»   » ಮೂಡಲ ಮನೆ ಖ್ಯಾತಿಯ ವೈಶಾಲಿ ಕಾಸರವಳ್ಳಿ ಇನ್ನಿಲ್ಲ

ಮೂಡಲ ಮನೆ ಖ್ಯಾತಿಯ ವೈಶಾಲಿ ಕಾಸರವಳ್ಳಿ ಇನ್ನಿಲ್ಲ

Posted By:
Subscribe to Filmibeat Kannada
Vaishali Kasaravalli is no more
ಕನ್ನಡ ಚಿತ್ರರಂಗದನಟಿ, ನಿರ್ದೇಶಕಿ, ರಂಗಭೂಮಿ ಕಲಾವಿದೆ ಹಾಗೂ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪತ್ನಿ ವೈಶಾಲಿ ಕಾಸರವಳ್ಳಿ(58) ಅವರು ಸೋಮವಾರ(ಸೆ.27) ಸಂಜೆ ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಜಯನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಾಲ್ಕು ವರ್ಷಗಳ ಹಿಂದೆ ಅವರಕಿಡ್ನಿ ವೈಫಲ್ಯವಾಗಿತ್ತು. ಒಂದು ವಾರದ ಹಿಂದಷ್ಟೆ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಸಂಜೆ ಸುಮಾರು 5.30ರ ಸಮಯದಲ್ಲಿ ವೈಶಾಲಿ ಅವರು ಕೊನೆಯುಸಿರೆಳೆದಿದ್ದಾರೆ. ಇಬ್ಬರು ಮಕ್ಕಳಾದ ಅನನ್ಯ ಕಾಸರವಳ್ಳಿ, ಅಪೂರ್ವ ಕಾಸರವಳ್ಳಿ ಹಾಗೂ ಪತಿ ಗಿರೀಶ್ ಕಾಸರವಳ್ಳಿ ಅವರನ್ನು ಅಗಲಿದ್ದಾರೆ.

ವೈಶಾಲಿ ಕಾಸರವಳ್ಳಿ ಅವರು ಹುಟ್ಟಿದ್ದು ಗುಲ್ಬರ್ಗದಲ್ಲಿ ಏಪ್ರಿಲ್ 12,1952ರಲ್ಲಿ. ಗುಬ್ಬಿ ಕಂಪನಿಯಲ್ಲಿ ನಟಿಯಾಗಿ ರಂಗಪ್ರವೇಶ ಮಾಡಿದ ವೈಶಾಲಿ ಅವರು ಬಳಿಕ ರಂಗಭೂಮಿ, ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದರು. ವೈಶಾಲಿ ಅವರು ನಟಿಸಿದ ಮೊದಲ ಚಿತ್ರ 'ಯಾವ ಜನ್ಮದ ಮೈತ್ರಿ'. ಅವರ ಕಿರುತೆರೆ ಧಾರಾವಾಹಿಗಳಾದ 'ಮೂಡಲ ಮನೆ', 'ಮುತ್ತಿನ ತೋರಣ', 'ಮೌನರಾಗ' ಬಹಳಷ್ಟು ಜನಮನ್ನಣೆಗೆ ಪಾತ್ರವಾಗಿದ್ದವು.

ಗಿರೀಶ್ ಕಾಸರವಳ್ಳಿ ನಿರ್ದೇಶನದ 'ತಾಯಿ ಸಾಹೇಬ' ಚಿತ್ರದಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗಳಿಗೂ ವೈಶಾಲಿ ಅವರು ಭಾಜನರಾಗಿದ್ದರು. ಪ್ರೊಫೆಸರ್ ಹುಚ್ಚುರಾಯ, ಮಾನಸ ಸರೋವರ, ಮಮತೆಯ ಮಡಿಲು, ಭೂತಯ್ಯನ ಮಗ ಅಯ್ಯು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದೆಯಾದ ವೈಶಾಲಿ ಅವರು ಸಿನಿಮಾವೊಂದನ್ನು ನಿರ್ದೇಶಿಸಬೇಕು ಎಂದು ಕನಸು ಕಂಡಿದ್ದರು. ಆದರೆ ಚಿತ್ರವನ್ನು ನಿರ್ದೇಶಿಸಬೇಕು ಎಂಬ ಅವರ ಆಸೆ ಕಡೆಗೂ ನೆರವೇರದ್ದು ವಿಧಿ ವೈಚಿತ್ರ್ಯ. ಹಿಂದಿ ಮತ್ತು ಮರಾಠಿಯ ಕೆಲವು ನಾಟಕಗಳನ್ನು ವೈಶಾಲಿ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ನಟಿ ತಾರಾ, ಮುಖ್ಯಮಂತ್ರಿ ಚಂದ್ರು, ದ್ವಾರಕೀಶ್, ಉಮಾಶ್ರೀ, ದೊಡ್ಡಣ್ಣ ಸೇರಿದಂತೆ ಕನ್ನಡ ಚಿತ್ರರಂಗ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada