»   » ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕಿರುತೆರೆಗೆ!

ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕಿರುತೆರೆಗೆ!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ನಮಸ್ಕಾರ... ನಮಸ್ಕಾರ... ನಮಸ್ಕಾರ... ಎನ್ನುತ್ತಾ 'ಕಾಮಿಡಿ ಟೈಂ' ಎರಡನೇ ಇನ್ನಿಂಗ್ಸ್ ಆರಂಭಿಸಲು ಗಣೇಶ್ ಸಿದ್ಧರಾಗಿದ್ದಾರೆ. ಐದು ಕಂತುಗಳಲ್ಲಿ ಪ್ರಸಾರವಾಗಲಿರುವ ಈ ವಿಶೇಷ ಕಾರ್ಯಕ್ರಮ ಡಿಸೆಂಬರ್ ಮೊದಲ ವಾರದಿಂದ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗಣೇಶ್, ಮತ್ತೆ ಅಭಿಮಾನಿಗಳ ಜತೆ ಮಾತನಾಡುತ್ತಿರುವುದು ಖುಷಿ ಕೊಟ್ಟಿದೆ. ಅದಾಗಲೇ ಅಭಿಮಾನಿಗಳ ಕಡೆಯಿಂದ ರಾಶಿ ರಾಶಿ ಪತ್ರಗಳು ತಲುಪಿವೆ ಎನ್ನುತ್ತಾರೆ. ರಾಶಿ ರಾಶಿ ಪತ್ರಗಳಿಂದ ಒಂದಷ್ಟನ್ನು ಆಯ್ದುಕೊಂಡು ಸ್ಟುಡಿಯೋ ಕಡೆಗೆ ಪಾದ ಬೆಳೆಸುವುದಷ್ಟೇ ಗಣೇಶನ ಮುಂದಿನ ಕೆಲಸ.

'ಕಾಮಿಡಿ ಟೈಂ' ಮತ್ತೆ ಯಾಕೆ ಮಾಡಬಾರದು? ಎಂಬುದು ಗಣೇಶ್ ಅಭಿಮಾನಿಗಳ ಬಹುಕಾಲದ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರ ಎಂಬಂತೆ ಮತ್ತೆ ಗಣೇಶನ 'ಕಾಮಿಡಿ ಟೈಂ' ಅಣಿಯಾಗಿದ್ದಾರೆ. ಅಭಿಮಾನಿಗಳ ಬಗ್ಗೆ ತುಂಬ ಪ್ರೀತಿ, ಗೌರವ ಇದೆ ಎನ್ನುವ ಗಣೇಶ್, ಈ ಬಾರಿಯ ಕಾಮಿಡಿ ಟೈಂನ್ನು ವಿಭಿನ್ನವಾಗಿ ಮಾಡಬೇಕೆಂದಿದ್ದಾರೆ.

ಅಭಿಮಾನಿಗಳಿಗೆ ಫೋನ್ ಮಾಡಿ ತನ್ನ ಸುಳಿವು ಕೊಡದೆ ಯಾರದೋ ಧ್ವನಿಯಲ್ಲಿ ಮಾತಾಡಿ ಕಾಮಿಡಿ ಮಾಡಿ ಅವರನ್ನು ಗೋಳು ಹೊಯ್ದುಕೊಳ್ಳವುದೆಲ್ಲಾ ಈ ಸಲ ಇರುವುದಿಲ್ಲವಂತೆ. ಈ ಬಾರಿಯ ಕಾಮಿಡಿ ಟೈಂ ಕಾರ್ಯಕ್ರಮವನ್ನು ಸವಾಲಾಗಿ ಸ್ವ್ವೀಕರಿಸಿದ್ದೇನೆ ಎನ್ನುತ್ತಾರೆ ಗಣೇಶ್. 'ಕಾಮಿಡಿ ಟೈಂ' ಕಾರ್ಯಕ್ರಮದ ವಿವರಗಳು ಸದ್ಯದಲ್ಲೇ ಹೊರಬೀಳಲಿವೆ ಎನ್ನುತ್ತವೆ ಮೂಲಗಳು.

ಏತನ್ಮಧ್ಯೆ ಗಣೇಶ್ ಅಭಿನಯದ ಎರಡು ಚಿತ್ರಗಳು ತೆರೆ ಕಾಣಲು ಸಜ್ಜಾಗಿವೆ. ತನ್ನದೇ ಸ್ವಂತ ನಿರ್ಮಾಣದ 'ಮಳೆಯಲಿ ಜೊತೆಯಲಿ' ಹಾಗೂ 'ಉಲ್ಲಾಸ ಉತ್ಸಾಹ' ಚಿತ್ರಗಳು ಬಿಡುಗಡೆಗಾಗಿ ಕಾದಿವೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದವರು ಮತ್ತೆ ಆ ಕಡೆ ತಲೆ ಹಾಕುವುದು ಅಪರೂಪ. ಗೋಲ್ಡನ್ ಸ್ಟಾರ್ ಗಣೇಶನ ಕಾಮಿಡಿಯನ್ನು ಪ್ರೇಕ್ಷಕರು ಈಗ ಹೇಗೆ ಸ್ವೀಕರಿಸುತ್ತಾರೆ ಎಂಬುದೇ ಮುಂದಿನ ಪ್ರಶ್ನೆ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada