»   » ಊರೂರು ಸುತ್ತಿ ತವರಿಗೆ ಬಂದ್ಲು ‘ರತಿ’

ಊರೂರು ಸುತ್ತಿ ತವರಿಗೆ ಬಂದ್ಲು ‘ರತಿ’

Posted By: Staff
Subscribe to Filmibeat Kannada

ರತಿ.
ನೋಡಲಿಕ್ಕೂ ಈಕೆ ರತಿರೂಪಿಯೇ. 'ಬಾಯ್‌ಫ್ರೆಂಡ್‌" ಚಿತ್ರದ ನಾಯಕಿ !

ಯಾರೀ ರತಿ ? ಎಲ್ಲಿಂದ ಬಂದಳು- ತೆಲುಗಿನವಳೋ, ಮಲಯಾಳಿಯೋ ಅಥವಾ ತಮಿಳು ಹುಡುಗಿಯಾ ? ಉಹುಂ, ನಾನು ಬೆಂಗಳೂರಿನವಳು, ಕನ್ನಡತಿ ಎಂದು ನಕ್ಕರು ರತಿ. ಕನ್ನಡತಿ ಹೌದಾದರೂ ಮಾತೃಭಾಷೆ ತಮಿಳು. ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವಳು ಎಂದು ರತಿ ಪರಿಚಯಿಸಿಕೊಂಡರು.

'ಬಾಯ್‌ಫ್ರೆಂಡ್‌"ನ ನಾಯಕಿ ಕನ್ನಡ ಚಿತ್ರರಂಗಕ್ಕೆ ಮಾತ್ರ ಹೊಸಬಳು. ಈಗಾಗಲೇ ತಮಿಳು, ತೆಲುಗು, ಮಲಯಾಳಿ ನೀರು ಕುಡಿದು ಬಂದಿದ್ದಾಳೆ. ತಮಿಳಿನಲ್ಲಿ 12 ಚಿತ್ರಗಳಲ್ಲಿ ಅಭಿನಯಿಸಿದ್ದಾಳಂತೆ. ಒಂದು ಇಂಗ್ಲಿಷ್‌ ಚಿತ್ರದಲ್ಲೂ ಅಭಿನಯಿಸಿದ ಅನುಭವವಿದೆ. ಒಂದು ಕೈ ನೋಡುವ ಎಂದು ಕನ್ನಡಕ್ಕೂ ಬಂದಿದ್ದಾರೆ. ಕೊನೆಗೂ ಕನ್ನಡದಲ್ಲಿ ಅವಕಾಶ ಸಿಕ್ಕ ಕುರಿತು ರತಿಗೆ ಖುಷಿ, ತವರಿಗೆ ಮರಳಿದ ಹೆಣ್ಣಿನ ಪುಳಕವಿರುತ್ತದಲ್ಲ , ಅಂತಾದ್ದು .

ರತಿ ಇನ್ನೂ ವಿದ್ಯಾರ್ಥಿನಿ. ಓದುತ್ತಿರುವುದು ಡೆಂಟಲ್‌ ಸೈನ್ಸ್‌ . ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಾಳೆ, ನಟಿಸುತ್ತಲೂ ಇದ್ದಾಳೆ.

ತಮಿಳು ಚಿತ್ರಗಳ ಬಗ್ಗೆ ರತಿಗೆ ಒಂಚೂರು ಅಭಿಮಾನವಿದೆ. ಗ್ಲಾಮರಸ್‌ ಪಾತ್ರಗಳಷ್ಟೇ ಅಲ್ಲ , ಅಭಿನಯಕ್ಕೆ ಅವಕಾಶವಿರುವ ಪಾತ್ರಗಳಲ್ಲೂ ಆಕೆ ನಟಿಸಿದ್ದಾಳಂತೆ. ಆಕೆಯೇ ಹೇಳುವಂತೆ, 'ಸೋಲಮಾನಂದೈ ಕಥ" ಎನ್ನುವ ಚಿತ್ರದಲ್ಲಿ ಗರ್ಭಿಣಿಯಾಗಿ, ಮಗುವಿನ ಅಮ್ಮನಾಗಿ ನಟಿಸಿದ್ದಾಳೆ. ಆ ಅನುಭವವನ್ನು ಚಪ್ಪರಿಸುವ ರತಿ, ತಮಿಳು ಚಿತ್ರರಂಗದಲ್ಲಿ ಆರೋಗ್ಯಕರ ವಾತಾವರಣ ಇದೆ ಎನ್ನುತ್ತಾರೆ.

ರತಿ ಪಕ್ಕಾ ಹೋಂವರ್ಕ್‌ ಗಿರಾಕಿ. ಸಿದ್ಧತೆ ಇಲ್ಲದೆ ಶೂಟಿಂಗ್‌ಗೆ ಬರೋದೇ ಇಲ್ಲ ಎನ್ನುವ ಈ ನಟೀಮಣಿ- 'ಬಾಯ್‌ಫ್ರೆಂಡ್‌" ಚಿತ್ರದ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ. ಚಿತ್ರ ಗೆದ್ದರೆ ರತಿಗೆ ಇನ್ನಷ್ಟು ಅವಕಾಶ ಸಿಕ್ಕಾವು. ಕನ್ನಡ ಹುಡುಗಿಯನ್ನು ಚಿತ್ರೋದ್ಯಮ ಹೇಗೆ ಬಳಸಿಕೊಳ್ಳುತ್ತದೋ, ನೋಡಬೇಕು.

ಅಂದಹಾಗೆ, 'ಬಾಯ್‌ಫ್ರೆಂಡ್‌" ಚಿತ್ರದಲ್ಲಿ ರತಿಗೆ ನಾಯಕನಾಗಿ ಅಭಿನಯಿಸುತ್ತಿರುವುದು ದಿಲೀಪ್‌. ಹಂಸಲೇಖಾರ 'ಪ್ರೀತಿಗಾಗಿ" ಧಾರಾವಾಹಿ ನೋಡಿದ್ದೀರಾ ? ಹೌದು, ಅದೇ ದಿಲೀಪ್‌. ಚಿತ್ರದ ನಿರ್ದೇಶಕ ಜನ, ಅರ್ಥಾತ್‌ ಜನಾರ್ದನ್‌.

English summary
Bangalore girl Rathi acts in Janardhan's Kannada film 'Boyfriend'. Dileep is in lead role
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada