»   » ರಮ್ಯಾಗೆ ಹುಟ್ಟುಹಬ್ಬದ ಶುಭಾಶಯಗಳು

ರಮ್ಯಾಗೆ ಹುಟ್ಟುಹಬ್ಬದ ಶುಭಾಶಯಗಳು

Subscribe to Filmibeat Kannada

ಕನ್ನಡ ಚಿತ್ರಗಳ ನಂದಿನಿ, ಗೌರಿ, ರೀಮಾ, ಪದ್ಮಾ, ಅಂಜಲಿ, ಭಾನು, ದಿವ್ಯಾ, ವನಜಾ, ಶ್ರುತಿ, ಶಾಲಿನಿ, ಪ್ರಿಯಾ, ಸ್ಪಂದನಾ, ತನೂ...ಹೀಗೆ ನಾನಾ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ನಟಿ ರಮ್ಯಾ. ಇಷ್ಟೆಲ್ಲಾ ಹೇಳಲು ಕಾರಣ ಇಂದು (ನ.29) ರಮ್ಯಾ ಹುಟ್ಟುಹಬ್ಬ; ಇಪ್ಪತ್ತೆಂಟಕ್ಕೆ ಅಡಿಯಿಟ್ಟಿದ್ದಾರೆ.

ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಆಚರಿಸಿಕೊಂಡರು. ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿಕೊಂಡರು. ಚಿತ್ರೋದ್ಯಮದ ಹಲವು ಗಣ್ಯರು, ನಿರ್ಮಾಪಕರು, ಅಭಿಮಾನಿಗಳು ಆಗಮಿಸಿ ಶುಭಾಶಯ ಕೋರಿದರು.

ಈ ಶುಭ ಸಂದರ್ಭದಲ್ಲಿ ರಮ್ಯಾ ತಮ್ಮ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯದ ವೈದ್ಯ ಡಾ.ಭುಜರಂಗಶೆಟ್ಟಿ ಅವರಿಗೆ ಕಣ್ಣುಗಳನ್ನು ದಾನ ಮಾಡುವ ಪತ್ರಗಳನ್ನು ನೀಡಿದರು. ಸಮಾರಂಭದಲ್ಲಿ ನಿರ್ದೇಶಕ ಗುರುದತ್, ನಿರ್ಮಾಪಕ ಕೆ ಮಂಜು, ರೂಪ ಅಯ್ಯರ್ ಮುಂತಾದ ಕಲಾವಿದರು ಭಾಗವಹಿಸಿದ್ದರು.

ವಿವಾದಗಳಿಗೂ ರಮ್ಯಾಗೂ ಅವಿನಾಭಾವ ಸಂಬಂಧ! ಕಾರಣ ಏನೇ ಇರಲಿ, ರಮ್ಯಾ ಅಭಿನಯದ ಕೆಲವು ಚಿತ್ರಗಳು ಇನ್ನೂ ಡಬ್ಬಾದಲ್ಲೇ ಕೊಳೆಯುತ್ತಿವೆ. ಸಾಕಷ್ಟು ಚಿತ್ರಗಳಲ್ಲಿ ರಮ್ಯಾ ಬ್ಯುಸಿಯಾಗಿದ್ದರೂ ಬಿಡುಗಡೆಯಾದ ಕೊನೆಯ ಚಿತ್ರ 'ಅಂತೂ ಇಂತೂ ಪ್ರೀತಿ ಬಂತು' ಎಂದರೆ ಆಶ್ಚರ್ಯಪಡಬೇಕಿಲ್ಲ.

ಅಂತೂ ಇಂತೂ...ನಂತರ ಒಂದೂವರೆ ವರ್ಷ ಕಳೆದುಹೋಗಿದೆ, ರಮ್ಯಾ ನಟನೆಯ ಒಂದೇ ಒಂದು ಚಿತ್ರವೂ ಬಿಡುಗಡೆ ಭಾಗ್ಯ ಕಂಡಿಲ್ಲ. ಆದರೆ ಸದಾ ಒಂದಿಲ್ಲೊಂದು ಚಿತ್ರಗಳಿಂದ ಮಾತ್ರ ಸುದ್ದಿ ಮಾಡುತ್ತಲೇ ಇದ್ದಾರೆ. ಆಕೆ ನಟನೆಯ ಐದು ಕನ್ನಡ ಚಿತ್ರಗಳು ಬಿಡುಗಡೆಗೆ ಕಾದಿವೆ.

ರಮ್ಯಾ ಅಭಿನಯಿಸುತ್ತಿರುವ 'ಉಲ್ಲಾಸ' ಚಿತ್ರ ಅರ್ಧಕ್ಕೇ ನಿಂತು ಹೋಗಿದೆ. ಅದು ಬಿಡುಗಡೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಅಶ್ವಿನಿ ರಾಂ ಪ್ರಸಾದ್ ನಿರ್ಮಾಣದ 'ಜೊತೆಗಾರ' ಚಿತ್ರ ಕಾರಣಾಂತರಗಳಿಂದ ಬಿಡುಗಡೆಗೆ ಕಾಣದೆ ಒದ್ದಾಡುತ್ತಿದೆ. ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರದ ಕತೆಯೂ ಅಷ್ಟೇ!

ಕಿಚ್ಚಹುಚ್ಚ, ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳು ಚಿತ್ರೀಕರಣದ ನಂತರದ ಕೆಲಸಗಳಲ್ಲಿವೆ. ಸದ್ಯಕ್ಕೆ ಸಂಜು ವೆಡ್ಸ್ ಗೀತಾ ಮತ್ತು ನಾನು ನನ್ನ ಕನಸು ಚಿತ್ರಗಳಲ್ಲಿ ರಮ್ಯಾ ಅಭಿನಯಿಸುತ್ತಿದ್ದಾರೆ. ಪ್ರಕಾಶ್ ರೈ ನಿರ್ದೇಶನದ 'ನಾನು ನನ್ನ ಕನಸು' ಚಿತ್ರ ರಮ್ಯಾ ಪಾಲಿಗೆ ಈ ವರ್ಷ ಒಲಿದು ಬಂದಿದ್ದು ವಿಶೇಷ.

ರಮ್ಯಾ ಮತ್ತಷ್ಟು ಸದಭಿರುಚಿಯ ಚಿತ್ರಗಳಲ್ಲಿ ನಟಿಸಲಿ. ಆಕೆ ಅಭಿನಯದ ಚಿತ್ರಗಳು ಶೀಘ್ರ ತೆರೆಕಾಣಲಿ ಎಂದು ಆಶಿಸೋಣ. ರಮ್ಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ನೆಚ್ಚಿನ ನಟಿ ರಮ್ಯಾಗೆ ಹ್ಯಾಪಿ ಬರ್ತ್ ಡೇ ಟೂ ಯೂ ರಮ್ಯಾ ಎಂದು ಹೇಳಿಬಿಡಿ!

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada