»   » ರಾಜ್ ಚಿತ್ರಗಳ ಇಂಗ್ಲಿಷ್ ಭಾಷಾಂತರ ಅವಾಂತರ!

ರಾಜ್ ಚಿತ್ರಗಳ ಇಂಗ್ಲಿಷ್ ಭಾಷಾಂತರ ಅವಾಂತರ!

Posted By: ‍*ಉದಯರವಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಚಿತ್ರರಂಗದ ಅನುಪಮ ಕಲಾವಿದ, ವರನಟ ಡಾ.ರಾಜ್ ಕುಮಾರ್ ಅಭಿನಯಿಸಿದ ಚಿತ್ರಗಳ ಸಂಖ್ಯೆ ಸರಿಸುಮಾರು ಇನ್ನೂರಕ್ಕೂ ಹೆಚ್ಚು. ಐತಿಹಾಸಿಕ, ಭಕ್ತಿಪ್ರಧಾನ, ದೇವರ ಪಾತ್ರಗಳಲ್ಲಿ, ಗೂಢಚಾರಿ, ಪ್ರತಿನಾಯಕನ ಪಾತ್ರಗಳಲ್ಲಿ ಅವರ ಅಭಿನಯ ಅಮೋಘ. ರಾಜ್ ಅಭಿನಯದ ಚಿತ್ರದ ಶೀರ್ಷಿಕೆಗಳು ಸಹ ಅಷ್ಟೆ ಸೊಗಸಾಗಿರುತ್ತಿದ್ದವು. ಬಂಗಾರದ ಮನುಷ್ಯ, ದೇವತಾ ಮನುಷ್ಯ, ಭಾಗ್ಯದ ಬಾಗಿಲು, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಕರುಣೆಯೇ ಕುಟುಂಬದ ಕಣ್ಣು...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

  ಇಷ್ಟೆಲ್ಲಾ ಹೇಳಲು ಕಾರಣ ನಟಸಾರ್ವಭೌಮನ ಹುಟ್ಟುಹಬ್ಬದಂದು ಅವರ ಅಭಿಮಾನಿ ದೇವರುಗಳು ಅಂತರ್ಜಾಲದ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅಣ್ಣಾವ್ರು ಅಭಿನಯಿಸಿದ ಚಿತ್ರಗಳನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದರೆ ಹೇಗೆ? ಎಂಬ ಸಣ್ಣ ಆಲೋಚನೆ ಟ್ವಿಟ್ಟರ್ ನಲ್ಲಿ ಹರಿದಾಡಿದ್ದೆ ತಡ, ಅಣ್ಣಾವ್ರ ಅಷ್ಟೂ ಚಿತ್ರಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿ ಸಂಭ್ರಮಿಸುತ್ತಿದ್ದಾರೆ.

  ಅಣ್ಣಾವ್ರ ಚಿತ್ರಗಳನ್ನು ಕೆಲವರು ಸೀರಿಯಸ್ಸಾಗಿ ಮತ್ತೆ ಕೆಲವರು ಬೇಕಾಬಿಟ್ಟಿಯಾಗಿ, ತಮಾಷೆಯಾಗಿ ಇಂಗ್ಲಿಷ್ ಗೆ ಭಾಷಾಂತರ ಮಾಡಿ ಅವಾಂತರ ಮಾಡಿದ್ದಾರೆ! ಕೆಲವು ಶೀರ್ಷಿಕೆಗಳು ಉದಾ: Buffalo younger, elder brother ಇದು ಯಾವ ಚಿತ್ರದ ಶೀರ್ಷಿಕೆ ಇರಬಹುದು ಎಂದು ಚಿಂತನೆಗೆ ಹಚ್ಚುತ್ತವೆ. ಕೆಲವರು ವಿಧಿವಿಲಾಸ, ತೇಜಸ್ವಿನಿ, ನಂದಾದೀಪ, ಕುಲವಧ, ಮಹಾಸತಿಅನುಸೂಯ...ಶೀರ್ಷಿಕೆಗಳನ್ನು ಭಾಷಾಂತರಿಸಲು ತಿಣುಕಾಡಿದ್ದಾರೆ. ಟ್ವಿಟ್ಟರ್ ನಲ್ಲಿ ನೀವೂ ಒಂದು ಕೈ ನೋಡಬಹುದು. ನಕ್ಕು ನಲಿಯಲು ಕೆಲವೊಂದು ಸ್ಯಾಂಪಲ್ಲುಗಳು...ಹೀಗಿವೆ.

  *ಕವಿರತ್ನ ಕಾಳಿದಾಸ (Gem of Poets kALi's slave)
  *ಧ್ರುವತಾರೆ (Pole Star)
  *ಸಂಪತ್ತಿಗೆ ಸವಾಲ್ (Challenge to richness)
  *ಗಂಧದಗುಡಿ (The abode of sandalwood; Sandalwood Temple)
  *ಲಗ್ನಪತ್ರಿಕೆ (Marriage invitation card)
  *ಎರಡು ಕನಸು (Two dreams)
  *ಕಸ್ತೂರಿ ನಿವಾಸ (Perfume House)
  *ಬಂಗಾರದ ಮನುಷ್ಯ (Golden Man)
  *ದಾರಿತಪ್ಪಿದ ಮಗ (waylaid son; The Son Who Missed The Road)
  *ಕೆರಳಿದ ಸಿಂಹ (Enraged Lion)
  *ಬೆಟ್ಟದ ಹುಲಿ(Mountain Virgin)
  *ಬಬ್ರುವಾಹನ(BabruVehicle)
  *ನವಕೋಟಿ ನಾರಾಯಣ (Nine crore nArAyaNa)
  *ಶಬ್ದವೇದಿ (Sound expert)
  *ದೂರದ ಬೆಟ್ಟ(Distant Hill)
  * ಒಂದು ಮುತ್ತಿನ ಕಥೆ(Story of a kiss)
  *ಆಕಸ್ಮಿಕ (Unexpected)
  *ಹುಲಿಯ ಹಾಲಿನ ಮೇವು (Tiger's milk's food)
  *ಸಿಪಾಯಿ ರಾಮು(Soldier Raamu)
  *ಚಲಿಸುವ ಮೋಡಗಳು(Moving Clouds)

  'ಕಾಳಹಸ್ತಿ ಮಹಾತ್ಮೆ' ಎಂಬ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಿದ್ದು ಬಿಟ್ಟರೆ ಕೇವಲ ಕನ್ನಡಕ್ಕಾಗಿ ಮಾತ್ರ ತಮ್ಮ ಪ್ರತಿಭೆಯನ್ನು ಮೀಸಲಿಟ್ಟ ಅನನ್ಯ ಕಲಾವಿದ ರಾಜ್. ಸಾಮಾನ್ಯವಾಗಿ ಕನ್ನಡ ಕಾದಂಬರಿ ಆಧರಿಸಿದ ಚಿತ್ರಗಳಲ್ಲೇ ಅಭಿನಯಿಸುತ್ತಿದ್ದ ರಾಜ್ ಚಿತ್ರಗಳ ಅಭಿರುಚಿ ಮೇಲ್ಮಟ್ಟದ್ದು. ಎಂದೂ ದ್ವಂದ್ವಾರ್ಥದ, ಅಗ್ಗದ ಜನಪ್ರಿಯತೆಯ ಸಂಭಾಷಣೆಯಾಗಲೀ ಹಾಡುಗಳಾಗಲೀ ಅವರ ಚಿತ್ರಗಳಲ್ಲಿ ಇರುತ್ತಿರಲಿಲ್ಲ.

  ಕನ್ನಡ ಚಿತ್ರಗಳಿಗೆ ಗುಣಮಟ್ಟವನ್ನು ತಂದುಕೊಟ್ಟ ಶ್ರೇಯಸ್ಸು ಕೂಡ ರಾಜ್‌ರದು. ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ, ಅನ್ಯಾಯದ ವಿರುದ್ಧ ಸಿಡಿದೇಳುವುದು, ಪರೋಪಕಾರ, ಸ್ತ್ರೀಗೌರವ, ತ್ಯಾಗ-ಬಲಿದಾನ ಮೊದಲಾದ ಶ್ರೇಷ್ಠ ಆದರ್ಶಗಳು ಅವರ ಚಿತ್ರದಲ್ಲಿ ಸಾಮಾನ್ಯ. ಪೋಷಕ ಪಾತ್ರಗಳನ್ನು ಹೊರತುಪಡಿಸಿ 206 ಚಿತ್ರಗಳಲ್ಲಿ ಅಭಿನಯಿಸಿದ ರಾಜ್ ತಮ್ಮ ಅಭಿಮಾನಿಗಳನ್ನೇ ದೇವರು ಎಂದು ಕರೆಯುತ್ತಿದ್ದರು.

  ರಾಜಕೀಯ, ಪ್ರಚಾರದಿಂದ ಸದಾ ದೂರವಿದ್ದು, ಜೀವನವನ್ನು ವಿವಾದಾತೀತವಾಗಿ ಇಟ್ಟುಕೊಂಡ ರಾಜ್ ವೈಯಕ್ತಿಕವಾಗಿ ಅಪಾರ ದೈವಭೀರು, ಅಧ್ಯಾತ್ಮದತ್ತ ಒಲವಿದ್ದವರು. ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳಲ್ಲಿ ಅವರು ತೋರಿದ ಅಭಿನಯ ಮತ್ತು ತನ್ಮಯತೆ ಇನ್ಯಾವ ಕಲಾವಿದನಿಂದಲೂ ಸಾಧ್ಯವಿಲ್ಲ ಎಂಬುದು ಸಾಬೀತಾಗಿಹೋಗಿದೆ. ಇರಲಿ ಅಣ್ಣಾವ್ರ ಬೆಂಗಳೂರಿ ಮೇಲ್, ಗೋವಾದಲ್ಲಿ ಸಿ.ಐ.ಡಿ. 999, ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. 999 ನಂತಹ ಶೀರ್ಷಿಕೆಗಳು ಟ್ವಿಟ್ಟರ್ ಭಾಷಾಂತರಕಾರರಿಗೆ ಸಡ್ಡುಹೊಡೆದಿವೆ!

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more