For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಸಾಲ ಕೇಳಿದರೆ ನಾನು ಕೊಟ್ಟು ಬಿಡ್ತೀನಾ?

  By Staff
  |

  ಗುರುಪ್ರಸಾದ್ ನಿರ್ದೇಶನದ'ಎದ್ದೇಳು ಮಂಜುನಾಥಾ'ಚಿತ್ರದ ನಾಲ್ಕು ನಿಮಿಷದ ಪಾತ್ರಕ್ಕಾಗಿ ಕ್ಯಾಮೆರಾ ಮುಂದೆ ನಿಂತ ನನ್ನ ಕಂಡು, ಜಗ್ಗೇಶ್ ಗೆ ವಿಚಿತ್ರ ಅನುಮಾನ! ಮಿನುಗುತಾರೆ ಕಲ್ಪನಾ ಜೊತೆ ನಾನು ಅಭಿನಯಿಸಿದ್ದೇನೆ ಎಂದು ಅವರಿಗೆ ಯಾಕೆ ಅನ್ನಿಸಿತೋ?

  * ಎಸ್.ಕೆ.ಶಾಮಸುಂದರ

  ಕ್ಷಣಕ್ಕೊಂದು ಕಾಮಿಡಿ ಮಾಡುತ್ತ ಸಿಕ್ಕವರನ್ನೆಲ್ಲ ಗೇಲಿ ಮಾಡುತ್ತಾ ನಗಿಸುತ್ತ ಎಲ್ಲರೊಂದಿಗೆ ಸದಾ ಲೈವ್ಲಿಯಾಗಿರುವ ಜಗ್ಗೇಶ್ ಆವತ್ತು ಸ್ವಲ್ಪ ಹೆಚ್ಚೇ ಗಂಭೀರವಾಗಿ ಕುಳಿತಿದ್ದರು. ಮಾತಲ್ಲೂ ಲೆಕ್ಕಾಚಾರ. ಮೌನದಲ್ಲೂ ಬಡಿವಾರ. ಏನೋ ಯೋಚನೆ. ಯಾವುದೋ ಮೂಡು. ನಿರ್ದೇಶಕ ಹೇಳಿದಷ್ಟೇ ಕೆಲಸ, ಉಳಿದಂತೆ ಸುಮ್ಮನೆ. ಈ ಜಗ್ಗೇಶ್ ಗೆ ಏನಾಗಿದೆ ಇವತ್ತು ಎಂದುಕೊಂಡು ನಾನೂ ಕೂಡ ಸುಮ್ಮನೆ ಲೆಕ್ಕ ಹಾಕುತ್ತಲೇ ಕುಳಿತಿದ್ದೆ. ಏಕಕಾಲಕ್ಕೆ ಐದಾರು ಸಿನಿಮಾ ಒಪ್ಪಿಕೊಂಡರೆ call sheet ಮತ್ತು schedule tensionನಿಂದಾಗಿ ಒಬ್ಬ ಕಲಾವಿದನಿಗೆ ಈ ರೀತಿ ಆಗಬಹುದು, ಅದರಲ್ಲೇನೂ ಆಶ್ಚರ್ಯವಿಲ್ಲ , ಮೇಲಾಗಿ ಚುನಾವಣೆಗಳು ಹತ್ತಿರಬರುತ್ತಿರುವುದರಿಂದ ಕಲಾವಿದ ಕಂ ಕ್ಯಾಂಡಿಡೇಟ್ ಗೆ ಹೀಗೆಲ್ಲ ಆಗಬಹುದು ಎಂದು ಭಾವಿಸಿಕೊಂಡು ನಾನು ನನ್ನಷ್ಟಕ್ಕೆ ನಾನಾಗಿದ್ದೆ.

  ಇದ್ದಕ್ಕಿದ್ದಂತೆ 'ಸಾರ್ ನೀವು ಕಲ್ಪನಾ ಜತೆ act ಮಾಡಿದ್ದೀರಂತೆ ಹೌದಾ ಸಾರ್ ?' ಎಂದು ಜಗ್ಗೇಶ್ ನನಗೆ ನೇರವಾಗಿ ಪ್ರಶ್ನೆ ಎಸೆದರು. ನಾನು ನಕ್ಕೆ. 'ಅಯ್ಯೋರಾಮ ಜೀವನದಲ್ಲಿ ಕ್ಯಾಮೆರಾ ಫೇಸ್ ಮಾಡುತ್ತಿರುವುದು ಇವತ್ತೇ ಮೊದಲು ಸಾರ್, ನಾನೆಲ್ಲಿ ಆ ಕಲ್ಪನಾ ಎಲ್ಲಿ?'ಎಂದು ನಾನು ಮಾಡದ ತಪ್ಪು ಒಪ್ಪಿಕೊಂಡೆ. ನನ್ನ ಮಾತನ್ನು ಜಗ್ಗೇಶ್ ಅರ್ಧ ನಂಬಿದಹಾಗೆ ಕಂಡುಬಂತು. ಸೆಟ್ ನಲ್ಲಿ ಯಾರೋ ಹುಡುಗರು ತಮಾಷೆಗೋ ಅಥವಾ ತಪ್ಪುಗ್ರಹಿಕೆಯಿಂದಲೋ ಅಥವಾ ನನ್ನನ್ನೇನು ಶರಪಂಜರದ ಗಂಗಾಧರ್ ಎಂದು ಕೊಂಡರೋ ಮುಕ್ಕಣ್ಣನೇ ಬಲ್ಲ. ಜಗ್ಗೇಶ್ ಗೆ ನನ್ನ ಬಗ್ಗೆ ಆ ಇಮೇಜ್ ಕೊಟ್ಟು ಛೂ ಬಿಟ್ಟಿದ್ದರು! ಪಾಪ ಜಗ್ಗೇಶು ಹಿರಿಯ ಕಲಾವಿದರಿಗೆ ಸಲ್ಲಬೇಕಾದ ಗೌರವವನ್ನು ಎಲ್ಲಾಬಿಟ್ಟು ನನಗೆ ಸಲ್ಲಿಸುತ್ತಿದ್ದರು.

  ಸೆಟ್ಸ್ ನಲ್ಲಿ ಕ್ರಮೇಣ ಸತ್ಯಮೇವ ಜಯತೆ ಆದನಂತರ ಜಗ್ಗೇಶ್ ಮಾಮೂಲು ಮೂಡಿಗೆ ಮರಳಿ, ಒಂದು ಟೀ ಕುಡಿದು ಮತ್ತೆ ನಗೆ ಚಟಾಕಿ ಸಿಡಿಸುತ್ತಾ ಶೂಟಿಂಗ್ ನಲ್ಲಿ ತೊಡಗಿಕೊಂಡರು. ನಾನೂ ಸಹ ಮೇಕಪ್ ಇಲ್ಲದ ಪಾತ್ರ ನಿರ್ವಹಿಸುವುದಕ್ಕೆ ಆಡ್ ಕೋಟು ಸರಿಮಾಡಿಕೊಂಡೆ.

  ಜಗ್ಗೇಶ್ ನಾಯಕನ್ನಾಗಿ ಹಾಕಿಕೊಂಡು ಗುರುಪ್ರಸಾದ್ ನಿರ್ದೇಶಿಸಿದ್ದ 'ಮಠ' ಚಿತ್ರ ನಕ್ಕು ನಗಿಸುವ ಸೋಷಿಯಲ್ ಕಾಮಿಡಿ ಸರಕು ಎಂದು ಕೇಳಿದ್ದೆ,ಓದಿದ್ದೆ. ಸಿನಿಮಾ ನೋಡಿಲ್ಲದಿದ್ದರೂ ಗುರು ಅವರ ಜತೆಗಿನ ನನ್ನ ಅನೇಕ ಭೇಟಿಗಳಲ್ಲಿ ಅವರ ಜಾಣತನ ಮತ್ತು ಕಿಲಾಡಿತನಗಳನ್ನು ಗುರುತುಹಾಕಿಟ್ಟುಕೊಂಡಿದ್ದೆ. ಅಪ್ಪಟ ಕನ್ನಡ ಮನೆತನದ ಕನಕಪುರದ ಹುಡುಗ ಗುರು ಕಥೆ ಚಿತ್ರಕಥೆ ಸಂಭಾಷಣೆ ಬರೆಯುವುದರಲ್ಲಿ ಪಾರಂಗತ ಎಂದು ಗೊತ್ತಾಗಿತ್ತು. ಕನ್ನಡ ಚಲನಚಿತ್ರಕ್ಕೆ ಬೇಕಾದ ಕುಸುರಿತನ ಮತ್ತು ಹುಷಾರಿತನ ಈಗಾಗಲೆ ಅವರ ರಕ್ತದಲ್ಲಿ ಇಂಗಿದೆ. ಮುಖ್ಯವಾಗಿ ಅವರ sense of humor and undiluted wit ನನಗೆ ಇಷ್ಟವಾಗಿತ್ತು. ಅದನ್ನು ಅವರ ಬಳಿ ನೇರವಾಗಿ ಹೇಳಿದ್ದೆ ಕೂಡ. ಅದೇ ನಾನು ಮಾಡಿದ ಇನ್ನೊಂದು ತಪ್ಪು.

  'ಶಾಮ್ ಸರ್ ನಿಮ್ಮ ಡೈಲಾಗ್ ಡೆಲಿವರಿ, pause, ಮತ್ತು ಆ ತುಂಟನೋಟಗಳು ಚೆನ್ನಾಗಿರತ್ವೆ. ನಮ್ಮ ಸಿನಿಮಾದಲ್ಲಿ ಒಂದು ಪಾತ್ರ ಮಾಡಲೇಬೇಕು' ಎಂದು ಮೂರು ತಿಂಗಳಿನಿಂದ ಹೇಳುತ್ತಲೇ ಇದ್ದರು. ಕೊನೆಗೂ ನನ್ನ ಒಂದು ಶನಿವಾರದ ಮತ್ತು ಜಗ್ಗೇಶ್ ಅವರ ಇನ್ನೊಂದು ಶನಿವಾರದ availability coincide ಆಗಿ ಶೂಟಿಂಗ್ ಸಾಧ್ಯವಾಯಿತು. ಲೊಕೇಷನ್ : ಕಾರ್ಡ್ ರೋಡ್ ಮೋದಿ ಆಸ್ಪತ್ರೆ ಸಮೀಪದ ಗುರು ಟೀಕ್ ಇನ್ವೆಸ್ಟ್ ಮೆಂಟ್ ಅವರ ವಿಶಾಲವಾದ ಕಚೇರಿ.

  ಜಗತ್ತಿನಲ್ಲಿರುವ ಸೋಮಾರಿಗಳ ಕುಲವನ್ನು ಪ್ರತಿನಿಧಿಸುವ ಪಾತ್ರ ಜಗ್ಗೇಶ್ ಅವರದ್ದು. ಜಗ್ಗೇಶ್ ಮಹಾ ಸೋಂಭೇರಿ ಎಂದು 'ಎದ್ದೇಳು ಮಂಜುನಾಥಾ' ಚಿತ್ರದ ಕಥೆ ಸಾರಿಸಾರಿ ಹೇಳುತ್ತದೆ. ಚಲನಚಿತ್ರದಲ್ಲಿ ಜಗ್ಗೇಶ್ ಅವರನ್ನೂ ನಿಜ ಜೀವನದಲ್ಲಿ ನನ್ನಂಥವರನ್ನು ಎದ್ದೇಳಿಸುವುದಕ್ಕೋಸ್ಕರವೇ ಜನ ಇರುತ್ತಾರೆ. ಅಂಥ ಜನ ಎಲ್ಲಿ ತಪ್ಪಿಸಿಕೊಂಡರೂ ಮನೆಯಲ್ಲಂತೂ ಇದ್ದೇ ಇರುತ್ತಾರಲ್ಲ. 'ಕೆಲಸ ಇಲ್ಲ ಕಾರ್ಯ ಇಲ್ಲ , ಮೂರು ಕಾಸು ಹಣ ಸಂಪಾದನೆ ಇಲ್ಲ ಇವರ ಜನ್ಮಕ್ಕಿಷ್ಟು ಬೆಂಕಿಹಾಕಾ' ಎಂದು ಜಗ್ಗೇಶ್ ಹೆಂಡತಿ ಪ್ರತಿನಿತ್ಯ ವರಾತ ತೆಗೆಯುತ್ತಿರುತ್ತಾಳೆ. 'ಹೋಗ್ರೀ, ಯಾವುದಾದರೂ ಬ್ಯಾಂಕಿಗೆ ಹೋಗಿ ಸಾಲ ಕೇಳ್ರೀ, ಏನಾದರೂ ಬಿಸಿನೆಸ್ಸೋ ಪಜಿನೆಸ್ಸೋ ಮಾಡಿ ಸಂಸಾರ ತೂಗಿಸಿ' ಎಂದು ಅವನ ಹೆಂಡತಿ ಮೂಗು ತಿವಿದು ಕಳಿಸಿರುತ್ತಾಳೆ. ಪಾಪ ಜಗ್ಗು ಹೆಂಡತಿಯ ಮಾತು ಕೇಳಿ ಬ್ಯಾಂಕಿಗೆ ಸಾಲ ಕೇಳಲು ಬರುತ್ತಾನೆ. ಅಲ್ಲಿ ನಾನು ಬ್ಯಾಂಕ್ ಮ್ಯಾನೇಜರ್. ಅಂಕಿಅಂಶಗಳ ಸಮುದ್ರದಲ್ಲಿ, ರಿಸರ್ವ್ ಬ್ಯಾಂಕಿನ ಕಟ್ಟಳೆಗಳಲ್ಲಿ ಮುಳುಗಿತೇಲುತ್ತಿರುವ ನೌಕರ. ನನ್ನಿಂದಲೇ, ನನ್ನ ತಲೆಮೇಲೇ ಭಾರತದ ಅರ್ಥ ವ್ಯವಸ್ಥೆ ನಿಂತಿದೆ ಎಂದು ಭಾವಿಸಿರುವ ಬ್ಯಾಂಕ್ ಆಫೀಸರ್.

  ನಾಕು ನಿಮಿಷಗಳ ಒಂದು ಸೀನು ಸೆರೆಹಿಡಿಯುವುದಕ್ಕೆ ಇಡೀ ತಂಡ ದಿನವಿಡೀ ದುಡಿಯುತ್ತದೆ. ಕಲೆಯೆಂದರೇನು ಎಂದು ಅರಿಯದ ಕಲಾವಿದನಲ್ಲದ ನನ್ನಂಥವರಿಗೆ ಇದೆಲ್ಲ ಬೇಕಿಲ್ಲದ ಹೊಸ ಅನುಭವಗಳಾಗಿ ಎದುರಾಗುತ್ತವೆ. ಪ್ರಾಮಾಣಿಕವಾಗಿ ಸೋಮಾರಿಯಾದ ನಾನು, ಕಳೆದ ಶನಿವಾರ ಬೆಳಗ್ಗೆ ಬೇಗ ಎದ್ದು ಮಲ್ಲೇಶ್ವರಂಗೆ ಹೋಗಿ ಅಲ್ಲಿಂದ ಕಾರ್ಡ್ ರೋಡ್ಗೆ ಹೋಗಿ ನಾಕು ನಿಮಿಷಗಳ ಪಾತ್ರಕ್ಕೆ ಎಂಟುಗಂಟೆ ಕಾಯ್ದು ನಟಿಸುವ ಹೊತ್ತಿಗೆ ಸುಸ್ತಾಗಿಹೋಯಿತು. ಅದಕ್ಕೇ ಹೇಳುವುದು ಸಾರ್ ಯಾರ್ಯಾರು ಏನು ಕೆಲಸ ಮಾಡಬೇಕೋ ಅದನ್ನೆ ಮಾಡುತ್ತಿದ್ದರೆ ಚೆನ್ನ.

  ಅಗಸ ಬಟ್ಟೆ ಸೆಳೆಯಬೇಕು,ಕಮ್ಮಾರ ಕಬ್ಬಿಣ ತಟ್ಟಬೇಕು,ದೋಸೆ ಭಟ್ಟರು ದೋಸೆ ಹುಯ್ಯಬೇಕು,ಕಾಫಿ ಹುಡುಗ ಕಾಫಿ ಬೆರೆಸಬೇಕು, ನಾಸ್ ಡ್ಯಾಕ್ ನಲ್ಲಿ ಲಿಸ್ಟ್ ಆಗುವುದಕ್ಕೆ ನಿಲೇಕಣಿ ಅಂಥವರು ಸಾಫ್ಟ್ ವೇರ್ ಕೋಡುಗಳನ್ನು ಬರೆಯುತ್ತಿರಬೇಕು,ನಿಮ್ಮ ಶಾಮ್ ಆ ವಿಷಯಗಳನ್ನು ಕನ್ನಡದಲ್ಲಿ ಅಪ್ ಲೋಡು ಮಾಡುತ್ತಿರಬೇಕು ; ಚಡ್ಡಿಗಳ ಸರಸಂಘಚಾಲಕ ಯಡ್ಡಿ, ವಚನ ಭ್ರಷ್ಟರ ಗೌಡರ ವಂಶ ಮತ್ತು ಸೋನಿಯಾ ಮನೆಯ ಜೀತಕ್ಕೆ ದುಡಿಯುವ ಕಮಂಗಿಗಳು ತಮ್ಮ ಕುಲಕಸುಬು ರಾಜಕೀಯವನ್ನು ಅವ್ಯಾಹತವಾಗಿ ಮಾಡುತ್ತಿರಬೇಕು. ನಮ್ಮ ನಿಮ್ಮ ಕರ್ನಾಟಕವನ್ನು ಅವರೇ ನಂದನವನ್ನಾಗಿ ಮಾಡಬೇಕು. ಢೋಂಗಿ ಕನ್ನಡ ನಾಯಕರು Carpet bagging ಮಾಡುತ್ತಿರಬೇಕು. ಇದನ್ನೆಲ್ಲ ಓದಿದನಂತರ ಹಂಸಕ್ಷೀರ ನ್ಯಾಯಿಗಳಾದ ತಾವುಗಳು ಲೋಕವನ್ನು ತಿದ್ದುವ ಕಾಮೆಂಟುಗಳನ್ನು ಬರೆಯುತ್ತಿರಬೇಕು. ಆಧುನಿಕ ವರ್ಣಾಶ್ರಮದ ರೀತಿನೀತಿಗಳು ಹೀಗೇ ಮುಂದುವರೆಯಬೇಕು!

  'ಎದ್ದೇಳು ಮಂಜುನಾಥಾ' ಚಿತ್ರದಲ್ಲಿ ಶಾಮ್!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X