»   »  ಎಂಎ ರಾಜ್ಯಶಾಸ್ತ್ರ ಪರೀಕ್ಷೆ ಬರೆದ ನಟಿ ಉಮಾಶ್ರೀ!

ಎಂಎ ರಾಜ್ಯಶಾಸ್ತ್ರ ಪರೀಕ್ಷೆ ಬರೆದ ನಟಿ ಉಮಾಶ್ರೀ!

Posted By:
Subscribe to Filmibeat Kannada

ರಾಜಕಾರಣಿಗಳಿಗೆ ರಾಜ್ಯಶಾಸ್ತ್ರದ ಬಗ್ಗೆ ಒಲವಿದೆಯೋ ಇಲ್ಲವೋ ಗೊತ್ತಿಲ್ಲ! ಆದರೆ ನಟಿ ಹಾಗೂ ಮಾಜಿ ಶಾಸಕಿ ಉಮಾಶ್ರೀ ಅವರಿಗಂತೂ ರಾಜ್ಯಶಾಸ್ತ್ರ ಎಂದರೆ ಎಲ್ಲಿಲ್ಲದ ಆಸಕ್ತಿ.ಹಾಗಾಗಿಯೇ ಅವರು 36 ವರ್ಷಗಳ ಬಳಿಕ ಎಂ.ಎ ರಾಜ್ಯಶಾಸ್ತ್ರ ಪರೀಕ್ಷೆಯನ್ನು ಬರೆದಿದ್ದಾರೆ.

ಬೆಂಗಳೂರು ಚಾಮರಾಜಪೇಟೆಯ ಆಸ್ಟಿನ್ ಕಾಲೇಜಿನಲ್ಲಿ ಶುಕ್ರವಾರ ಅವರು ಎಂ.ಎ ರಾಜ್ಯಶಾಸ್ತ್ರ ಪರೀಕ್ಷೆ ಬರೆದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. 'ಪಾಶ್ಚಿಮಾತ್ಯ ರಾಜಕೀಯ ಚಿಂತನೆ' ವಿಷಯವನ್ನು ಅವರು ಇನ್ನೂ 30 ನಿಮಿಷ ಇರುವಾಗಲೇ ಮುಗಿಸಿ ಪರೀಕ್ಷಾ ಕೊಠಡಿಯಿಂದ ಹೊರನಡೆದರು.

ಪರೀಕ್ಷೆ ಹೇಗೆ ಬರೆದಿರಿ? ಎಂದು ಕೇಳಿದ್ದಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 36 ವರ್ಷಗಳ ನಂತರ ಎಂ.ಎ ಪರೀಕ್ಷೆಯನ್ನು ಬರೆಯುತ್ತಿದ್ದೇನೆ. ಆಗ ಎಸ್ಸೆಸ್ಸಿಲ್ಸಿ ಪರೀಕ್ಷೆಯಲ್ಲಿ ಶೇ.35ರಷ್ಟು ಅಂಕ ಪಡೆದು ಪಾಸಾಗಿದ್ದೆ. ಈಗ ಎಂ.ಎ ಪಾಸುಗುತ್ತೇನೆ ಎಂಬ ಗ್ಯಾರಂಟಿ ಇಲ್ಲ ಎಂದರು!

ಸ್ನಾತಕೋತ್ತರ ಪದವಿಯನ್ನು ಮುಗಿಸಬೇಕು ಎಂದು ಹಲವಾರು ದಂಡಯಾತ್ರೆಗಳನ್ನು ಮಾಡಿದ್ದೇನೆ. ಮೂರು ಬಾರಿ ಪರೀಕ್ಷಾ ಶುಲ್ಕ ಕಟ್ಟಿ ಸಂಸಾರ, ರಾಜಕೀಯ ಬಾಧ್ಯತೆಗಳಿಂದ ಪರೀಕ್ಷೆಯನ್ನು ಬರೆಯಲಾಗಲಿಲ್ಲ.ಈ ಸಲ ಹೇಗಾದರೂ ಮಾಡಿ ಬರೆಯಲೇಬೇಕು ಎಂದು ತೀರ್ಮಾನಿಸಿದ ಕಾರಣ ಪರೀಕ್ಷೆ ಬರೆದೆ ಎನ್ನುತ್ತಾರೆ ನಗುತ್ತಾ.

ಭಾನುವಾರ 'ಭಾರತೀಯ ರಾಜಕೀಯ ಚಿಂತನೆ' ಪತ್ರಿಕೆ ಇದೆ. ನನ್ನನ್ನು ಗಾಂಧಿ, ಗೋಕಲೆ, ತಿಲಕ್ ಮತ್ತು ವಿವೇಕಾನಂದನೇ ಕಾಪಾಡಬೇಕು. ಪರೀಕ್ಷೆಗೆ ಕೇವಲ ಒಂದು ವಾರದಿಂದ ತಯಾರಿ ನಡೆಸಿದ್ದೆ. ಚೆನ್ನಾಗಿ ಓದಿಕೊಂಡಿದ್ದೇನೆ ಆದರೆ ಹಾಳಾದ್ದು ಒಂದೂ ನೆನಪಿರಲ್ಲ ಎಂದರು ಉಮಾಶ್ರೀ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada