ದಾಖಲೆ ಬೆಲೆಗೆ ಚಾಲೆಂಜಿಂಗ್ ಸ್ಟಾರ್ ಪ್ರಿನ್ಸ್ ಮಾರಾಟ
ಸುದೀರ್ಘ ಸಮಯದ ಬಳಿಕ ದರ್ಶನ್ ಅಭಿನಯದ 'ಪ್ರಿನ್ಸ್' ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರದ ವಿತರಣೆ ಹಕ್ಕುಗಳು ದಾಖಲೆ ಮಾರಾಟವಾಗಿರುವುದು ಗಾಂಧಿನಗರದಲ್ಲಿ ಚರ್ಚೆಯ ವಿಷಯವಾಗಿದೆ. ದರ್ಶನ್ ಜೊತೆ ನಿಖಿತಾ ಹಾಗೂ ಜೆನ್ನಿಫರ್ ಕೊತ್ವಾಲ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ.
ಸಾಮಾನ್ಯವಾಗಿ ದರ್ಶನ್ ಚಿತ್ರಗಳಿಗೆ ಮೈಸೂರು ಹಾಗೂ ಉತ್ತರ ಕರ್ನಾಟಕದಲ್ಲಿ ಬಲು ಬೇಡಿಕೆ ಇದೆ. ಮೂಲಗಳ ಪ್ರಕಾರ ಈ ಭಾಗದ 'ಪ್ರಿನ್ಸ್' ವಿತರಣೆ ಹಕ್ಕುಗಳು ರು.1 ಕೋಟಿಗೆ ಮಾರಾಟವಾಗಿವೆಯಂತೆ. ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಬೆಂಗಳೂರು ವಿತರಣೆ ಹಕ್ಕುಗಳನ್ನು ತಮ್ಮ ಎಂದಿನ ವಿತರಕ ಜಯಣ್ಣ ಅವರಿಗೆ ನೀಡಿದ್ದಾರೆ.
ಚಿತ್ರದ ನಿರ್ಮಾಪಕರು ಕಮಿಷನ್ ಬೇಸಿಸ್ ಮೇಲೆ ವಿತರಣೆ ಹಕ್ಕುಗಳನ್ನು ಮಾರಾಟ ಮಾಡಿದ್ದು ಭಾರಿ ಲಾಭವನ್ನು ನಿರೀಕ್ಷಿಸಲಾಗಿದೆ. ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಶಿವಮೊಗ್ಗ ವಿತರಣೆ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ. ಅಂದಹಾಗೆ ಈ ಚಿತ್ರದ ಬಹುತೇಕ ಭಾಗ ಬೆಂಗಳೂರಿನಲ್ಲಿ ಚಿತ್ರೀಕರಿಸಿರುವುದು ವಿಶೇಷ.


Click it and Unblock the Notifications











