»   » ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿ; ಹೊಸ ಪರ್ವ ಆರಂಭ

ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿ; ಹೊಸ ಪರ್ವ ಆರಂಭ

Posted By:
Subscribe to Filmibeat Kannada
Innovative Film Awards
ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಇದೇ ಮೊದಲ ಬಾರಿಗೆ ''ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿ''ಗಳನ್ನು ಕೊಡಲು ಮುಂದಾಗಿದೆ. ಈ ವಿಷಯವನ್ನು ಬೆಂಗಳೂರು ಲೀಲಾ ಪ್ಯಾಲೇಸ್ ನಲ್ಲಿ ಭಾನುವಾರ ಸಂಜೆ ಪ್ರಕಟಿಸಲಾಯಿತು. ಈ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಮತ್ತೊಂದು ಪ್ರಶಸ್ತಿಯ ಪರ್ವ ಆರಂಭವಾದಂತಾಗಿದೆ.

ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸೇರಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ರಾಘವೇಂದ್ರ ರಾಜ್ ಕುಮಾರ್, ಸಾ ರಾ ಗೋವಿಂದು, ಥಾಮಸ್ ಡಿ ಸೋಜಾ ಹಾಗೂ ಚಿತ್ರರಂಗದ ಹಲವರು ಉಪಸ್ಥಿತರಿದ್ದರು.

ಪ್ರಶಸ್ತಿಯ ಲಾಂಛನ ಹಾಗೂ ರಿಕಿ ಕೇಜ್ ಸಂಗೀತ ಸಂಯೋಜನೆಯ ಕವಿರಾಜ್ ಸಾಹಿತ್ಯವಿರುವ ಥೀಮ್ ಹಾಡನ್ನು ಬಿಡುಗಡೆ ಮಾಡಲಾಯಿತು. ಇನ್ನೋವೆಟಿವ್ ಫಿಲ್ಮ್ ಪ್ರಶಸ್ತಿಗಳ ಪ್ರಾಯೋಜಕರಾದ ಜೀ ಕನ್ನಡ ವಾಹಿನಿಯ ಗೌತಮ್ ಮಾಚಯ್ಯ ಮತ್ತು ಶೇಖರ್ ಈ ಸಂದರ್ಭಕ್ಕೆ ಸಾಕ್ಷಿಯಾದರು.

ಏಪ್ರಿಲ್ 18ರಂದು 40 ಮಂದಿ ಕಲಾವಿದರಿಗೆ ಇನ್ನೊವೇಟಿವ್ ಫಿಲ್ಮ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಚಿತ್ರರಂಗದ ಎಲ್ಲ ವಿಭಾಗಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತಿದ್ದು ಆಯ್ಕೆ ತಂಡ ಈಗಾಗಲೆ ಕಾರ್ಯೊನ್ಮುಖವಾಗಿದೆ. ಒಟ್ಟು ಮೂರು ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಏಪ್ರಿಲ್ 18ರ ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಫಿಲ್ಮ್ ಫೇರ್ ಪ್ರಶಸ್ತಿಗಳ ಮಾದರಿಯಲ್ಲಿ ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿ ಸಮಾರಂಭ ಅದ್ದೂರಿಯಾಗಿರುತ್ತದೆ ಎನ್ನುತ್ತಾರೆ ರಾಕ್ ಲೈನ್ ವೆಂಕಟೇಶ್ ಮತ್ತು ಇನ್ನೋವೆಟಿವ್ ಫಿಲ್ಮ್ ಸಿಟಿಯ ಪ್ರಸಾದ್. ಇವರಿಬ್ಬರೂ ಇನ್ನೋವೆಟಿವ್ ಫಿಲ್ಮ್ ಪ್ರಶಸ್ತಿಗಳ ಪ್ರಮುಖ ರೂವಾರಿಗಳು. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಕರ್ಷಿಸುವಲ್ಲಿ ಈ ಪ್ರಶಸ್ತಿಗಳು ಸಹಕಾರಿಯಾಗಲಿವೆ ಎಂಬ ಮಾತನ್ನು ಜಯಮಾಲಾ ಈ ಸಂದರ್ಭದಲ್ಲಿ ಹೇಳಿದರು.

ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿಗಳ ರಾಯಭಾರಿಯಾಗಿರುವ ರೆಬಲ್ ಸ್ಟಾರ್ ಅಂಬರೀಶ್ ಮಾತನಾಡುತ್ತಾ, ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಪ್ರಶಸ್ತಿಯನ್ನು ಪಡೆಯಲೇ ಬೇಕೆಂಬ ತುಡಿತ ಕನ್ನಡ ಚಿತ್ರೋದ್ಯಮದಲ್ಲಿ ಶುರುವಾಗಲಿದೆ ಎಂಬ ಮಾತನ್ನು ಪ್ರಶಸ್ತಿ ಸಲಹಾ ಸಮಿತಿಯ ಮುಖ್ಯಸ್ಥ ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

2009ನೇ ಸಾಲಿನಲ್ಲಿ ಒಟ್ಟು 122 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಒಟ್ಟು 40 ವಿಭಾಗಗಳಲ್ಲಿ ಇನ್ನೋವೇಟಿವ್ ಫಿಲ್ಮ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಪ್ರಸಾರ ಹಕ್ಕುಗಳನ್ನು ಜೀ ಕನ್ನಡ ಪಡೆದುಕೊಂಡಿದೆ. ನೇರ ಪ್ರಸಾರ ಮಾಡದೆ ಚಿತ್ರೀಕರಿಸಿಕೊಂಡು ನಂತರದ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಜೀ ಕನ್ನಡ ಪ್ರಸಾರ ಮಾಡಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada