»   » ಹತ್ತರಲ್ಲಿ ಹತ್ತು ಮುತ್ತು (ರಾಜ್‌)...

ಹತ್ತರಲ್ಲಿ ಹತ್ತು ಮುತ್ತು (ರಾಜ್‌)...

Posted By: *ಶ್ರೀವತ್ಸ ಜೋಶಿ, ವರ್ಜೀನಿಯಾ
Subscribe to Filmibeat Kannada

ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಎಪ್ಪತ್ತೈದನೇ ಹುಟ್ಟುಹಬ್ಬದ (ಇಸವಿ 2003) ನಿಮಿತ್ತ ಶ್ರೀವತ್ಸ ಜೋಶಿ ಅವರು ತಮ್ಮ ವಿಚಿತ್ರಾನ್ನ ಅಂಕಣದಲ್ಲಿ ಬರೆದ ರಾಜ್ ಕುಮಾರ್ ಸ್ಫೆಷಲ್ ಲೇಖನವನ್ನು ಇಲ್ಲಿ ಪುನರ್ ಮುದ್ರಿಸಲಾಗಿದೆ. ಗಾನಗಂಧರ್ವನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹತ್ತು ಹಾಡುಗಳ ಮೂಲಕ ಅರ್ಪಿಸಿದ ಅಪೂರ್ವ ಲೇಖನವಿದು. ಏಪ್ರಿಲ್ 24ರಂದು ನಟಸಾರ್ವಭೌಮನ ಹುಟ್ಟುಹಬ್ಬ. ಇದೇ ಏಪ್ರಿಲ್ 12ಕ್ಕೆ ಅಭಿಮಾನಿ ದೇವರುಗಳನ್ನು ಅಣ್ಣಾವ್ರು ಅಗಲಿ ನಾಲ್ಕು ವರ್ಷಗಳು ಪೂರೈಸಿವೆ. ನಾಲಕ್ಕಲ್ಲ, ನಾನೂರು ವರುಷಗಳೇ ಉರುಳಲಿ, ವರನಟನ ನೆನಪು ಶಾಶ್ವತ-ಸಂಪಾದಕ.

ವಿಚಿತ್ರಾನ್ನದಲ್ಲಿ ಈ ಹಿಂದೆ 'ಚಿತ್ರಗೀತೆ ಒಗ್ಗರಣೆಯ ಘಮಘಮ' ಮತ್ತು 'ಎಲ್ಲೆಲ್ಲು ಸಂಗೀತವೇ...' ಎಂಬ ಎರಡು ಸಂಚಿಕೆಗಳನ್ನು ಕನ್ನಡ ಚಿತ್ರಗೀತೆಗಳನ್ನಾಧರಿಸಿ ಪ್ರಸ್ತುತಪಡಿಸಲಾಗಿತ್ತು . ಅವೆರಡೂ ನಿಮಗೆ ಬಹಳ ಮೆಚ್ಚುಗೆಯೂ ಆಗಿದ್ದುವು (ಚಿತ್ರಗೀತೆಗಳೆಂದರೆ ಯಾವಾಗಲೂ ಆಪ್ಯಾಯಮಾನವೇ ಅನ್ನಿ). ಇದೇ ರೀತಿ ಕನ್ನಡ ವರನಟ ಪದ್ಮಭೂಷಣ ಕರ್ನಾಟಕರತ್ನ ಡಾ.ರಾಜ್‌ಕುಮಾರ್‌ ಅವರದೇ ಚಿತ್ರಗೀತೆಗಳನ್ನಾಧರಿಸಿದ ಒಂದು ವಿಚಿತ್ರಾನ್ನವನ್ನು ತಯಾರಿಸಬೇಕೆಂದು ಬಹಳ ದಿನಗಳಿಂದ ಅಂದುಕೊಂಡಿದ್ದೆ. ಆ ಪ್ರಕಾರ, 'ರಾಜ್‌ ವಿಶೇಷ' ಇಂದು ನಿಮಗರ್ಪಣೆ. ಏಪ್ರಿಲ್‌ 24ರಂದು ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬ. ಅವರಿಗೆ ನಮ್ಮೆಲ್ಲರ ಶುಭಾಶಯಗಳು.

'ಹತ್ತರಲ್ಲಿ ಹತ್ತು ಮುತ್ತು(ರಾಜ್‌)' ಶೀರ್ಷಿಕೆ ಏಕೆಂದರೆ, ಇಲ್ಲಿ ಡಾ.ರಾಜ್‌ಕುಮಾರ್‌ (ಮೂಲ ಹೆಸರು ನಿಮಗೆಲ್ಲ ಗೊತ್ತಿರುವಂತೆ ಮುತ್ತುರಾಜ್‌) ಅವರ ಹತ್ತು ಚಿತ್ರಗೀತೆಗಳ ಪ್ರಸ್ತಾಪ ಇದೆ. ಇವೇ ಅತ್ಯುತ್ಕೃಷ್ಟ ಹತ್ತು ಗೀತೆಗಳು ಎಂದೇನಲ್ಲ. ಯಾದೃಚ್ಛಿಕ ಆಯ್ಕೆಯ ಈ ಹತ್ತು ಗೀತೆಗಳೂ ಒಂದೊಂದು ಮುತ್ತು ಎಂಬುದನ್ನು ನೀವು ಹೇಗೂ ಒಪ್ಪುತ್ತೀರಿ; ಇಲ್ಲಾಂದರೂ ನಿಮಗೆ ಈ ಚಿತ್ರಗೀತೆಗಳ ಬಗ್ಗೆ ಓದಿದಾಗ ಎಂಬತ್ತರ-ತೊಂಬತ್ತರ ದಶಕದ ದಿನಗಳ ನೆನಪುಗಳು ಬರುವುದಂತೂ ನಿಜ. ಈ ಚಿತ್ರರತ್ನಗಳನ್ನು ಕರ್ನಾಟಕದ ಯಾವುದೋ ಚಿತ್ರಮಂದಿರದಲ್ಲಿ ನೀವು ವೀಕ್ಷಿಸಿದ, ಈ ಚಿತ್ರಗೀತೆಗಳು ಆಕಾಶವಾಣಿಯಲ್ಲಿ ಪ್ರಚಲಿತವಿದ್ದ ದಿನಗಳು ನಿಮ್ಮ ಕಣ್ಮುಂದೆ ಸುಳಿಯಬಹುದು!

ಅಂದಹಾಗೆ ಚಿತ್ರಗೀತೆಗಳ ಮತ್ತು ಜತೆಯಲ್ಲಿನ ವಿವರಣೆಯ ಈ ಜೋಡಣೆಯಲ್ಲಿ ವಿಚಿತ್ರಾನ್ನದ ಮಾಮೂಲಿ 'ಕಸರತ್ತು' ಏನಾದರೂ ಇರಬೇಕಲ್ಲ ! ಇದೆ, ಒಂದರಿಂದ ಹತ್ತರವರೆಗಿನ ಈ ವಿವರಣೆಗಳನ್ನು ಓದಿ. ಏನೋ ಒಂದು ಅಚ್ಚರಿ ಕಾದಿದೆ ನಿಮಗೂ!

1. 'ನಾವಾಡುವ ನುಡಿಯೆ ಕನ್ನಡ ನುಡಿ... ನಾವಿರುವ ತಾಣವೆ ಗಂಧದ ಗುಡಿ... ಚಂದದ ಗುಡಿ... ಶ್ರೀಗಂಧದ ಗುಡಿ...' ಡಾ.ರಾಜ್‌ಕುಮಾರ್‌ ಅಭಿನಯದ 'ಗಂಧದಗುಡಿ' ಚಿತ್ರದಲ್ಲಿ ರಾಜನ್‌ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಪಿ.ಬಿ.ಶ್ರೀನಿವಾಸ್‌ ಕಂಠಸಿರಿಯ ಹಾಡಿನೊಂದಿಗೆ ಕಾರ್ಯಕ್ರಮವನ್ನು ಆರಂಭಿಸೋಣ. ಕನ್ನಡ ಚಲನಚಿತ್ರಗೀತೆಗಳಲ್ಲಿ ಯಾವುದಾದರೂ ಒಂದನ್ನು ನಾಡಗೀತೆ ಎಂದು ಚುನಾಯಿಸುವುದಾದರೆ ನಾನಂತೂ ಈ ಗೀತೆಯನ್ನೇ ಅನುಮೋದಿಸುತ್ತೇನೆ. ನೀವು?

2. 'ಏನು ಮಾಯವೋ... ಏನು ಮರ್ಮವೋ... ಗೆಲ್ಲುವ ಕುದುರೆಯೆ ಎಂದು ಗೆಲುವುದು... ಹಳ್ಳದ ಕಡೆಗೇ ನೀರು ಹರಿವುದು... ಹಣವಂತರಿಗೇ ಹಣ ಸೇರುವುದು...' ರಾಜ್‌, ಮಾಧವಿ ಅಭಿನಯದ ಸಿಂಗೀತಂ ಶ್ರೀನಿವಾಸ್‌ ನಿರ್ದೇಶನದ 'ಭಾಗ್ಯದ ಲಕ್ಷ್ಮೀ ಬಾರಮ್ಮ"'ಹಾಸ್ಯ ಪ್ರಧಾನ ಚಿತ್ರದ ಈ ಗೀತೆ 'ಅರ್ಥ'ವತ್ತಾಗಿದೆ. ಅಂದರೆ, ದುಡ್ಡಿನ ಕುರಿತಾಗಿದೆ!

3. ನೀವು ವಿವಿಧಭಾರತಿಯ 'ನಂದನ' ಕಾರ್ಯಕ್ರಮವನ್ನು ಕೇಳುವ ಅಭ್ಯಾಸವಿದ್ದವರಾದರೆ ನಮ್‌ ಅಣ್ಣಾವ್ರು 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ , ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಹಾಡಿದ 'ವಿಶ್ವನಾಥನು ತಂದೆಯಾದರೆ... ವಿಶಾಲಾಕ್ಷಿ ತಾಯಿಯಲ್ಲವೆ... ಯಶೋದೆ ಕೃಷ್ಣನ ಬೆಳೆಸಿದರೇನು... ದೇವಕಿಗೆ ಅವನು ಕಂದನಲ್ಲವೇ...' ಗೀತೆಯನ್ನು ಕೇಳಿರುತ್ತೀರಿ. ಚಿ.ಉದಯಶಂಕರ್‌ ಅವರ ಈ ರಚನೆಗೆ ಸಂಗೀತ ನಿರ್ದೇಶನ ಮಾಡಿದವರು ಟಿ.ಜಿ.ಲಿಂಗಪ್ಪ.

4. ಡಾ.ರಾಜ್‌, 'ಚಿನ್ನದ ಮಲ್ಲಿಗೆ ಹೂವೆ... ಬಿಡು ನೀ ಬಿಂಕವ ಚೆಲುವೆ...' ಹಾಡನ್ನು ಜಿ.ಕೆ.ವೆಂಕಟೇಶ್‌ ಸಂಗೀತ ನಿರ್ದೇಶನದಲ್ಲಿ 'ಹುಲಿಯ ಹಾಲಿನ ಮೇವು' ಚಿತ್ರಕ್ಕಾಗಿ ಹಾಡಿದರು. ಸಂಪತ್ತಿಗೆ ಸವಾಲ್‌ ಚಿತ್ರದ ಎಮ್ಮೆ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಹಿನ್ನೆಲೆಗಾಯಕನಾಗಿ ರಾಜ್‌ರನ್ನು ಪರಿಚಯಿಸಿದ್ದೇ ಜಿ.ಕೆ.ವೆಂಕಟೇಶ್‌.

5. ಅರ್ಜುನ 'ಚಿತ್ರಾ... ಬರೀ ಆನಂದ ಮಾತ್ರ ಅಲ್ಲಾ ... ಈ ಸಮಯ ಶೃಂಗಾರಮಯ... ಒಲವಿನ ಬಾಳಿನ ನವೋದಯ...' ಎಂದು ಮಣಿಪುರದ ರಾಜಕುಮಾರಿ ಚಿತ್ರಾಂಗದೆಯೊಂದಿಗೆ ಸಲ್ಲಾಪಿಸುವ ಈ ಗೀತೆ ಬಬ್ರುವಾಹನ ಚಿತ್ರದ್ದು . ಹುಣಸೂರು ಕೃಷ್ಣಮೂರ್ತಿ ರಚನೆ, ಟಿ.ಜಿ.ಲಿಂಗಪ್ಪ ಸಂಗೀತ.

6. ರಾಜ್‌, ತಮ್ಮ ಕನ್ನಡ ಪ್ರೀತಿಯನ್ನು ಗೋಕಾಕ್‌ ಚಳುವಳಿಯಲ್ಲಿ ಹರಿಸಿದ್ದಂತೂ ಹೌದು; ನವೆಂಬರ್1ರಂದಾದರೂ 'ಜೇನಿನ ಹೊಳೆಯೋ ಹಾಲಿನ ಮಳೆಯೋ... ಸುಧೆಯೋ ಕನ್ನಡ ಸವಿನುಡಿಯೋ...' ಹಾಡು (ಚಿತ್ರ: ಚಲಿಸುವ ಮೋಡಗಳು, ಗೀತರಚನೆ: ಚಿ.ಉದಯಶಂಕರ್‌, ಸಂಗೀತ: ರಾಜನ್‌-ನಾಗೇಂದ್ರ) ಬಾನುಲಿಯಲ್ಲಿ ಬರಲೇಬೇಕು!

7. ತೋಡಿ ರಾಗದ 'ನಾದಮಯ... ಈ ಲೋಕವೆಲ್ಲ... ಕೊಳಲಿಂದ ಗೋವಿಂದ ಆನಂದ ತಂದಿರುವ...' ಹಾಡು ಡಾ.ರಾಜ್‌ 'ಜೀವನಚೈತ್ರ' ಚಿತ್ರಕ್ಕಾಗಿ ಹಾಡಿದ್ದು ಮತ್ತು ಆ ಹಾಡಿಗೆ ಶ್ರೇಷ್ಠ ಹಿನ್ನೆಲೆಗಾಯಕ ರಾಷ್ಟ್ರಪ್ರಶಸ್ತಿ ಗಳಿಸಿದ್ದು ನಮ್ಮೆಲ್ಲರ ಹೆಮ್ಮೆ!

8. ವಾಣಿ ಜಯರಾಂ ಕಂಠ, 'ಓ ಪ್ರಿಯತಮಾ... ಕರುಣೆಯ ತೋರೆಯಾ... ಸನಿಹಕೆ ಬಾರೆಯಾ... ತೀರಿಸಿ ಬಯಕೆಯಾ..' ಹಾಡಿನಲ್ಲಿ ರಾಜ್‌ ದನಿಯೊಂದಿಗೆ ಸೇರಿ, ಎಂ.ರಂಗರಾವ್‌ ಸಂಗೀತದಲ್ಲಿ 'ಕವಿರತ್ನ ಕಾಳಿದಾಸ' ಚಿತ್ರದ ಒಂದು ಸುಮಧುರ ಗೀತೆಯಾಯಿತು!

9. ಅಣ್ಣಾವ್ರು ಹೇಳಿದ 'ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ...' ಬಂಗಾರದ ಮನುಷ್ಯ ಚಿತ್ರದ ಬಂಗಾರದಂಥ ಮಾತನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿದರೆ ಎಲ್ಲರೂ ಬಂಗಾರದ ಮನುಷ್ಯರಾಗುತ್ತೇವೆ. ಬಂಗಾರದ ಮನುಷ್ಯ ಚಿತ್ರದಲ್ಲಿ ದ್ವಾರಕೀಶ್‌, 'ಆತ್ಮಹತ್ಯೆ ಮಾಡಿಕೊಳ್ಳಲು ಹೊಳೆಗೆ ಹಾರಬೇಕೆಂದಿದ್ದೇನೆ; ನೀರು ಸ್ವಲ್ಪ ಬಿಸಿಯಾಗಲೆಂದು ಕಾಯುತ್ತಿದ್ದೇನೆ...' ಎನ್ನುವ ಹಾಸ್ಯ ದೃಶ್ಯ ನೆನಪಿದೆಯೇ?

10. ಒಬ್ಬ ಕುಂಬಾರನು, 'ಬರುವಾಗ ಬೆತ್ತಲೆ... ಹೋಗುವಾಗ ಬೆತ್ತಲೆ... ಬಂದುಹೋಗುವ ನಡುವೆ ಬರೀ ಕತ್ತಲೆ...' ಎಂಬ ಪಾರಮಾರ್ಥಿಕ ಸತ್ಯವನ್ನು ಬಿಡಿಸಿಹೇಳುವ 'ಮಾನವ ಮೂಳೆಮಾಂಸದ ತಡಿಕೆ... ಇದರ ಮೇಲಿದೆ ತೊಗಲಿನ ಹೊದಿಕೆ... ತುಂಬಿದೆ ಒಳಗೆ ಕಾಮಾದಿ ಬಯಕೆ...' ಹಾಡು ಡಾ.ರಾಜ್‌ ಅಭಿನಯದ 'ಭಕ್ತ ಕುಂಬಾರ' ಚಿತ್ರಕ್ಕಾಗಿ ಹುಣಸೂರು ಕೃಷ್ಣಮೂರ್ತಿ ಬರೆದು ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಪಿ.ಬಿ.ಶ್ರೀನಿವಾಸ್‌ ಹಾಡಿದ್ದು.

ಸರಿ, ಆ ಕೊನೆಯ ಗೀತೆಯಾಂದಿಗೆ 'ರಾಜ್‌ ವಿಶೇಷ' ಸಂಚಿಕೆ ಮುಕ್ತಾಯವಾಗುತ್ತದೆ. ಏಕೆಂದರೆ 'ಪರತತ್ವವನು ಬಲ್ಲ ಪಂಡಿತನು ನಾನಲ್ಲ... ವಿಚಿತ್ರಾನ್ನವೊಂದುಳಿದು ನನಗೇನೂ ತಿಳಿದಿಲ್ಲ...' :-) ನಿಮ್ಮ ಗಮನಕ್ಕೆ ಬಂತೋ ಇಲ್ಲವೋ, ರಾಜ್‌ ಗೌರವಾರ್ಥ ಈ ಸಲದ ವಿಚಿತ್ರಾನ್ನದಲ್ಲಿ ಆಂಗ್ಲಭಾಷೆಯ ಪದಗಳ ಬಳಕೆ ಮಾಡಲಾಗಿಲ್ಲ!

ಈಗ ನಿಮಗೆ ಕಾದಿರುವ ಅಚ್ಚರಿಯನ್ನು ತಿಳಿಸುವ ಸಮಯ. ತ್ರಿವೇಣಿ ಸಂಗಮದಲ್ಲಿ ಗಂಗೆ-ಯಮುನೆಯಾಂದಿಗೆ ಗುಪ್ತಗಾಮಿನಿಯಾದ ಸರಸ್ವತಿ ನದಿಯನ್ನು ಪತ್ತೆ ಮಾಡುವ ಕೆಲಸ! ಈ ಮೇಲಿನ ಹತ್ತು ವಿವರಣೆಗಳಲ್ಲಿ ಆಯಾ ಸಂಖ್ಯೆಯ ಅಕ್ಷರಗಳನ್ನು ಮಾತ್ರ ಹೆಕ್ಕಿ, ಜೋಡಿಸುತ್ತ ಹೋಗಿ. ಒಂದನೆಯ ವಿವರಣೆಯ ಒಂದನೇ ಅಕ್ಷರ, ಎರಡನೆಯದರ ಎರಡನೇ ಅಕ್ಷರ, ಹೀಗೆ ಮುಂದುವರೆದು ಹತ್ತನೇ ವಿವರಣೆಯ ಹತ್ತನೇ ಅಕ್ಷರ - ಈ ಎಲ್ಲ ಹತ್ತು ಅಕ್ಷರಗಳನ್ನೂ ಸಾಲಾಗಿ ಜೋಡಿಸಿದರೆ ನಿಮ್ಮನ್ನೇ ಬಣ್ಣಿಸುವ ಮೂರು ಪದಗಳ ಒಂದು ವಾಕ್ಯ ಸಿದ್ಧವಾಗುತ್ತದೆ! 'ಸುಧಾ"ದ ಕೆಣಕು ತಿಣುಕು ವಿಭಾಗದಲ್ಲಿ ಬರುತ್ತಿದ್ದ 'ಗೊಂದಲ ಬಿಡಿಸಿ" ಗೊತ್ತಿದ್ದವರಿಗೆ ಇದು ಹೊಸತೇನಲ್ಲ!

ಅದಾದ ನಂತರ ಈ ಸಲದ ಪ್ರಶ್ನೆ: 'ಬಂಗಾರದ ಮನುಷ್ಯ' ಚಿತ್ರದಲ್ಲಿ ಡಾ.ರಾಜ್‌ ಅಭಿನಯಿಸಿ 'ಜೀವ' ತುಂಬಿದ ಪಾತ್ರದ ಹೆಸರೇನು ಬಲ್ಲಿ'ರಾ"? ಇದಕ್ಕುತ್ತರ ಮತ್ತು ಎಂದಿನಂತೆ ನಿಮ್ಮ ಸಿಹಿ-ಕಹಿ-ಖಾರ-ಉಪ್ಪು-ಹುಳಿ ಪ್ರತಿಕ್ರಿಯೆಗೆ ಸದಾ ಸ್ವಾಗತ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada