For Quick Alerts
  ALLOW NOTIFICATIONS  
  For Daily Alerts

  ವಿಷ್ಣುವರ್ಧನ್ ಆಪ್ತರಕ್ಷಕ ಡಿವಿಡಿ ಲೋಕಾರ್ಪಣೆ

  By Rajendra
  |

  ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಕನ್ನಡದ ಸೂಪರ್ ಹಿಟ್ ಚಿತ್ರ 'ಆಪ್ತ ರಕ್ಷಕ' ಡಿವಿಡಿ ಹಾಗೂ ವಿಸಿಡಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ನಟ ರಮೇಶ್ ಅರವಿಂದ್ ಅವರು 'ಆಪ್ತರಕ್ಷಕ' ಡಿವಿಡಿಯನ್ನು ಗುರುವಾರ(ನ.25) ಸಂಜೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಯನ್ಸ್ ಟೈಮ್‌ಔಟ್ ಮಳಿಗೆಯಲ್ಲಿ ಬಿಡುಗಡೆ ಮಾಡಿದರು.

  'ಆಪ್ತರಕ್ಷಕ' ಡಿವಿಡಿಯನ್ನು ಜನಪ್ರಿಯ ಸಿಡಿ, ವಿಸಿಡಿ ಹಾಗೂ ಡಿವಿಡಿ ತಯಾರಕ ಕಂಪನಿ ಮೋಸರ್ ಬೇಯರ್ ಹೊರತಂದಿದೆ. ಬ್ಲೂರೇ ಡಿಸ್ಕ್ ವಿನ್ಯಾಸದಲ್ಲಿರುವ ಡಿವಿಡಿ ನೋಡುಗರಿಗೆ ಸಮೃದ್ಧ ಅನುಭವ ನೀಡಲಿದೆ. ಈ ಮೂಲಕ ಬ್ಲೂರೇ ಡಿಸ್ಕ್ ನಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಖ್ಯಾತಿಗೆ 'ಆಪ್ತರಕ್ಷಕ' ಪಾತ್ರವಾಗಿದೆ.

  ಡಿವಿಡಿ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್ ಮಾತನಾಡುತ್ತಾ, ನಾನು ಕೂಡ ನಿಮ್ಮಂತೆಯೇ ವಿಷ್ಣು ಅವರ ಅಭಿಮಾನಿ. ಅವರೊಂದಿಗೆ ನನಗೆ ಹೆಚ್ಚಿನ ಆತ್ಮೀಯತೆ ಇತ್ತು. ಪ್ರತಿ ದಿನ ದೂರವಾಣಿಯಲ್ಲಿ ಚಿತ್ರಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅವರ ಚಿತ್ರಗಳನ್ನು ನೋಡುತ್ತಿದ್ದರೆ ಅವರು ನಮ್ಮೊಂದಿಗೆ ಇಲ್ಲ ಎಂಬ ಭಾವನೆ ಬರುವುದೇ ಇಲ್ಲ ಎಂದರು.

  ನಾನು ಬ್ಯಾಂಕಾಕ್, ಯುಎಸ್‌ಗೆ ಹೋದಲ್ಲೆಲ್ಲಾ ಅಲ್ಲಿನ ವಿಷ್ಣು ಅಭಿಮಾನಿಗಳು ಆಪ್ತರಕ್ಷಕ ಡಿವಿಡಿ, ವಿಸಿಡಿ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದರು. ಅವರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. 'ಆಪ್ತರಕ್ಷಕ' ಡಿವಿಡಿ ನಿಮ್ಮ ಮುಂದೆ ಬರುತ್ತಿದೆ. ಇದೊಂದು ಸಂಗ್ರಹಯೋಗ್ಯ ಡಿವಿಡಿಯಾಗಿದ್ದು ಬೇಸರವಾದಾಗ, ಹಬ್ಬ ಹರಿದಿನಗಳಲ್ಲಿ ಮನೆಮಂದಿಯಲ್ಲಾ ಕುಳಿತು ಮತ್ತೆ ಮತ್ತೆ ನೋಡುವಂತಹದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕೊನೆಯ ಚಿತ್ರ ಆಪ್ತ ರಕ್ಷಕದ ಡಿವಿಡಿ/ವಿಸಿಡಿ ಬಿಡುಗಡೆಯ ವರ್ಣರಂಜಿತ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಮೇರು ನಟನ ಅಭಿಮಾನಿಗಳು ಭಾಗವಹಿಸಿದ್ದರು. 'ಆಪ್ತರಕ್ಷಕ' ಬಿಡುಗಡೆಯಾದ ದಿನದಿಂದಲೇ ಭರ್ಜರಿ ಆರಂಭ ಕಂಡಿತ್ತು. ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತ್ತು.

  ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಟೈಮ್‌ಔಟ್‌ನ ಮುಖ್ಯಸ್ಥ ದೀಪೇಂದರ್ ಕಪನಿ, ಆಪ್ತರಕ್ಷಕದ ಡಿವಿಡಿ ಮತ್ತು ವಿಸಿಡಿಯನ್ನು ಬಿಡುಗಡೆ ಮಾಡುವ ಅವಕಾಶ ರಿಲಯನ್ಸ್ ಟೈಮ್‌ಔಟ್‌ಗೆ ಸಿಕ್ಕಿರುವುದು ಬಹು ದೊಡ್ಡ ಗೌರವವಾಗಿದೆ. ನೆಚ್ಚಿನ ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಇದು ನಿಸ್ಸಂದೇಹವಾಗಿ ಸಂತಸ ತರಲಿದೆ ಹಾಗೂ ಪ್ರತಿಯೊಬ್ಬರಿಗೂ ಸಂಗ್ರಹಯೋಗ್ಯವಾಗಿದೆ. ವಿಶೇಷ ಚಿತ್ರಗಳನ್ನು ಗ್ರಾಹಕರಿಗೆ ಈ ರೂಪದಲ್ಲಿ ನೀಡುವ ಸಂಪ್ರದಾಯವನ್ನು ಇದರೊಂದಿಗೆ ನಾವು ಮುಂದುವರಿಸುತ್ತಿದ್ದೇವೆ ಎಂದರು.

  'ಆಪ್ತರಕ್ಷಕ' ಚಿತ್ರ ಡಾ. ವಿಷ್ಣುವರ್ಧನ್ ಅವರ ಅಭಿನಯದ 200ನೇ ಹಾಗೂ ಕೊನೆಯ ಚಿತ್ರವಾಗಿದೆ. ಸಂಧ್ಯಾ, ವಿಮಲಾ ರಾಮನ್, ಅವಿನಾಶ್, ಶ್ರೀನಿವಾಸ ಮೂರ್ತಿ, ಭಾವನಾ, ಲಕ್ಷ್ಮೀ ಗೋಪಾಲಸ್ವಾಮಿ, ಕೋಮಲ್ ಮುಂತಾದವರು ತಾರಾಗಣದಲ್ಲಿದ್ದಾರೆ. ಪಿ. ವಾಸು ನಿರ್ದೇಶನದ ಚಿತ್ರವಿದು. 2004ರಲ್ಲಿ ವಾಸು ನಿರ್ದೇಶನದ, ವಿಷ್ಣುವರ್ಧನ್ ಅಭಿನಯದ ಆಪ್ತ ಮಿತ್ರ ಕೂಡ ಅಭೂತಪೂರ್ವ ಯಶಸ್ಸು ಗಳಿಸಿತ್ತು.

  2010ರ ಫೆಬ್ರವರಿ 19ರಂದು ಬಿಡುಗಡೆಯಾದ ಆಪ್ತರಕ್ಷಕ ಸಕಾರಾತ್ಮಕ ವಿಮರ್ಶೆ ಪಡೆದಿತ್ತು. ಇದರಲ್ಲಿ ವಿಷ್ಣುವರ್ಧನ್ ಅಭಿನಯ ಸಾರ್ವತ್ರಿಕಚಾಗಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಗುರುಕಿರಣ್ ಅವರ ಸಂಗೀತ ಯಶಸ್ವಿಯಾಗಿದೆ. ವಿಮಲಾ ರಾಮನ್ ನೃತ್ಯ ಹಾಗೂ ನಾಗವಲ್ಲಿಯಾಗಿ ಅಭಿನಯ ಮನ್ನಣೆ ಗಳಿಸಿದೆ.

  ಡಿವಿಡಿ ದರ ರು.125 ಮತ್ತು ವಿಸಿಡಿ ದರ ರು.49 ಆಗಿದ್ದು, ಎಲ್ಲ ರಿಲಯನ್ಸ್ ಟೈಮ್‌ಔಟ್ ಸ್ಟೋರ್‌ಗಳಲ್ಲಿ ಲಭ್ಯ. ಈ ಸಮಾರಂಭದಲ್ಲಿ ಆಪ್ತರಕ್ಷಕ ನಿರ್ಮಾಪಕ ಕೃಷ್ಣ ಕುಮಾರ್ ಸಹ ಉಪಸ್ಥಿತರಿದ್ದರು.

  English summary
  Moser Baer launched the DVD and VCD of super hit Kannada movie "Aptharakshaka" in blu ray disc format. Renowned celebrity Ramesh Arvind (actor, director & producer) and Krishnakumar (Producer of "Aptharakshaka") were present to unveil ‘Aaptharakshaka DVD/VCD at the Reliance TimeOut store.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X