»   »  ಪೈರಸಿ ತಡೆಗಟ್ಟಿ ಇಲ್ಲ ಮುಷ್ಕರ ಎದುರಿಸಿ: ಕೆ.ಮಂಜು

ಪೈರಸಿ ತಡೆಗಟ್ಟಿ ಇಲ್ಲ ಮುಷ್ಕರ ಎದುರಿಸಿ: ಕೆ.ಮಂಜು

Subscribe to Filmibeat Kannada
K Manju
ರಾಜ್ಯದಲ್ಲಿ ನಕಲಿ ಸಿಡಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮೈಸೂರು ಮತ್ತು ಬೆಂಗಳೂರಿನ ಫುಟ್ ಪಾತ್ ಗಳಲ್ಲಿ ನಿರಾತಂಕವಾಗಿ ಮಾರುತ್ತಿರುವ ನಕಲಿ ಸಿಡಿಗಳೇ ಇದಕ್ಕೆ ಸಾಕ್ಷಿ.ನಕಲಿ ಸಿಡಿಗಳನ್ನು ನಿಯಂತ್ರಿಸಲಾಗದಷ್ಟು ಸಮಸ್ಯೆ ಕೈಮೀರಿದೆ. ನಕಲಿ ಸಿಡಿಗಳ ಮೂಲವನ್ನು ಪತ್ತೆ ಹಚ್ಚಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಎಂದು ನಿರ್ಮಾಪಕ ಕೊಬ್ಬರಿ ಮಂಜು ಅಸಹನೆ ವ್ಯಕ್ತಪಡಿಸಿದ್ದಾರೆ.

ಅವರು ಇತ್ತೀಚೆಗೆ ನಕಲಿ ಸಿಡಿ ಜಾಲವನ್ನು ಬಯಲಿಗೆಳೆಯಲು ಮೈಸೂರಿಗೆ ತೆರಳಿದ್ದರು. ಅದು ಹೇಗೋ ಇವರು ಬರುತ್ತಿರುವ ಸುಳಿವು ಸಿಕ್ಕಿ ಸಿಡಿ ಅಂಗಡಿಗಳಿಗೆ ಬೀಗ ಜಡಿಯಲಾಗಿತ್ತು. ''ಬೀಗ ಹಾಕುವುದಕ್ಕೂ ಮುನ್ನವೇ ನಕಲಿ ಸಿಡಿ ಮಾರಾಟ ಮಾಡುತ್ತಿದ್ದ ಕೆಲವು ಅಂಗಡಿಗೆ ದಾಳಿ ಮಾಡಿದೆವು. ಆಗ ಅಂಗಡಿ ಮಾಲೀಕರು ಬಾಯ್ಬಿಟ್ಟ ಸತ್ಯ ಏನೆಂದರೆ, ಪೊಲೀಸರಿಗೆ ರು.15 ರಿಂದ 30 ಸಾವಿರ ರು.ಗಳ ಮಾಮೂಲಿ ಸಂದಾಯವಾಗುತ್ತಿರುವುದಾಗಿ ಅವರು ತಿಳಿಸಿದರು. ಬೇಲಿಯೇ ಎದ್ದು ಹೊಲ ಮೇಯ್ದರೆ? ಮಾಡುವುದಾದರೂ ಏನು'' ಎಂದು ಕೆ.ಮಂಜು ಪ್ರಶ್ನಿಸುತ್ತಾರೆ.

ಬೆಂಗಳೂರಿನ ಅಂಗಡಿಗಳ ಮೇಲೆ ನಿರ್ಮಾಪಕರು ದಾಳಿ ಮಾಡಿದಾಗ ಅಪಾರ ಪ್ರಮಾಣದ ನಕಲಿ ಸಿಡಿಗಳು ಪತ್ತೆಯಾದವು. ಈ ದಂಧೆಯನ್ನು ಪತ್ತೆ ಹಚ್ಚಿದ್ದಕ್ಕೆ ಪೊಲೀಸರು ನಮಗೇ ಗೂಸಾ ಕೊಟ್ಟರು. ನಕಲಿ ಸಿಡಿ ಹಾವಳಿಯನ್ನು ತಡೆಗಟ್ಟಬೇಕಾದರೆ ಆಂಧ್ರಪ್ರದೇಶದಲ್ಲಿರುವಂತೆ ನಮ್ಮಲ್ಲೂ ಗೂಂಡಾ ವಿರೋಧಿ ಕಾಯಿದೆ ಜಾರಿಗೆ ತರಬೇಕು ಎಂದು ಸರ್ಕಾರದ ಬಳಿ ವಿನಂತಿಸಿಕೊಂಡಿದ್ದೇವೆ.ಕನ್ನಡ ಚಿತ್ರರಂತ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅಥವಾ ರಾಜ್ಯ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿಯಾದರೂ(ಮಾರ್ಚ್) ಕಾಯಿದೆ ಜಾರಿಗೆ ತರುವಂತೆ ಒತ್ತಾಯ ಹೇರುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ಜಾಣ ಕಿವುಡುತನ ಪ್ರದರ್ಶಿಸುತ್ತಿದೆ.

ಒಂದು ವೇಳೆ ಗೂಂಡಾ ವಿರೋಧಿ ಕಾಯಿದೆಯನ್ನು ಜಾರಿಗೆ ತರದಿದ್ದ ಪಕ್ಷದಲ್ಲಿಇಡೀ ಚಿತ್ರೋದ್ಯಮ ಮುಷ್ಕರ ಹೂಡಲಿದೆ. ಚಿತ್ರ ಬಿಡುಗಡೆಯಾದ ಒಂದೆರಡು ದಿನಗಳಲ್ಲೇ ನಕಲಿ ಸಿಡಿ, ಡಿವಿಡಿಗಳು ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟವಾಗುತ್ತಿದೆ. ಇದನ್ನು ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎಂದು ಮಂಜು ತಮ್ಮ ನೋವನ್ನು ತೋಡಿಕೊಂಡರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ನಕಲಿ ಸಿಡಿ ಅಂಗಡಿ ಮೇಲೆ ನಿರ್ಮಾಪಕರ ದಾಳಿ
ಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada