ನಿಮ್ಮ ಧರ್ಮ ಏನಿದ್ದರೂ ಸಿನಿಮಾಟೊಗ್ರಫಿ:ಆರ್ಎನ್ ಕೆ ಪ್ರಸಾದ್

ಸಂಘದ ಸ್ಥಾಪಕ-ಅಧ್ಯಕ್ಷರಾದ ದಿ. ಡಿ.ವಿ. ರಾಜಾರಾಂ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದಆರ್.ಎನ್.ಕೆ.ಪ್ರಸಾದ್ ಅವರು, ಚಿತ್ರರಂಗದಲ್ಲಿನ ತಮ್ಮ ಆರಂಭದ ದಿನಗಳ ಅನುಭವಗಳನ್ನು ಯುವಪೀಳಿಗೆಯೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಅಂದು ತಾವು ಅನುಭವಿಸಿದ ಕಷ್ಟನಷ್ಟಗಳನ್ನು ನೆನಪಿಸಿಕೊಳ್ಳುತ್ತಾ, "ಹಣ, ಹೆಸರು, ಕೀರ್ತಿ,ಯಶಸ್ಸು, ಇದಾವುದರೆಡೆಗೂ ಗಮನ ನೀಡದೆ, ಛಾಯಾಗ್ರಾಹಕರಾಗಿ ನಿಮ್ಮ ಕಾರ್ಯವನ್ನು ನಿಷ್ಠೆಯಿಂದ ನೆರವೇರಿಸಿ. ನಿಮ್ಮ ಧರ್ಮ ಏನಿದ್ದರೂ ಸಿನಿಮಾಟೊಗ್ರಫಿ ಮಾತ್ರ" ಎಂದು ಯುವಪೀಳಿಗೆಗೆ ಹಿತವಚನ ನೀಡಿದರು.
DEBRIE, NEWALL, MITCHELL ಮುಂತಾದ ಹಳೆಯ ತಲೆಮಾರಿನ ಕ್ಯಾಮೆರಾ ಯಂತ್ರೋಪಕರಣಗಳ ಹೆಸರುಗಳು ಸಭೆಯಲ್ಲಿ ಸಂಚರಿಸಿ, ಅದೃಶ್ಯ ದೇವದೂತರಂತೆ ಇಡೀ ವಾತಾವರಣವನ್ನು ಉತ್ತೇಜಿಸಿ, ಕನ್ನಡದ ಖ್ಯಾತಛಾಯಾಗ್ರಾಹಕರಾದ 'ಮುಂಗಾರು ಮಳೆ" ಖ್ಯಾತಿಯ ಕೃಷ್ಣ, 'ದುನಿಯಾ" ಖ್ಯಾತಿಯ ಸತ್ಯ ಹೆಗಡೆ, ಪ್ರಸಕ್ತ ಸಾಲಿನ ರಾಜ್ಯಪ್ರಶಸ್ತಿವಿಜೇತ ಛಾಯಾಗ್ರಾಹಕರಾದ ಕೆ.ಎಂ. ವಿಷ್ಣುವರ್ಧನ್ ಆದಿಯಾಗಿ ಅಲ್ಲಿ ನೆರೆದಿದ್ದ ಎಲ್ಲರನ್ನೂ ಹರಸುತ್ತಿರುವಂತೆ ಭಾಸವಾಯಿತು.
ಇಂತಹದೊಂದು ಅತ್ಯಂತ ಆತ್ಮೀಯವಾದ ಸಮಾರಂಭವನ್ನು ರೂಪಿಸಿದ ಹಿರಿಯ ತಲೆಮಾರಿನ ಛಾಯಾಗ್ರಾಹಕ ಬಿ.ಎಸ್. ಬಸವರಾಜ್ ಹಾಗೂ ವಿ. ಆರ್. ಚಂದ್ರಶೇಖರ್ ಅವರು ಆರ್.ಎನ್.ಕೆ.ಪ್ರಸಾದ್ ಅವರ ಸಾಧನೆಯ ಹಿರಿಮೆಯನ್ನು ಸಭೆಗೆ ವಿಸ್ತಾರಗೊಳಿಸಿದರು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











