ಕನ್ನಡಕ್ಕೆ ಶೀಘ್ರದಲ್ಲೆ ಮತ್ತೊಬ್ಬ ಹ್ಯಾಟ್ರಿಕ್ ಹೀರೋ
ಕನ್ನಡ ಚಿತ್ರರಂಗಕ್ಕೆ ಶೀಘ್ರದಲ್ಲೆ ಮತ್ತೊಬ್ಬ ಹ್ಯಾಟ್ರಿಕ್ ಹೀರೋ ಆಗಮವಾಗಲಿದೆ. ಹ್ಯಾಟ್ರಿಕ್ ಹೀರೋ ಯಾರು ಎಂದರೆ ಸಣ್ಣ ಮಕ್ಕಳು ಕೂಡ ಶಿವರಾಜ್ ಕುಮಾರ್ ಅಂಥ ಥಟ್ ಎಂದು ಹೇಳುತ್ತವೆ. ಈಗ ಶಿವಣ್ಣ ನೂರರ ಸರದಾರ. ಸೆಂಚುರಿ ಸ್ಟಾರ್. ಅವರಿಗೂ ಹ್ಯಾಟ್ರಿಕ್ ಹೀರೋ ಎಂದು ಕರೆಸಿಕೊಂಡೂ ಕರೆಸಿಕೊಂಡು ಬೇಜಾರಾಗಿದೆ.
ಆದರೆ ಈ ಬೇಜಾರಿನಲ್ಲಿ ಶಿವಣ್ಣ ತಮ್ಮ ಬಿರುದಾವಳಿಯನ್ನು ಬಿಟ್ಟುಕೊಡುತ್ತಿಲ್ಲ. ಹ್ಯಾಟ್ರಿಕ್ ಹೀರೋ ಎಂಬ ಬಿರುದನ್ನು ಮತ್ತೊಬ್ಬ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಲಂಕರಿಸುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಹೆಚ್ಚೇನು ಇಲ್ಲ 2011ಕೊನೆವರೆಗೆ ಅಷ್ಟೆ.
ಪುನೀತ್ ರಾಜ್ ಕುಮಾರ್ ಈಗಾಗಲೆ ಸತತ ಎರಡು ಹಿಟ್ ಚಿತ್ರಗಳನ್ನು ದಾಖಲಿಸಿದ್ದಾರೆ. ಒಂದು 'ಜಾಕಿ' ಮತ್ತೊಂದು 'ಹುಡುಗರು'. ಈಗ ಸಿದ್ಧವಾಗುತ್ತಿರುವ 'ಪರಮಾತ್ಮ' ಚಿತ್ರವೂ ಹಿಟ್ ಆದರೆ ಹ್ಯಾಟ್ರಿಕ್ ಹೀರೋ ಟೈಟರ್ ಪುನೀತ್ ಪಾಲಾಗುತ್ತದೆ. ಯೋಗರಾಜ್ ಭಟ್ಟರ 'ಪರಮಾತ್ಮ' ಹಿಟ್ ಆಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವೂ ಉಳಿದಿಲ್ಲ.
ಒಟ್ಟಿನಲ್ಲಿ ಇದೊಂದು ರೀತಿ ಅಪರೂಪದಲ್ಲಿ ಅಪರೂಪದ ಪ್ರಸಂಗ. ಅಣ್ಣನ ಹೆಸರಿನಲ್ಲಿರುವ ಬಿರುದು ತಮ್ಮ ಪಾಲಾಗುತ್ತಿರುವುದು. ಆನಂದ್, ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರಗಳ ಮೂಲಕ ಶಿವಣ್ಣ ಹ್ಯಾಟ್ರಿಕ್ ಹೀರೋ ಪಟ್ಟ ಅಲಂಕರಿಸಿದ್ದರು. ಈಗ ಅದೇ ಬಿರುದು ತಮ್ಮನ ಪಾಲಾಗುವ ಸಮಯ ಬಂದಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











