»   » ಪ್ರಕಾಶ್ ರೈಗೆ ಪ್ರತಿಷ್ಠಿತ ವಿ ಶಾಂತಾರಾಂ ಪ್ರಶಸ್ತಿ

ಪ್ರಕಾಶ್ ರೈಗೆ ಪ್ರತಿಷ್ಠಿತ ವಿ ಶಾಂತಾರಾಂ ಪ್ರಶಸ್ತಿ

Posted By:
Subscribe to Filmibeat Kannada

ದಕ್ಷಿಣ ಭಾರತದ ಜನಪ್ರಿಯ ನಟ ಪ್ರಕಾಶ್ ರೈ ಅವರಿಗೆ ಪ್ರತಿಷ್ಠಿತ ವಿ ಶಾಂತಾರಾಂ ಪ್ರಶಸ್ತಿ ಲಭಿಸಿದೆ. ತಮಿಳಿನ 'ಕಾಂಚೀವರಂ' ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಬಾಲಿವುಡ್ ನ ಶಾರುಖ್ ಖಾನ್, ಸೈಫ್ ಆಲಿ ಖಾನ್, ಉಪೇಂದ್ರ ಲಿಮಯೆ ಹಾಗೂ ಮಲಯಾಳಂನ ಮೋಹನ್ ಲಾಲ್ ನಾಮ ನಿರ್ದೇಶನಗೊಂಡಿದ್ದರು. ಅಂತಿಮವಾಗಿ ಶಾಂತಾಂರಾಂ ಪ್ರಶಸ್ತಿ ಪ್ರಕಾಶ್ ರೈ ಪಾಲಾಗಿದೆ.

ಪ್ರಕಾಶ್ ರೈ ಮಾತನಾಡುತ್ತಾ, ವಿ ಶಾಂತಾರಾಂ ಪ್ರಶಸ್ತಿ ಬಂದಿರುವುದು ನನ್ನ ವೃತ್ತಿ ಜೀವನಕ್ಕೆ ಸಂದ ಅತಿ ದೊಡ್ಡ ಗೌರವ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಟನಾಗಿ ಮಾತ್ರವಲ್ಲದೆ ಕನ್ನಡಿಗನಾಗಿ ಶಾಂತಾರಾಂ ಪ್ರಶಸ್ತಿಗೆ ಪಾತ್ರರಾಗಿರುವುದು ಹೆಮ್ಮೆ ಅನ್ನಿಸುತ್ತದೆ. ನಾಟಕ, ಸಾಹಿತ್ಯ, ಗೆಳೆಯರ ಬಳಗ, ಶ್ರಮ ಇವೇ ನನಗೆ ಪ್ರಶಸ್ತಿ ಬರಲು ಮುಖ್ಯ ಕಾರಣಕರ್ತರು ಎಂದು ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ.

ಹಿಂದಿಯ 'ದಿಲ್ ಬೋಲೆ ಹಡಿಪ್ಪಾ' ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. 'ದಿಲ್ ಬೋಲೆ ಹಡಿಪ್ಪಾ' ಚಿತ್ರ ನನ್ನ ಮನಸ್ಸಿಗೆ ಹತ್ತಿರವಾದ ಚಿತ್ರ. ಪ್ರಶಸ್ತಿ ಬಂದಿರುವುದಕ್ಕೆ ತುಂಬಾ ಸಂತಸವಾಗಿದೆ. ಈ ಚಿತ್ರದ ಪಾತ್ರಕ್ಕಾಗಿ ಬಹಳಷ್ಟು ಶ್ರಮವಹಿಸಿದ್ದಾಗಿ ರಾಣಿ ಮುಖರ್ಜಿ ತಿಳಿಸಿದರು.

ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ವಿ ಶಾಂತಾರಾಂ ಅವರ ಚಿತ್ರ 'ನವರಂಗ್'ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾಂಜೀವರಂ ಚಿತ್ರಕ್ಕಾಗಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಹಾಗೂ ನಿರ್ದೇಶನಕ್ಕಾಗಿ ಪ್ರಿಯದರ್ಶನ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಹ ಲಭಿಸಿದೆ. ಮರಾಠಿ ಚಿತ್ರ 'ಗಾಬ್ರಿಚಾ ಪೌಸ್' ಹಾಗೂ ಸೈಫ್ ಅಲಿ ಖಾನ್ ಅವರ ಮೊದಲ ನಿರ್ಮಾಣದ ಚಿತ್ರ ಲವ್ ಆಜ್ ಕಲ್ ಚಿತ್ರಗಳಿಗೆ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳು ಲಭಿಸಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada