»   » ಚಿತ್ರ ನಿರ್ದೇಶನಕ್ಕೆ ಗಿರಿಕನ್ಯೆ ಜಯಮಾಲಾ

ಚಿತ್ರ ನಿರ್ದೇಶನಕ್ಕೆ ಗಿರಿಕನ್ಯೆ ಜಯಮಾಲಾ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷೆ ಗಿರಿಕನ್ಯೆ ಜಯಮಾಲಾ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಅವರು ಚೊಚ್ಚಲ ನಿರ್ದೇಶನದಲ್ಲಿ ಕನ್ನಡ ಚಿತ್ರವೊಂದು ಮೂಡಿಬರಲಿದೆ. ಇತ್ತೀಚೆಗಷ್ಟೆ ಜಯಮಾಲಾ ಮಗಳು ಸೌಂದರ್ಯ ತೆಲುಗು ಚಿತ್ರರಂಗದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದಾರೆ.

ಮಗಳನ್ನು ದಡ ಸೇರಿಸಿದ ಸಂತಸದಲ್ಲಿರುವ ಜಯಮಾಲಾ ಇದೀಗ ಆಕ್ಷನ್, ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ಐತಿಹಾಸಿಕ ಚಿತ್ರದ ಮೂಲಕ 'ರಾಣಿ ಅಬ್ಬಕ್ಕ'ಳನ್ನು ತೆರೆಗೆ ತರುವ ಆಲೋಚನೆ ಜಯಮಾಲಾ ಅವರದು. ಇಷ್ಟು ದಿನ ತಮ್ಮಲ್ಲೇ ಈ ಭಾರವಾದ ವಿಚಾರವನ್ನು ಇಟ್ಟುಕೊಂಡಿದ್ದ ಜಯಮಾಲಾ ವಿಷಯವನ್ನು ಹೊರಹಾಕುವ ಮೂಲಕ ಹಗುರಾಗಿದ್ದಾರೆ.

ಕನ್ನಡ ಚಿತ್ರರಂಗ 75 ವಸಂತಗಳನ್ನು ಪೂರೈಸಿದ ನೆನಪಿನಾರ್ಥ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮ ಖುಷಿ ಕೊಟ್ಟಿದೆ. ಅಮೃತ ಮಹೋತ್ಸವಕ್ಕೆ ತಾವು ವೈಯಕ್ತಿಕವಾಗಿ ರು.25 ಲಕ್ಷ ಕೊಟ್ಟಿದ್ದಾಗಿ ಜಯಮಾಲಾ ತಿಳಿಸಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರದಿಂದ ಉದಯ ವಾಹಿನಿಗೆ ರು.5.5 ಕೋಟಿ ನಷ್ಟವಾಗಿತ್ತು ಎಂಬ ಸತ್ಯವನ್ನು ಹೊರಹಾಕಿದ್ದಾರೆ.

ತಾವು ಮಂಡಳಿ ಅಧ್ಯಕ್ಷೆಯಾಗಿದ್ದಷ್ಟು ದಿನವೂ ಕನ್ನಡ ಚಿತ್ರರಂಗದ ಉದ್ಧಾರಕ್ಕಾಗಿ ಶ್ರಮಿಸಿದ್ದೇವೆ. ಅಮೃತ ಮಹೋತ್ಸವವನ್ನು ಮಹಿಳೆಯೊಬ್ಬಳು ಸಮರ್ಥವಾಗಿ ನಿಭಾಯಿಸುತ್ತಾರಾ? ಎಂಬ ಅನುಮಾನ ಹಲವರನ್ನು ಕಾಡಿತ್ತು. ತಮ್ಮ ಕಾರ್ಯವೈಖರಿಯನ್ನು ಕಂಡ ಬಳಿಕ ಹಲವಾರು ಮಂದಿ ಮುಂದೆಬಂದರು ಎಂದು ಜಯಮಾಲಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ದೇಶಕಿ ಸಿಕ್ಕಂತಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada