»   »  ಮೈಸೂರಿನಲ್ಲಿ ನಕಲಿ ಸಿಡಿ ವಿರುದ್ಧ ಸಿಂಹ ಗರ್ಜನೆ

ಮೈಸೂರಿನಲ್ಲಿ ನಕಲಿ ಸಿಡಿ ವಿರುದ್ಧ ಸಿಂಹ ಗರ್ಜನೆ

Posted By:
Subscribe to Filmibeat Kannada

ಮೈಸೂರಿನಲ್ಲಿ ನಕಲಿ ಸಿಡಿಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಕನ್ನಡ ಚಿತ್ರೋದ್ಯಮ ಪೈರಸಿ ತಡೆಗೆ ಏನೆಲ್ಲಾ ಬೊಬ್ಬೆ ಹೊಡೆಯುತ್ತಿದ್ದರೂ ನಕಲಿ ಸಿಡಿ ಹಾವಳಿ ಮಾತ್ರ ಪೆಡಂಭೂತವಾಗಿ ಕಾಡುತ್ತಿದೆ. ನಕಲಿ ಸಿಡಿ ಹಾವಳಿ ವಿರುದ್ಧ ಡಾ.ವಿಷ್ಣುವರ್ಧನ್ ಅವರನ್ನೊಳಗೊಂಡ ಕಲಾವಿದರ ತಂಡ ಮೈಸೂರಿನಲ್ಲಿ ಸೋಮವಾರ ಸಿಂಹ ಗರ್ಜನೆ ಮಾಡಿತು.

ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರನ್ನೊಳಗೊಂಡ 20 ಮಂದಿ ತಂಡದೊಂದಿಗೆ ಹಿರಿಯ ನಟ ವಿಷ್ಣುವರ್ಧನ್ ಮೈಸೂರು ನಗರ ಪೊಲೀಸ್ ಆಯುಕ್ತ ಸುನಿಲ್ ಅಗರವಾಲ್ ರನ್ನು ಸೋಮವಾರ ಭೇಟಿ ಮಾಡಿದರು. ನಕಲಿ ಸಿಡಿಗಳ ಕಾನೂನು ಬಾಹಿರ ಮಾರಾಟವನ್ನು ತಡೆಗಟ್ಟಿ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಉಪ ಪೊಲೀಸ್ ಆಯುಕ್ತ ವಿ ಎಸ್ ಡಿಸೋಜ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಟರಾದ ರಮೇಶ್ ಅರವಿಂದ್, ಜೈ ಜಗದೀಶ್, ಶಿವರಾಮ್, ಸಹ ಕಲಾವಿದರು ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿಗಳು ವಿಷ್ಣು ಜತೆಗಿದ್ದರು. ಕನ್ನಡ ಚಿತ್ರ ಬಿಡುಗಡೆಯಾದ ಕೂಡಲೆ ನಕಲಿ ಸಿಡಿಗಳು ಮಾರುಕಟ್ಟೆಗೆ ಬರುತ್ತಿವೆ. ಮೈಸೂರು ನಕಲಿ ಸಿಡಿ ತಯಾರಿಕೆಯ ಕೇಂದ್ರವಾಗಿದೆ. ಇಲ್ಲಿ ತಯಾರಾದ ನಕಲಿ ಸಿಡಿಗಳು ಕೊಳ್ಳೆಗಾಲ, ಮಂಗಳೂರು ಮತ್ತು ತುಮಕೂರಿಗೆ ರವಾನೆಯಾಗುತ್ತಿವೆ ಎಂದು ನಟ ವಿಷ್ಣುವರ್ಧನ್ ಗರ್ಜಿಸಿದರು.

ಸಾಂಸ್ಕೃತಿಕ ರಾಜಧಾನಿ ಎಂದು ಹೆಸರು ಗಳಿಸಿರುವ ಮೈಸೂರಿನಲ್ಲೇ ಪರಿಸ್ಥಿತಿ ಹೀಗಾದರೆ ಹೇಗೆ? ಇನ್ನು ವಿಡಿಯೋ ಪೈರಸಿ ಕನ್ನಡಚಿತ್ರರಂಗವನ್ನು ಕಿತ್ತು ತಿನ್ನುತ್ತಿದೆ. ಇದರಿಂದ ಚಿತ್ರರಂಗವನ್ನೇ ನಂಬಿಕೊಂಡಿರುವ ತಂತ್ರಜ್ಞರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು ವಿಷ್ಣು.

ಕಲಾವಿದರ ಮನವಿಗೆ ತಕ್ಷಣ ಸ್ಪಂದಿಸಿದ ಅಗರವಾಲ್ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ವಿಷ್ಣು ಮಾತನಾಡುತ್ತಾ, ತಳ್ಳು ಗಾಡಿಗಳಲ್ಲಿ ತರಕಾರಿ ಮಾರಾಟ ಮಾಡಿದಂತೆ ಅತ್ಯಂತ ಕಡಿಮೆ ಬೆಲೆಗೆ ನಕಲಿ ಸಿಡಿಗಳನ್ನು ಮಾರಲಾಗುತ್ತಿದೆ. ಇದನ್ನು ತಡೆಗಟ್ಟುವುದು ಎಲ್ಲರ ಕರ್ತವ್ಯ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada