»   » ಚಿತ್ರಾಸಕ್ತರಿಗೊಂದು ವಿನೂತನ ತರಬೇತಿ ಸಂಸ್ಥೆ

ಚಿತ್ರಾಸಕ್ತರಿಗೊಂದು ವಿನೂತನ ತರಬೇತಿ ಸಂಸ್ಥೆ

Posted By:
Subscribe to Filmibeat Kannada

ಚಿತ್ರರಂಗ ಒಂದು ಪ್ರಬಲ ಮಾಧ್ಯಮ. ಈ ರಂಗದಲ್ಲಿ ಕೆಲಸ ಮಾಡಬೇಕು ಎಂದು ಬಹಳಷ್ಟು ಜನರಿಗೆ ಆಸೆಯಿರುತ್ತದೆ. ಕಲಾವಿದನಾಗಿ, ತಂತ್ರಜ್ಞನಾಗಿ ಬೆಳೆಯಬೇಕು ಎಂದು ಕೊಂಡಾಗ ಹೇಗೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಸೂಕ್ತ ತರಬೇತಿ ಇಲ್ಲದೆ ಯಾವುದೇ ರಂಗದಲ್ಲಿ ಬೆಳೆಯಲು ಸಾಧ್ಯವಿಲ್ಲ. ಅಂಥ ಚಿತ್ರಾಸಕ್ತರಿಗಾಗಿಯೇ ಬೆಂಗಳೂರು ನಗರದ ವಿಜಯನಗರದಲ್ಲಿ 'ಸ್ಯಾಂಡಲ್‌ವುಡ್ ಫಿಲಂ ಇನ್ಸ್‌ಟಿಟ್ಯೂಟ್' ಎಂಬ ಸಂಸ್ಥೆ ಆರಂಭವಾಗಿದೆ.

ಪ್ರಪುಲ್ಲಾಮುಖಿ ಶ್ರೀನಿವಾಸ್ ಹಾಗೂ ಪ್ರದೀಪ್ ಅವರು ಆರಂಭಿಸಿರುವ ಈ ತರಬೇತಿ ಶಾಲೆಯನ್ನು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಉದ್ಘಾಟಿಸಿದರು. ನಟ ಎಸ್.ಶಿವರಾಂ ಈ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಮಾತನಾಡಿದ ಶಿವರಾಂ ಚಲನಚಿತ್ರರಂಗದಲ್ಲಿ ಕಲಾವಿದನಾಗಿ, ತಂತ್ರಜ್ಞನಾಗಿ ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ಸೇವೆ ಮಾಡಿದ ಫಲವಾಗಿ ನನಗೆ ಈ ಅವಕಾಶ ಸಿಕ್ಕಿದೆ ಎಂದಿದ್ದಾರೆ.

ಇಂಥ ಶಾಲೆಯೊಂದನ್ನು ಆರಂಭಿಸಬೇಕೆಂಬ ಆಸೆ ನನಗೆ ಮೊದಲಿನಿಂದ ಇದೆ. ಸದ್ಯ ಈ ಶಾಲೆಯಲ್ಲಿ ದುಡಿಯುವ ಅವಕಾಶ ಸಿಕ್ಕಿದೆ. ಅನನುಭವಿಗಳಿಂದ ಚಿತ್ರರಂಗ ಅವನತಿಯತ್ತ ಸಾಗಿದೆ. ಚಿತ್ರರಂಗಕ್ಕೆ ಬರುವ ಮೊದಲು ಇಲ್ಲಿ ತರಭೇತಿ ಪಡೆದುಕೊಂಡು ಬಂದರೆ ಉತ್ತಮ ಚಿತ್ರಗಳನ್ನು ಮತ್ತೆ ಕಾಣಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಎಸ್.ಶಿವರಾಂ, ನಿರ್ದೇಶಕರಾದ ಜೋಸೈಮನ್ ಹಾಗೂ ಕೂಡ್ಲು ರಾಮಕೃಷ್ಣ, ಪ್ರಪುಲ್ಲಮುಖಿಶ್ರೀನಿವಾಸ್ ಮತ್ತು ನಟ ಚಂದ್ರಶೇಖರ್ ಉಪಸ್ಥಿತರಿದ್ದರು. ಈ ಸಂಸ್ಥೆಯಲ್ಲಿ ನಿರ್ದೇಶನ, ಅಭಿನಯ, ಛಾಯಾಗ್ರಹಣ, ಸಂಕಲನ, ಚಿತ್ರಸಾಹಿತ್ಯ, ಸಾಹಸ, ಸಂಗೀತ ಮೊದಲಾದ ವಿಷಯಗಳ ಬಗ್ಗೆ ಅನುಭವಿ ಉಪನ್ಯಾಸಕರಿಂದ ತರಬೇತಿ ನೀಡಲಾಗುವುದು.

ಪ್ರತಿ ಕೋರ್ಸ್‌ನಲ್ಲಿ 20ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಅವರು ಪರಿಣಿತರಾಗುವುದಕ್ಕೆ ಬೇಕಾದ ಎಲ್ಲಾ ಸಹಾಯಗಳನ್ನು ಮಾಡಲಾಗುವುದು. ಬಡವರಿಗೆ, ಮಹಿಳೆಯರಿಗೆ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ ಎಂದು ವ್ಯವಸ್ಥಾಪಕಿ ಪ್ರಪುಲ್ಲಮುಖಿಶ್ರೀನಿವಾಸ್ ತಿಳಿಸಿದ್ದಾರೆ.

ಆರ್.ಟಿ.ರಮ, ಹೆಚ್.ಆರ್.ಭಾರ್ಗವ, ಪಿ.ಹೆಚ್.ವಿಶ್ವನಾಥ್, ಗೀತಪ್ರಿಯ, ವಿ.ಮನೋಹರ್, ನಾಗತಿಹಳ್ಳಿ ಚಂದ್ರಶೇಖರ್, ಸುನೀಲ್‌ಕುಮಾರ್‌ದೇಸಾಯಿ, ಸುಚೀಂದ್ರಪ್ರಸಾದ್, ದೊಡ್ಡರಂಗೇಗೌಡ ಹಾಗೂ ಭಾರ್ಗವಿನಾರಾಯಣ್ ಅವರಂಥ ಅನುಭವಿಗಳಿಂದ ತರಬೇತುದಾರರಿಗೆ ಉಪನ್ಯಾಸ ಕೊಡಿಸಲಾಗುವುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada