»   »  'ಜಸ್ಟ್ ಮಾತ್ ಮಾತಲ್ಲಿ' ಸುದೀಪ್, ರಮ್ಯಾ ಸಿಂಗಪುರಕ್ಕೆ

'ಜಸ್ಟ್ ಮಾತ್ ಮಾತಲ್ಲಿ' ಸುದೀಪ್, ರಮ್ಯಾ ಸಿಂಗಪುರಕ್ಕೆ

Posted By:
Subscribe to Filmibeat Kannada

ನಗರಕ್ಕೆ ಹೊಂದುಕೊಂಡಂತಿರುವ ಅಭಿಮಾನ್ ಸ್ಟೂಡಿಯೋ ಅಂದು ಗ್ರಾಮದಂತೆ ಕಾಣುತ್ತಿತ್ತು. ಗ್ರಾಮದಲ್ಲಿ ನಡೆಯುವ ಹಬ್ಬದ ವಾತವರಣ ಕೂಡ ಅಲ್ಲಿತ್ತು. ಈ ಸುಂದರ ಪರಿಸರದಲ್ಲಿ 'ಜಸ್ಟ್ ಮಾತ್ ಮಾತಲಿ' ಚಿತ್ರದ 'ಎಲ್ಲೋ ಜಿನುಗುವ ನೀರು ಎಲ್ಲೋ ಝುರಿಯಾಗಿ ಹರಿದು ಎಲ್ಲೋ ಸಾಗರವ ಸೇರೋ ಪ್ರೀತಿ ಏನಿದು' ಎಂಬ ಗೀತೆಯ ಚಿತ್ರೀಕರಣ ನೆರವೇರಿತು.

ಕಲಾ ನಿರ್ದೇಶಕ ಅರುಣ್ ಸಾಗರ್ ಅಪಾರ ವೆಚ್ಚದಲ್ಲಿ ನಿರ್ಮಿಸಿರುವ ಭವ್ಯ ಸೆಟ್‌ನಲ್ಲಿ ನಾಯಕ ಸುದೀಪ್ ಹಾಗೂ ನಾಯಕಿ ರಮ್ಯ ಈ ಹಾಡಿಗೆ ಹೆಜ್ಜೆ ಹಾಕಿದರು. ನೂರಕ್ಕೂ ಹೆಚ್ಚಿನ ಸಹ ಕಲಾವಿದರು ಹಾಗೂ 70ಜನ ನೃತ್ಯಗಾರರು ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಇಲ್ಲಿಯವರೆಗೂ ಚಿತ್ರಕ್ಕೆ 34ದಿನಗಳ ಚಿತ್ರೀಕರಣ ಮುಕ್ತಾಯವಾಗಿದ್ದು, 13ದಿನಗಳ ಚಿತ್ರೀಕರಣ ಬಾಕಿಯಿದೆ ಎಂದು ತಿಳಿಸಿರುವ ನಿರ್ಮಾಪಕ ಆರ್.ಶಂಕರ್ ಮುಂದಿನ ವಾರ ಚಿತ್ರತಂಡ ಸಿಂಗಾಪುರಕ್ಕೆ ತೆರಳುತ್ತಿದೆ ಅಂದರು. ನಾಯಕನಾಗಿ ಚಿತ್ರದಲ್ಲಿ ಅಭಿನಯಿಸುತ್ತಿರುವ ಸುದೀಪ್ ಈ ಚಿತ್ರದ ನಿರ್ದೇಶಕರೂ ಹೌದು. ಒಪ್ಪಿಕೊಂಡ ಕೆಲಸವನ್ನು ಯಾವುದೇ ತೊಂದರೆಯಿಲ್ಲದೆ ಮುಗಿಸುವ ಸಾಮರ್ಥ್ಯವುಳ್ಳವರು ಅವರು. ಇದಕ್ಕೆ ಅವರ ಕರ್ತವ್ಯ ನಿಷ್ಠೆಯೇ ಸಾಕ್ಷಿ.

ಚಿತ್ರೀಕರಣದ ಜೊತೆಜೊತೆಗೆ ಚಿತ್ರಕ್ಕೆ ಸಂಕಲನ ಕಾರ್ಯವೂ ನಡೆಯುತ್ತಿದೆ. ಬೆಳಗ್ಗೆ ಸಂಕಲನಕಾರರೊಂದಿಗೆ ಸಂಕಲನ ಕ್ರಿಯೆಯಲ್ಲಿ ನಿರತರಾಗುವ ಸುದೀಪ್ ಸಂಜೆಯಿಂದ ಮುಂಜಾನೆಯವರೆಗೂ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ. ನಿರ್ದೇಶಕರ ಕಾರ್ಯವೈಖರಿಯನ್ನು ನಿರ್ಮಾಪಕರು ಪ್ರಶಂಸಿಸಿದ್ದಾರೆ.

ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸುದೀಪ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಶ್ರೀವೆಂಕಟ್ ಛಾಯಾಗ್ರಹಣ, ರಘುದೀಕ್ಷಿತ್ ಸಂಗೀತ, ಕೆಂಪರಾಜ್ ಸಂಕಲನ, ಕೆ.ನಂಜುಂಡ ಸಂಭಾಷಣೆ, ರವಿವರ್ಮ ಸಾಹಸ, ಮುರುಳಿ, ಅಂಜು ಮಹೇಂದ್ರ ನೃತ್ಯ, ನರಸಿಂಹ ನಿರ್ಮಾಣ ನಿರ್ವಹಣೆ ಹಾಗೂ ಅಚ್ಯುತರಾವ್ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ರಮ್ಯ, ಅವಿನಾಶ್, ರಾಜೇಶ್, ಸಂಗೀತಾ, ಕೀರ್ತೀಗೌಡ, ಯತಿರಾಜ್, ಅರುಣ್‌ಸಾಗರ್, ರಘು ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada