»   »  ಅಗ್ನಿ ಶ್ರೀಧರ್ ನಿರ್ದೇಶನದಲ್ಲಿ ಶಿವಣ್ಣನ ಚಿತ್ರ

ಅಗ್ನಿ ಶ್ರೀಧರ್ ನಿರ್ದೇಶನದಲ್ಲಿ ಶಿವಣ್ಣನ ಚಿತ್ರ

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಅಗ್ನಿ ಶ್ರೀಧರ್ ಆಕ್ಷನ್, ಕಟ್ ಹೇಳಲಿದ್ದಾರೆ. ಶಿವರಾಜ್ ಕುಮಾರ್ ನಾಯಕ ನಟನಾಗಿ 'ತಮಸ್ಸು' ಎಂಬ ಚಿತ್ರವನ್ನು ಅಗ್ನಿ ಶ್ರೀಧರ್ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ವಿಭಿನ್ನ ಶೀರ್ಷಿಕೆ ಇಡಬೇಕು ಎಂಬ ಉದ್ದೇಶದಿಂದ ತಮಸ್ಸು ಎಂದು ಇಟ್ಟಿದ್ದೇವೆ ಎನ್ನುತ್ತಾರೆ ಅಗ್ನಿ ಶ್ರೀಧರ್.

ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರೇ ಕತೆ, ಚಿತ್ರಕತೆಯನ್ನು ಬರೆದಿದ್ದಾರೆ. ತಮಸ್ಸು ಎಂದರೆ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಸೃಷ್ಟಿಯ ಮೂರು ಮೂಲಗುಣಗಳಲ್ಲಿ ಒಂದು ಎಂದರ್ಥ. ಕ್ರೂರ ಮನಸ್ಸು ಹೇಗೆ ತಾಮಸ ಗುಣಕ್ಕೆ ಬದಲಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

'ಸ್ಲಂ ಬಾಲ' ಮತ್ತು 'ಆ ದಿನಗಳು' ಚಿತ್ರಗಳಿಗೆ ಅಗ್ನಿ ಶ್ರೀಧರ್ ಅವರೇ ಚಿತ್ರಕತೆ ಬರೆದಿದ್ದರು.ಇದೀಗ 'ತಮಸ್ಸು 'ಎಂಬ ಚಿತ್ರವನ್ನು ಕೈಗೆತ್ತಿಕೊಂಡು ಅವರೇ ನಿರ್ದೇಶಿಸುತ್ತಿರುವುದು ವಿಶೇಷ. ಇದೊಂದು ಸಂದೇಶಾತ್ಮಕ ಚಿತ್ರವಾಗಿದ್ದು ಶಿವಣ್ಣ ನ ಕೈಗೆ ಮಚ್ಚು, ಲಾಂಗು ಕೊಡುತ್ತಿಲ್ಲ ಎನ್ನುತ್ತಾರೆ ಅಗ್ನಿ ಶ್ರೀಧರ್.

ಚಿತ್ರದಲ್ಲಿ ನವ್ಯಾ ನಾಯರ್ ಹಾಗೂ ಕಮಲಿನಿ ಮುಖರ್ಜಿ ನಾಯಕಿಯರು. ಮೆಗಾ ಮೂವೀಸ್ ಲಾಂಛನದಲ್ಲಿ ಸೈಯದ್ ಅಮಾನ್ ಮತ್ತು ರವೀಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಂಗ ಎಸ್ಸೆಸ್ಸೆಲ್ಸಿ ಚಿತ್ರಕ್ಕೆ ಸಂಗೀತ ನೀಡಿದ್ದ ಸಂದೀಪ್ ಚೌಟ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಖ್ಯಾತ ನಟ ನಾಸಿರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗುಜರಾತ್ ನಲ್ಲಿ ನಡೆದ ನೈಜ ಘಟನೆ ಆಧಾರವಾಗಿಟ್ಟುಕೊಂಡು ಈ ಚಿತ್ರದ ಕತೆಯನ್ನು ಹೆಣೆಯಲಾಗಿದೆ. ಮನರಂಜನೆಯ ಅಂಶಗಳೊಂದಿಗೆ ಒಂಚೂರು ಬದಲಾವಣೆ ಮಾಡಿ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎನ್ನುತ್ತಾರೆ ಶ್ರೀಧರ್. ಈ ಚಿತ್ರ ಅಕ್ಟೋಬರ್ 23 ರಂದು ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada