»   » ಶಿವಣ್ಣನ ಹುಟ್ಟುಹಬ್ಬದಂದು ಚೆಲುವೆ ದರ್ಶನ

ಶಿವಣ್ಣನ ಹುಟ್ಟುಹಬ್ಬದಂದು ಚೆಲುವೆ ದರ್ಶನ

Posted By:
Subscribe to Filmibeat Kannada

ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಡಬ್ಬಲ್ ಧಮಾಕಾ ನೀಡಲಿದ್ದಾರೆ. ಜುಲೈ 12ರಂದು ಅವರ ಬಹುನಿರೀಕ್ಷಿತ 'ಚೆಲುವೆಯೇ ನಿನ್ನೇ ನೋಡಲು' ಚಿತ್ರ ತೆರೆಕಾಣುತ್ತಿದೆ. ಅಂದೇ ಅವರ ಶಿವಣ್ಣನ ಹುಟ್ಟುಹಬ್ಬ ಸಹ. ಹಾಗಾಗಿ ಎರಡನ್ನೂ ಒಟ್ಟಿಗೆ ನೋಡುವ ಅವಕಾಶ ಅವರ ಅಭಿಮಾನಿಗಳ ಪಾಲಿಗೆ ಒದಗಿ ಬಂದಿದೆ.

ಬಾಲಿವುಡ್ ಚೆಲುವೆ ಸೋನಾಲ್ ಚೌಹಾಣ್ ಚಿತ್ರದ ನಾಯಕಿ. ಈ ಚಿತ್ರವನ್ನು ಒಟ್ಟು ಎಂಟು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ ನಿರ್ಮಾಪಕರಾದ ಎನ್ ಎಂ ಸುರೇಶ್. ಜಗತ್ತಿನ ಏಳು ಅದ್ಭುತಗಳ ಬಳಿ ಚಿತ್ರೀಕರಿಸಿರುವುದು ಚಿತ್ರದ ವಿಶೇಷಗಳಲ್ಲಿ ಒಂದು. ಸೌಂದರ್ಯ ಮನುಷ್ಯನನ್ನು ಹೇಗೆ ಸಂತೋಷವಾಗಿಡುತ್ತದೆ ಎಂಬುದೇ ಚಿತ್ರದ ಸಾರಾಂಶ.

ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಅದ್ಭುತವಾಗಿ ಮೂಡಿಬಂದಿವೆ. ಶಿವರಾಜ್ ಕುಮಾರ್ ಸಹ ಒಂದು ಹಾಡನ್ನು ಹಾಡಿದ್ದಾರೆ. ಸೋನು ನಿಗಂ, ಸುನಿತಾ ಗೋಪರಾಜು, ಉದಿತ್ ನಾರಾಯಣ್, ಶಮಿತಾ ಮಲ್ನಾಡ್, ಎಸ್ಪಿಬಿ ಮತ್ತು ಕುನಾಲ್ ಗಂಜಾವಾಲ ಸಹ ಹಾಡಿದ್ದಾರೆ.

ರಘುರಾಮ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಚಿತ್ರದ ಬಗೆಗಿನ ಅವರ ನಿರೀಕ್ಷೆಗಳು ಅಪಾರ. ಚಿತ್ರದ ನಿರ್ಮಾಣೇತರ ಕೆಲಸಗಳು ತುಂಬ ಸಮಯ ತೆಗೆದುಕೊಂಡವು. ಹಾಗಾಗಿ ಚಿತ್ರ ತಡವಾಗಿ ತೆರೆಗೆ ಬರುತ್ತಿದೆ ಎನ್ನುತ್ತಾರೆ ರಘುರಾಮ್. ಧ್ವನಿಸುರುಳಿಗೆ ಈಗಾಗಲೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಣ್ಣನ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಎದುರು ನೋಡುತ್ತಿರುವ ಚಿತ್ರ ಇದಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada