»   » ಕಾಮಿಡಿ ಗಣೇಶನ ರೇಟು ಕಾಮಿಡಿ

ಕಾಮಿಡಿ ಗಣೇಶನ ರೇಟು ಕಾಮಿಡಿ

Subscribe to Filmibeat Kannada
Ganesh price tag two crores-comedy
ಹೆಣ್ಣಿನ ವಯಸ್ಸು, ಗಂಡಿನ ಸಂಬಳ ಕೇಳಬಾರದೆಂಬ ಗಾದೆಯಿದೆ. ಎರಡರಲ್ಲಿ ಯಾವುದನ್ನು ಕೇಳಿದರೂ ಸುಳ್ಳು ಕಟ್ಟಿಟ್ಟ ಬುತ್ತಿ. ಆದರೆ, ಗಣೇಶ್ ತೀರ ಅಷ್ಟೊಂದು ಸುಳ್ಳು ಹೇಳೋದಾ? ಅವರ ಮನೆಮಕ್ಕಳಂತಿರುವ ಕೆಲವು ಇಂಗ್ಲಿಷ್ ಪತ್ರಕರ್ತರು ಇತ್ತೀಚೆಗೆ ಅವರ ಸಂಭಾವನೆ ಕೇಳಿದ್ದೇ ತಡ, ಗಣೇಶ್ ಎರಡು ಕೋಟಿ ಎಂದರಂತೆ. ಪಾಪ, ಕನ್ನಡದ ಮಾರುಕಟ್ಟೆ ಗೊತ್ತಿರದ ಅವರು, ನಮ್ಮ ಗಣೇಶು ಸಂಭಾವ್ನೆ ಎರಡು ಕೋಟಿ ಅಂತ ಬೀಗುತ್ತಾ ಬರೆದಿದ್ದಾರೆ.

ಇದು ದಿಟವಾ ? ಅಂಡು ಬಡಿದುಕೊಂಡು ನಗುತ್ತಿದೆ ಗಾಂಧೀನಗರ. ಎರಡು ಕೋಟಿ ಆಕಡೆ ಇರಲಿ, ಅದರ ಅರ್ಧದಷ್ಟೂ ಕೊಡುವುದಕ್ಕೆ ಹೆದರುತ್ತಿದ್ದಾರೆ ನಿರ್ಮಾಪಕರು. ಏಕೆಂದರೆ, ಈ ವರ್ಷ ಬಿಡುಗಡೆ ಆಗಿರುವ ಗಣೇಶನ ನಾಲಕ್ಕು ಚಿತ್ರಗಳ ಪೈಕಿ ಗಾಳಿಪಟ ಒಂದೇ ಗೆದ್ದಿದ್ದು. ಅರಮನೆ ಸುಮಾರಾಗಿ ಓಡಿದರೆ, ಬೊಂಬಾಟ್ ಹಾಗೂ ಸಂಗಮ ಚಿತ್ರ ಅಡ್ಡಡ್ಡ ಉದ್ದುದ್ದ ಮಲಗಿವೆ. ಪ್ರತಿಯೊಂದಕ್ಕೂ ಅಷ್ಟೊಂದು ಲೆಕ್ಕಾಚಾರ ಹಾಕುವ ಗಾಂಧೀನಗರದವರು, ಅಷ್ಟೊಂದು ಕೊಡಲು ಸಾಧ್ಯವಾ? ಎಂದು ಪ್ರಶ್ನಿಸುತ್ತಾರೆ ಗಣೇಶ್ ಚಿತ್ರದ ಒಬ್ಬ ನಿರ್ಮಾಪಕರು.

ಗಣೇಶ್ ರೇಟು ಅಷ್ಟಿದಿಯೋ, ಇಲ್ಲವೋ ಸುದ್ದಿಯಂತೂ ಎಲ್ಲಿಂದಲೋ ಹುಟ್ಟಿಕೊಂಡು ಗಾಂಧೀನಗರವೆಲ್ಲಾ ಸುತ್ತುತ್ತಿದೆ. ಅದನ್ನೇ ದೊಡ್ಡ ಸುದ್ದಿಯೆಂದು ತಿಳಿದು ಪತ್ರಿಕೆಯೊಂದು , ಸುದ್ದಿ ಪ್ರಕಟಿಸುವುದರ ಜತೆಗೆ, ಗಣೇಶ್ ಅಷ್ಟು ಸಂಭಾವನೆ ಹೇರುವುದು ಸರಿಯೋ, ತಪ್ಪೋ ಎಂದು ಡಿಬೇಟು ಪ್ರಾರಂಭಿಸಿದೆ. ಕೆಲಸವಿಲ್ಲದ ಬಡಗಿ ಏನೋ ಮಾಡಿದ್ನಂತೆ ಎನ್ನುವಂತೆ ಆದಿತ್ಯ ಮುಂತಾದ ನಾಯಕರೆಲ್ಲ ಸರಿ, ತಪ್ಪುಗಳ ನಿಷ್ಕರ್ಷೆಯಲ್ಲಿದ್ದಾರೆ. ಗಣೇಶ್ ಮಾತ್ರ ತಮ್ಮ ಪಾಡಿಗೆ ಕೆಲಸ ಮುಂದುವರೆಸಿದ್ದಾರೆ.

( ಸ್ನೇಹಸೇತು : ಹಾಯ್ ಬೆಂಗಳೂರು)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada