»   » ನೆನಪುಗಳ ಮೆರವಣಿಗೆಯಲ್ಲಿ ಉಳಿದದ್ದು ಬರೀ ಕಹಿ

ನೆನಪುಗಳ ಮೆರವಣಿಗೆಯಲ್ಲಿ ಉಳಿದದ್ದು ಬರೀ ಕಹಿ

Posted By: * ಪ್ರಸಾದ ನಾಯಿಕ
Subscribe to Filmibeat Kannada

ಕನ್ನಡ ಚಿತ್ರಗಳ ನಾಡಿಬಡಿತ ಅರಿಯಲು ನಿರ್ದೇಶಕರಿಗೂ ಸಾಧ್ಯವಾಗಿಲ್ಲ, ಪ್ರೇಕ್ಷಕರಿಗೂ ಸಾಧ್ಯವಾಗಿಲ್ಲ. ಚೆನ್ನಾಗಿದೆ ಎಂದು ಬೀಗುತ್ತಿದ್ದ ಚಿತ್ರ ವಾರದಲ್ಲಿ ಮಕಾಡೆ ಮಲಗಿರುತ್ತದೆ. ಇದರ ಆಯಸ್ಸು ಎರಡೇ ವಾರ ಎಂಬ ಭವಿಷ್ಯವಾಣಿ ಸುಳ್ಳಾಗಿ ಮತ್ತೊಂದು ಚಿತ್ರ ಹಣದ ಕೊಳ್ಳೆ ಹೊಡೆದಿರುತ್ತದೆ.

; ;

'ರಾಷ್ಟ್ರ ಪ್ರಶಸ್ತಿ ವಿಜೇತ' ನಿರ್ದೇಶಕರೊಬ್ಬರು ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಬಿಡುಗಡೆ ಮಾಡಿದ ದಿನ ಸಾಯಂಕಾಲ ಪತ್ರಕರ್ತರೊಂದಿಗೆ ಸಂತಸವನ್ನು ಹಂಚಿಕೊಳ್ಳುವ ಹಂಬಲದಿಂದ ಕೂಟವನ್ನು ಏರ್ಪಡಿಸಿದ್ದರು.

ಅತಿ ಉತ್ಸಾಹದಿಂದಲೇ ತಮ್ಮ ಮಾತುಗಳನ್ನು ಆರಂಭಿಸಿದ ಅವರು ಚಿತ್ರನೋಡಿ ಇನ್ನೂ ಸುಧಾರಿಸಿಕೊಳ್ಳುತ್ತಿದ್ದ ಪತ್ರಕರ್ತರಿಗೆ ತಮ್ಮ ಚಿತ್ರ ಹೇಗಿದೆಯೆಂದು ವಸ್ತುನಿಷ್ಠವಾಗಿ ತಿಳಿಸುವಂತೆ ದುಂಬಾಲು ಬಿದ್ದರು. ಸದ್ಯಕ್ಕೆ ಚಿತ್ರದ ಗುಣಾವಗುಣಗಳ ಬಗ್ಗೆ ಚರ್ಚೆ ಬೇಡ ಅಂತ ಹಿರಿಯ ಪತ್ರಕರ್ತರೊಬ್ಬರು ಆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಿಗೆ ವಿವೇಕ ಹೇಳಿದರೂ ಕೇಳದೆ ಎರಡೇ ಮಾತುಗಳಲ್ಲಿ ಹೇಳಿ ಪರವಾಗಿಲ್ಲ ಎಂದು ಗಂಟು ಬಿದ್ದರು. ಅವರಿಗೋ ತಮ್ಮ ಚಿತ್ರದ ಗುಣಗಾನವನ್ನು ಕೇಳುವ ಹಂಬಲ, ಭಾನುವಾರದವರೆಗೆ ಕಾಯುವ ತಾಳ್ಮೆಯಿಲ್ಲ, ಪತ್ರಕರ್ತರಿಗೋ ತಕ್ಷಣವೇ ಬಾಯಿಬಿಡಲಾಗದಂಥಹ ಸಂದಿಗ್ಧ ಪರಿಸ್ಥಿತಿ.

ಕೊನೆಗೂ ಅವರ ಒತ್ತಾಯಕ್ಕೆ ಮಣಿದು ಹಿರಿಯ ಪತ್ರಕರ್ತರೊಬ್ಬರು 'ವಸ್ತುನಿಷ್ಠ'ವಾಗೇ ಚಿತ್ರದ ಗುಣಾವಗುಣಗಳ ಚರ್ಚೆ ಪ್ರಾರಂಭಿಸಿದರು. ಅವರ ಮಾತು ಕೇಳುತ್ತಿದ್ದಂತೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರ ಮೊಗದಲ್ಲಿ ಹವಾನಿಯಂತ್ರಿತ ಕೋಣೆಯಲ್ಲೂ ಬೆವರುಗಳ ಸಾಲು. ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂಥ ಸ್ಥಿತಿ. ಆ ಚಿತ್ರ ಹಾಗಿತ್ತು. ಚಿತ್ರ ಹೇಗಿದೆಯೋ ಹಾಗೇ ನೇರವಾಗಿ ಹೇಳಿದರು ಆ ನೇರಮಾತಿನ ಹಿರಿಯ ಪತ್ರಕರ್ತರು.

ಮುಖ ಬಿಳಿಚಿಕೊಂಡಂತಾಗಿದ್ದ ಆ ನಿರ್ದೇಶಕ ಈಗ ಮತ್ತೊಂದು ಬಗೆಯಲ್ಲಿ ಒತ್ತಾಯಿಸಲು ಪ್ರಾರಂಭಿಸಿದರು. ಚಿತ್ರದ ಪೋಸ್ಟ್‌ಮಾರ್ಟಮ್ ಎಲ್ಲಾ ಈಗಲೇ ಮಾಡುವುದು ಬೇಡ ಎರಡೇ ಎರಡು ಒಳ್ಳೆಯ ಮಾತುಗಳನ್ನು ಹೇಳಿ. ಕೋಟ್ಯಾಂತರ ರೂಪಾಯಿ ಹಾಕಿ ಚಿತ್ರ ತೆಗೆದಿದ್ದೇವೆ. ಎರಡೇ ಎರಡು ಒಳ್ಳೆಯ ಮಾತು ಹೇಳಿದರೆ ನಮ್ಮಂಥ ಸಜ್ಜನ ನಿರ್ಮಾಪಕ, ನಿರ್ದೇಶಕರು ಬದುಕಿಕೊಳ್ಳುತ್ತೇವೆ. ಮುಂಗಾರು ಮಳೆಯಂತೆ ಹಣ ಸುರಿಯುವುದು ಬೇಡ ಜಿಟಿಜಿಟಿ ಮಳೆಯಾದರೂ ಸಾಕು ಎರಡು ಒಳ್ಳೇ ಮಾತುಗಳು ಹೇಳಿ ಎಂದು ದುಂಬಾಲು ಬಿದ್ದರು.

ಇದೊಳ್ಳೆ ಪೇಚಿಗೆ ಸಿಕ್ಕಿಕೊಂಡಂತಾಯಿತಲ್ಲ ಎಂದು ಪತ್ರಕರ್ತರು ಕೈಕೈಹಿಸುಕಿಕೊಳ್ಳಲು ಪ್ರಾರಂಭಿಸಿದರು. ಇದ್ದದ್ದು ಇದ್ದಂತೆ ಹೇಳುವ ಹಾಗಿಲ್ಲ ಎರಡು ಒಳ್ಳೆಯ ಮಾತನ್ನೂ ಹೇಳುವ ಹಾಗಿಲ್ಲ! ಹೌದು. ಇದು ನೆನಪುಗಳ ಸಾಲಿನಲ್ಲಿ ಬಂದ ಎರಡನೇ ಚಿತ್ರ 'ನಿನ್ನದೇ ನೆನಪು' ಚಿತ್ರದ ನಿರ್ದೇಶಕರ ಪ್ರವರ. ಅವರೇ 'ರಾಷ್ಟ್ರಪ್ರಶಸ್ತಿ ವಿಜೇತ' ನಿರ್ದೇಶಕ ಮದನ್ ಪಟೇಲ್.

ಮುಂಗಾರು ಮಳೆಯಿಂದ ಪ್ರೇರಿತವಾಗಿ ಮಲೆನಾಡನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದು ನೆನಪುಗಳ ಭತ್ತ ನಾಟಿಮಾಡಲು ಯತ್ನಿಸಿದ 'ನಿನ್ನದೇ ನೆನಪು' ಚಿತ್ರ ಎರಡೇ ವಾರಗಳಲ್ಲಿ ಚಿತ್ರಮಂದಿರದಿಂದ ಎತ್ತಂಗಡಿಯಾಯಿತು. ನಿರ್ಮಾಪಕರಿಗೆ ಉಳಿಸಿದ್ದು ಬರೀ ಕಹಿ ನೆನಪುಗಳು ಮಾತ್ರ. ಆ ಚಿತ್ರಕ್ಕೆ ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲು ಅವಕಾಶವಿದ್ದಿದ್ದು ಹದಿನೈದು ದಿನಗಳು ಮಾತ್ರ. ಅದಿಲ್ಲದಿದ್ದರೂ ಆ ಚಿತ್ರ ಹದಿನೈದು ದಿನಗಳಿಂತ ಹೆಚ್ಚು ಓಡುತ್ತಿರಲಿಲ್ಲ ಎನ್ನುವುದು ಬೇರೆ ಮಾತು.

ಈ ಚಿತ್ರದ್ದು ಒಂದು ಕಥೆಯಾದರೆ. ನೆನಪುಗಳ ಸಾಲಿನಲ್ಲಿ ಬಂದ ಮತ್ತೊಂದು ಚಿತ್ರ 'ಸವಿಸವಿ ನೆನಪು' ಚಿತ್ರದ್ದು ಮತ್ತೊಂದು ದುರಂತ ಕಥೆ. ಚಿತ್ರಕಥೆ, ನಿರ್ದೇಶನ, ನಟನೆ, ಛಾಯಾಗ್ರಹಣ ಎಲ್ಲ ಅತ್ಯುತ್ತಮ ಮಟ್ಟದ್ದು. ಹೃದಯಕ್ಕೆ ಸಂಬಂಧಿಸಿದ ಚಿತ್ರ ಬೇರೆ. ಆರಂಭದಲ್ಲಿ ಜನರಿಗೂ ಹತ್ತಿರವಾಯಿತು. ಆದರೆ ಮಧ್ಯದಲ್ಲೇ ಹೃದಯಾಘಾತವಾಯಿತು. ಈಗ ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡು ಕುಟುಕು ಜೀವ ಹಿಡಿದುಕೊಂಡು ಸಪ್ನ ಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ.

ಪ್ರಿಯಾಹಾಸನ್ ಅವರ 'ಜಂಬದ ಹುಡುಗಿ' ಮತ್ತು ಜಗ್ಗೇಶ್ ಅವರ ಮಹತ್ವಾಕಾಂಕ್ಷೆಯ ರಿಮೇಕ್ ಚಿತ್ರ 'ಮನ್ಮಥ' ಕೂಡ ಇದೇ ದಾರಿ ಹಿಡಿದಿವೆ. ಚಿತ್ರಮಂದಿರದಿಂದ ಬಲವಂತವಾಗಿ ಕಿತ್ತುಹಾಕಲಾಯಿತು ಎಂದು ಪ್ರಿಯಾಹಾಸನ್ ಬೊಬ್ಬೆ ಹೊಡೆದಿದ್ದರು. ಜಗ್ಗೇಶ್ ಅವರ ವರ್ಚಸ್ಸಿನಿಂದಾಗಿ 'ಮನ್ಮಥ' ಚಿತ್ರಕ್ಕೆ ಮೇನಕಾದಂಥ ಚಿತ್ರಮಂದಿರ ಸಿಕ್ಕಿತ್ತು. ಎಲ್ಲಾ ಇದ್ದೂ ಏನೂ ಇಲ್ಲದಂಥಹ ಸ್ಥಿತಿ ಈಗ ಮನ್ಮಥಕ್ಕೆ ದಕ್ಕಿದೆ. ರಿಮೇಕ್ ಚಿತ್ರಗಳ ಹಣೆಬರಹವೇ ಇಷ್ಟು ಎಂದುಕೊಳ್ಳುವ ಹಾಗೂ ಇಲ್ಲ. ತಮಿಳಿನಿಂದ ಮಕ್ಕಿಕಾಮಕ್ಕಿ ಕಾಪಿಯಾಗಿರುವ ಸ್ವಂತದ್ದೂ ಏನೂ ಇಲ್ಲದ 'ಚೆಲುವಿನ ಚಿತ್ತಾರ' ಹಣದ ಪ್ರವಾಹವನ್ನೇ ಹರಿಸಿದೆ. ಮುಂಗಾರು ಮಳೆಯನ್ನೂ ಮೀರಿಸಿಬಿಟ್ಟಿದೆ!

ಕನ್ನಡ ಚಿತ್ರಗಳಿಗೆ ಇರುವುದೇ ನಾಲ್ಕಾರು ಚಿತ್ರಮಂದಿರಗಳು. ಅವುಗಳಲ್ಲಿ ಹಣದ ಮಳೆಯನ್ನು ಸುರಿಸುತ್ತಿರುವ ಚಿತ್ರಗಳದ್ದು ಅಥವ ಹಣ, ವರ್ಚಸ್ಸಿನ ಬಲವಿದ್ದವರದ್ದೇ ರಾಜ್ಯಭಾರ. ನಿರ್ಮಾಪಕನ ಗುಂಡಿಗೆ ಗಟ್ಟಿಯಾಗಿದ್ದರೆ ನಿಂತುಕೊಳ್ಳುತ್ತದೆ ಇಲ್ಲದಿದ್ದರೆ ಅನ್ಯಮಾರ್ಗವಿಲ್ಲದೆ ಹೊಸ ಚಿತ್ರಕ್ಕೆ ದಾರಿಮಾಡಿಕೊಡಬೇಕು.

ಎಲ್ಲ ಚಿತ್ರಗಳೂ ಸಿಲ್ವರ್ ಜ್ಯೂಬಿಲಿ ಆಚರಿಸಿಕೊಳ್ಳಬೇಕು, ಯಾವ ಚಿತ್ರವೂ ಎತ್ತಂಗಡಿಯಾಗಬಾರದು. ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂಬಂಥ ಸ್ಥಿತಿಯಲ್ಲಿವೆ ಕನ್ನಡ ಚಿತ್ರಗಳು.

;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada