಆದರೆ, ಹೊಸಬರ ಕಾಲೆಳೆಯುವ ಕೆಲಸವನ್ನು ಅವರು ಮಾಡಲಿಲ್ಲ. ಲಕ್ಷ್ಮೀನಾರಾಯಣ್‌ಗೆ ಸತ್ಯಜಿತ್ ರೇ ತರಹದ ಸಿನಿಮಾ ಮಾಡುವ ಕನಸಿತ್ತು. ಸಿದ್ದಲಿಂಗಯ್ಯ ತಣ್ಣಗೆ ಇದ್ದಿದ್ದರಿಂದಲೇ ಬಂಗಾರದ ಮನುಷ್ಯ"ನನ್ನು ಕರುಣಿಸಿದ್ದು. ಸೆಕ್ಸ್‌ನಂಥ ಸಬ್ಜೆಕ್ಟ್ ಇಟ್ಟುಕೊಂಡು ಸಾಕಷ್ಟು ಮನರಂಜನಾತ್ಮಕ ಚಿತ್ರಗಳನ್ನು ತೆಗೆದ ಕಾಶಿನಾಥ್ ಯಾವತ್ತೂ ಈಗಿನವರ ತರಹ ಮಾತಾಡಲಿಲ್ಲ. ಈಗಲೂ ಅಕ್ಕ ತಂಗಿ"ಯಂಥ ಸೊಗಸಾದ ಸಿನಿಮಾ ಮಾಡಿದ ಎಸ್.ಮಹೇಂದರ್ ಮಾತಲ್ಲಿ ಸದಾ ಸಂಯಮ ಬೆರೆತಿರುತ್ತದೆ. ಅಷ್ಟೇ ಏಕೆ, ಇಪ್ಪತ್ತು ಇಪ್ಪತ್ತೈದೇ ದಿನಕ್ಕೆ ಸಿನಿಮಾ ಸುತ್ತಿ ಕೊಡುವ, ತೆಲುಗಲ್ಲಿ ಒಂದು, ಇಲ್ಲಿ ಇನ್ನೊಂದು ಕಾಲಿಟ್ಟಿರುವ ಸಾಯಿಪ್ರಕಾಶ್ ಕೂಡ ಓಂ ಸಾಯಿ ಎಂದು ತಣ್ಣತಣ್ಣಗೇ ಮಾತಾಡುವುದು. ಆತ ಯಾರನ್ನೂ ಹೀಗಳೆದ ಉದಾಹರಣೆ ಇಲ್ಲ.

ನಿರ್ದೇಶಕನ ಯೋಚನೆ ಕ್ರಿಯೇಟಿವಿಟಿ ಕುರಿತೇ ಇರಬೇಕು. ಆ ಕಾರಣಕ್ಕೆ ಸೂರಿ, ಯೋಗರಾಜ್ ಭಟ್ಟರ ನಡುವೆ ಜಗಳವಾದರೆ ಸಂತೋಷ. ಆದರೆ, ಹಣದ ಕಾರಣಕ್ಕೆ ಆಗುತ್ತದಲ್ಲ ಅದು ದುರಂತ. ತಾನೊಬ್ಬನೇ ಸ್ಟಾರ್ ಅನ್ನುವಂತೆ ನಗುತ್ತಿದ್ದ ಗಣೇಶ ಏನಾಗುತ್ತಿದ್ದಾನೆ, ನೋಡಿ. ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅನ್ನೋ ಮಾತನ್ನು ಇವರಿಗೆ ಯಾರಾದರೂ ಮನದಟ್ಟು ಮಾಡಿಸಬೇಕಲ್ಲ.ಪೂರಕ ಓದಿಗೆ
ಯುವ ನಿರ್ದೇಶಕರುಗಳಿಗೆ ಒಂದು ಪತ್ರವು...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada