»   »  'ತವರಿನ ಋಣ' ತೀರಿಸಲು ಪೂಜಾಗಾಂಧಿ ಸಿದ್ಧ

'ತವರಿನ ಋಣ' ತೀರಿಸಲು ಪೂಜಾಗಾಂಧಿ ಸಿದ್ಧ

Subscribe to Filmibeat Kannada

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತವರಿಗೆ ಸಂಬಂಧಿಸಿದ ಅನೇಕ ಚಿತ್ರಗಳು ಬಿಡುಗಡೆಯಾಗಿವೆ. ಆ ಸಾಲಿಗೆ ಇದೀಗ ಹೊಸದಾಗಿ 'ತವರಿನ ಋಣ' ಸೇರ್ಪಡೆಯಾಗುತ್ತಿದೆ. ಮಹಿಳಾ ಪ್ರೇಕ್ಷಕರ ಕಣ್ಣೀರೆ ಈ ಚಿತ್ರಗಳ ಪಾಲಿಗೆ ಪನ್ನೀರು! ತವರಿನ ಋಣ ತೀರಿಸಲು ಪೂಜಾಗಾಂಧಿ ಬರುತ್ತಿದ್ದಾರೆ.

ತವರಿನ ಋಣ ಚಿತ್ರದಲ್ಲಿ ನಟಿಸುವ ಮೂಲಕ ಅಳುಮುಂಜಿ ಪಾತ್ರಗಳಿಗೆ ಹೆಸರಾಗಿದ್ದ ಶ್ರುತಿ, ಸಿತಾರ ಸಾಲಿನಲ್ಲಿ ಇದೀಗ ಹೊಸದಾಗಿ ಪೂಜಾಗಾಂಧಿ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬುಧವಾರ ಮುಂಜಾನೆ 'ತವರಿನ ಋಣ' ಸೆಟ್ಟೇರಿತು.

ಹೊಸ ಜಿಲ್ಲೆ ಚಿಕ್ಕಬಳ್ಳಾಪುರದ ಗೆಳೆಯರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವರದರಾಜು ಮತ್ತು ಶ್ರೀರಾಮುಲು ಈ ಚಿತ್ರದ ನಿರ್ಮಾಪಕರು. ಚಿಕ್ಕಬಳ್ಳಾಪುರ ಜಿಲ್ಲೆಯವರೇ ಆದ ರಮೇಶ್ ರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ನಾಯಕ ನಟ ಪರಮೇಶ್ ಸಹ ಸದರಿ ಜಿಲ್ಲೆಯವರು ಎಂಬುದು ಮತ್ತೊಂದು ವಿಶೇಷ.

ಈ ಚಿತ್ರದಲ್ಲಿ ರಾಜಕಾರಣಿಯಾಗಿ ತಬಲಾ ನಾಣಿ ಹಾಗೂ ಖಳನಾಯಕನಾಗಿ ಮುನಿ ಕಾಣಿಸಲಿದ್ದಾರೆ. ನಿರ್ಮಾಪಕರಲ್ಲಿ ಒಬ್ಬರಾದ ಶ್ರೀರಾಮುಲು ಚಿತ್ರದಲ್ಲಿ ಎರಡನೇ ನಾಯಕ ನಟ. ಪಾತ್ರವರ್ಗದಲ್ಲಿ ಕೃಷ್ಣೇಗೌಡ, ಗಿರಿಜಾ ಲೋಕೇಶ್, ಆಶಾರಾಣಿ ಇದ್ದಾರೆ.

ಚಿತ್ರೀಕರಣ 35 ದಿನಗಳ ಕಾಲ ಬೆಂಗಳೂರು, ಸಕಲೇಶಪುರ, ತೀರ್ಥಹಳ್ಳಿ ಸುತ್ತಮುತ್ತ ನಡೆಯಲಿದೆ. ಸಂಗೀತ ಸಂಯೋಜನೆ ಅಭಿಮಾನ್ ರಾಯ್ ಹಾಗೂ ಛಾಯಾಗ್ರಹಣ ಜಗದೀಶ್ ವಾಲಿ. ಡಾ.ವಿಷ್ಣುವರ್ಧನ್ ಮತ್ತು ಸಿತಾರ ನಟಿಸಿದ್ದ 'ಹಾಲುಂಡ ತವರು' ಚಿತ್ರಕ್ಕೂ ನಮ್ಮ 'ತವರಿನ ಋಣ' ಚಿತ್ರಕ್ಕೂ ಎಲ್ಲೂ ಸಾಮ್ಯತೆ ಇರುವುದಿಲ್ಲ ಎನ್ನುತ್ತಾರೆ ನಿರ್ದೇಶಕ ರಮೇಶ್ ರಾಜ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada