»   » ಸಿನೆಮಾದಲ್ಲಿ ಮಿಂಚುತ್ತಿರುವ ಧಾರವಾಡದ ಬಾಲಪ್ರತಿಭೆ

ಸಿನೆಮಾದಲ್ಲಿ ಮಿಂಚುತ್ತಿರುವ ಧಾರವಾಡದ ಬಾಲಪ್ರತಿಭೆ

Posted By: * ಶಂಭು ನಾಗನೂರಮಠ
Subscribe to Filmibeat Kannada
Talented child artist Sanjana from Dharwad
ಈ ಹಿಂದೆ ತಮಿಳು ಬಾಲನಟಿ ಬೇಬಿ ಶ್ಯಾಮಿಲಿ ಭಾರತೀಯ ಚಲನಚಿತ್ರರಂಗದಲ್ಲಿ ಮಾಡಿದ ಮೋಡಿ ಎಲ್ಲರಿಗೂ ಇನ್ನು ನೆನಪಿನಲ್ಲಿರಬಹುದು. ಹೌದು, ಮನಸೆಳೆವ ನಟನಾ ಸಾಮರ್ಥ್ಯ ಪಡೆದಿದ್ದ ಬೇಬಿ ಶ್ಯಾಮಿಲಿ ಎಲ್ಲರಿಗೂ ಅಚ್ಚುಮೆಚ್ಚಿನ ಮಗುವಾಗಿದ್ದಳು. ಎಷ್ಟೋ ಜನ ತಮ್ಮ ಮಕ್ಕಳಿಗೆ ಶ್ಯಾಮಿಲಿ ಎಂದೇ ಹೆಸರಿಟ್ಟಿದ್ದರು. ಅಲ್ಲದೇ ಹೆಣ್ಣು ಮಗು ಎಂದರೆ ಮೂಗು ಮುರಿಯುತ್ತಿದ್ದ ಜನ ಬೇಬಿ ಶ್ಯಾಮಿಲಿಯ ನಟನೆ ನೋಡಿ ನಮಗೂ ಹೆಣ್ಣು ಮಗುವಾಗಲಿ ಎಂದು ಬೇಡಿಕೊಳ್ಳುತ್ತಿದ್ದರು.

ಈಗ ಬೇಬಿ ಶ್ಯಾಮಿಲಿಯ ಹಾದಿಯಲ್ಲಿ ನಮ್ಮ ಪೇಡಾ ನಗರಿ ಧಾರವಾಡದ ಬಾಲನಟಿ ಸಂಜನಾ ಸಾಗುತ್ತಿದ್ದಾಳೆ. ಸದ್ಯ 5ನೇ ತರಗತಿಯಲ್ಲಿ ಓದುತ್ತಿರುವ ಸಂಜನಾ ಈಜು, ಸೈಕ್ಲಿಂಗ್, ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಕರಾಟೆ, ಯೋಗಾಸನ, ಫ್ಯಾಷನಿಂಗ್ ಮುಂತಾದ ವಿವಿಧ ಕಲೆಗಳನ್ನು ಸಿದ್ಧಿಸಿಕೊಂಡಿದ್ದಾಳೆ.

ಈಗಾಗಲೇ ಕನ್ನಡದ ಖ್ಯಾತ ನಟರಾದ ಎಸ್.ನಾರಾಯಣ್, ಜಗ್ಗೇಶ್, ರಮೇಶ ಅರವಿಂದ್, ಪೂಜಾ ಗಾಂಧಿ, ಮೀನಾ ಮತ್ತಿತರರೊಂದಿಗೆ ನಟಿಸಿ ಸೈ ಎನಿಸಿಕೊಂಡು ಮುಂಬರುವ ದಿನಗಳಲ್ಲಿ ಚಲನಚಿತ್ರರಂಗದಲ್ಲಿ ಮಿಂಚುವ ತಾರೆಯಾಗಿ ಹೊರಹೊಮ್ಮುವ ಸೂಚನೆ ನೀಡಿದ್ದಾಳೆ. ತನ್ನ 10ನೇ ವಯಸ್ಸಿನಲ್ಲಿಯೇ ಚಿಕ್ಕಪೇಟೆ ಸಾಚಾಗಳು, ನೀ ಇಲ್ಲದೇ, ಆಪ್ತ, ಹೃದಯಂ (ತೆಲುಗು) ಮತ್ತಿತರರ ಚಲನಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ.

ಇತ್ತ ವಿದ್ಯಾಭ್ಯಾಸದೊಂದಿಗೆ ಬಿಡುವಿನ ವೇಳೆಯಲ್ಲಿ ಮೆಗಾ ಧಾರಾವಾಹಿಗಳಾದ ಪಾಯಿಂಟ್ ಪರಿಮಳಾ, ಪಾರ್ವತಿ ಪರಮೇಶ್ವರ, ಅಣ್ಣ- ತಂಗಿ ಮತ್ತಿತರ ಧಾರಾವಾಹಿಗಳಲ್ಲೂ ನಟಿಸುತ್ತ ಮನೆ ಮನೆಗಳಲ್ಲಿ ಅಚ್ಚುಮೆಚ್ಚಿನ ಮಗಳಾಗಿದ್ದಾಳೆ. ಜೊತೆಗೆ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿರುವ ಸಂಜನಾ ಎರಡು ಜಾಹೀರಾತುಗಳಲ್ಲಿ ನಟಿಸಿದ್ದಾಳೆ.

ಎಲ್ಲದಕ್ಕೂ ನನ್ನ ತಂದೆ ಬಸವರಾಜ ಅವರೇ ನನಗೆ ಸ್ಫೂರ್ತಿ ಎನ್ನುವ ಸಂಜನಾ, ನಟಿಸಲು ಆರಂಭಿಸಿದ್ದು ತನ್ನ 3ನೇ ವಯಸ್ಸಿನಲ್ಲಿ. ಮೂಲತಃ ಕೃಷಿಕರಾದ ಸಂಜನಾ ತಂದೆ ಬಸವರಾಜ ಅವರು ಇವಳಿಗೆ ವಿದ್ಯಾಭ್ಯಾಸ ಮತ್ತು ನಟನೆಗೆ ಅನುಕೂಲವಾಗಲಿ ಎಂದು ತಮ್ಮನ್ನೇ ಮುಡಿಪಾಗಿಟ್ಟುಕೊಂಡಿದ್ದಾರೆ.

ತೆಲಗು ಚಿತ್ರರಂಗ ಮತ್ತು ತಮಿಳು ಚಿತ್ರರಂಗದಲ್ಲಿ ಹಲವಾರು ಅವಕಾಶಗಳು ಕೈ ಬೀಸಿ ಕರೆಯುತ್ತಿದ್ದರೂ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಮುಂದಿನ ದಿನಗಳಲ್ಲಿ ನೋಡುತ್ತೇವೆ ಎನ್ನುತ್ತಾರೆ ಬಸವರಾಜ. ಚಲನಚಿತ್ರ ರಂಗದಲ್ಲಿ ಕಲೆಗೆ ಬೆಲೆ ಇದ್ದೇ ಇದೆ ಎನ್ನುವ ಬಸವರಾಜ ಅವರು, ಕನ್ನಡದಲ್ಲಿ ಬಾಲನಟಿಯರ ಕೊರತೆ ಎದ್ದು ಕಾಣುತ್ತಿದೆ, ಅದಕ್ಕಾಗಿಯೇ ನಾನು ನನ್ನ ಮಗಳನ್ನು ಪ್ರೋತ್ಸಾಹಿಸುತ್ತಿದ್ದೇನೆ ಎನ್ನುತ್ತಾರೆ.

ಬೆಳೆದ ಕಲಾವಿದರನ್ನು ಪ್ರೋತ್ಸಾಹಿಸುವುದು, ಬೆಂಬಲಿಸುವುದು, ಅಭಿಮಾನಿಗಳಾಗುವುದು ಸಹಜ, ಆದರೆ ಬೆಳೆಯಬೇಕಿರುವ ಸಂಜನಾ (9448301581) ನಂತಹ ಬಾಲನಟಿಯರನ್ನು ಪ್ರೋತ್ಸಾಹಿಸಿ ಅಭಿನಂದಿಸುವುದು ನಿಜವಾದ ಕಲಾಪ್ರೇಮಿಗಳ ಲಕ್ಷಣ ಎನ್ನಬಹುದು.

English summary
Talented child artist Sanjana from Dharwad is multi-faceted personality. She has excelled in acting, studies, dance, extra curricular activities, yoga etc. Baby Sanjana has acted in many Kannada movies including Chikkapete Sachagalu and few Kannada serials. Oneindia Kannada wisher her all the best.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X